Advertisement

ರಾಜ್ಯದ ವಿವಿಧೆಡೆ ಬಿಜೆಪಿ ನಾಯಕರ ಸ್ಲಂ ವಾಸ್ತವ್ಯ

06:10 AM Feb 11, 2018 | Team Udayavani |

ಬೆಂಗಳೂರು: ರಾಜ್ಯವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೊಳಗೇರಿ ನಿವಾಸಿಗಳ ಮತ ಸೆಳೆಯುವ ಉದ್ದೇಶದಿಂದ ರಾಜ್ಯ ಬಿಜೆಪಿ ನಾಯಕರು ರಾಜಧಾನಿ ಬೆಂಗಳೂರಿನ ಸ್ಲಂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕೊಳಗೇರಿಯಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದಾರೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆಗೂ ಮೊದಲು ರಾಜ್ಯಾದ್ಯಂತ ದಲಿತರ ಮನೆಗೆ ಭೇಟಿ ನೀಡಿ ಊಟ, ಉಪಹಾರ ಸ್ವೀಕರಿಸುವ ಮೂಲಕ ದಲಿತ ಮತವನ್ನು ಬಿಜೆಪಿಯತ್ತ ಸೆಳೆಯುವ ಕಾರ್ಯಕ್ರಮ ನಡೆಸಿದ್ದರು. ಕೊಳಗೇರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮತ ಸೆಳೆಯಲು ರಾಜ್ಯ ಬಿಜೆಪಿ ಈಗ ಸ್ಲಂ ವಾಸ್ತವ್ಯ ಮಾಡಿದೆ. ಮುಂದಿನ ದಿನಗಳಲ್ಲಿ ಒಬಿಸಿ ಮತ ಸೆಳೆಯಲು ಸರಣಿ ಸಮಾವೇಶ ನಡೆಸಲಿದೆ.

ಬೆಂಗಳೂರಿನ ಗಾಧಿನಗರದ ಲಕ್ಷ್ಮಣಪುರಿ ಕೊಳಗೇರಿಯಲ್ಲಿ ಬಿ.ಎಸ್‌. ಯಡಿಯೂರಪ್ಪ, ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದ ಸ್ಲಂನಲ್ಲಿ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಶಿವಮೊಗ್ಗದ ಎನ್‌.ಟಿ. ರಸ್ತೆಯ ಸ್ಲಂನಲ್ಲಿ  ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಮೈಸೂರಿನ ಕ್ಯಾತಮಾರನಹಳ್ಳಿ ಸ್ಲಂನಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ವಿಜಯಪುರ ನಗರದ ಸಮಗಾರ ಓಣಿಯ ಸ್ಲಂನಲ್ಲಿ ಹಿರಿಯ ನಾಯಕ ಗೋವಿಂದ ಕಾರಜೋಳ, ಬಳ್ಳಾರಿಯ ಶ್ರೀರಾಮ್‌ಪುರ ಕಾಲೋನಿ ಸ್ಲಂನಲ್ಲಿ  ಸಂಸದ ಶ್ರೀರಾಮುಲು, ಕೋಲಾರ ನಗರದ ಸ್ಲಂನಲ್ಲಿ  ಮಾಜಿ ವಿದಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ ವಾಸ್ತವ್ಯ ಮಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೊಳಗೇರಿಗಳಿಗೆ ಕಾಂಕ್ರಿಟ್‌ ರಸ್ತೆ ಮಾಡಿಸಲಾಗಿತ್ತು. ಕೊಳಗೇರಿ ನಿವಾಸಿಗಳಿಗೆ ಸುಮಾರು 48 ಸಾವಿರ ಮನೆ ನಿರ್ಮಿಸಿಕೊಡಲಾಗಿತ್ತು. ಹೀಗೆ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಹಾಗೂ ಕೇಂದ್ರದ ಮೋದಿ ಸರ್ಕಾರ ಕೊಳಗೇರಿ ನಿವಾಸಿಗಳ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಕೊಳಗೇರಿಯ ಮನೆ ಮನೆಗೂ ತಲುಪಿಸಲಿದ್ದಾರೆ.

ಸಮೀಕ್ಷೆ ವರದಿ ಬಿಡುಗಡೆ
ರಾಜ್ಯದ ವಿವಿಧ ಸ್ಲಂಗಳಲ್ಲಿ ವಾಸವಾಗಿರುವವರ‌ ಜನ ಜೀವನ, ನೀರಿನ ಸಮಸ್ಯೆ, ವಸತಿ ಸಮಸ್ಯೆ ಸೇರಿದಂತೆ ಅಲ್ಲಿನ  ಸ್ಥಿತಿಗತಿ ಕುರಿತು ಬಿಜೆಪಿ ಸ್ಲಂ ಮೋರ್ಚಾ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಭಾನುವಾರ ಬೆಳಗ್ಗೆ 9ಗಂಟೆಗೆ ಗಾಂಧಿನಗರದ ಲಕ್ಷ್ಮಣಪುರಿ  ಸ್ಲಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಬಿಡುಗಡೆ ಮಾಡಲಿದ್ದಾರೆ.

Advertisement

ಒಬಿಸಿ ಸಮಾವೇಶ:
ದಲಿತರ ಮನೆಗೆ ಭೇಟಿ, ಕೊಳಗೇರಿ ವಾಸ್ತವ್ಯದ ನಂತರ ಬಿಜೆಪಿ ರಾಜ್ಯದ ಒಬಿಸಿ ವರ್ಗದ ಮತೆ ಸೆಳೆಯಲು ಸರಣಿ ಸಮಾವೇಶ ನಡೆಸಲಿದೆ. ಮೇಲ್ಮನೆ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ನೇತೃತ್ವದಲ್ಲಿ ಸರಣಿ ಸಮಾವೇಶಗಳು ರಾಜ್ಯಾದ್ಯಂತ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next