Advertisement

ಬಿಜೆಪಿ ಬೆಳೆಯಲು ಅವಕಾಶ ಕೊಡಲ್ಲ

06:00 AM Oct 29, 2018 | Team Udayavani |

ರಾಮನಗರ: “ನೆಮ್ಮದಿಯಿಂದ ಪ್ರಾಣ ಬಿಡುವ ಆಶಯ ನನಗಿದೆ, ನಾನು ಹಠವಾದಿ, ಬಿಜೆಪಿ ಬೆಳೆಯಲು ಅವಕಾಶ ಕೊಡುವುದಿಲ್ಲ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ತಾಲೂಕಿನ ವಿವಿಧೆಡೆ ಭಾನುವಾರ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ರೋಡ್‌ ಶೋ ನಡೆಸಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಯವರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂದು ಹೊರಟಿದ್ದಾರೆ. ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆ ಯಬೇಕಾಗಿದೆ. ದೇಶದಲ್ಲಿ 45 ಕೋಟಿ ಮುಸಲ್ಮಾನರಿದ್ದಾರೆ. 25 ಕೋಟಿ ಕ್ರಿಶ್ಚಿಯನ್ನರಿದ್ದಾರೆ.

Advertisement

50 ವರ್ಷಗಳಿಂದ ಇಲ್ಲೇ ಬಾಳುತ್ತಿರುವವರನ್ನು ದೇಶದಿಂದ ಹೊರದಬ್ಬುವ ಪ್ರಯತ್ನಗಳು ನಡೆಯುತ್ತಿವೆ. ಅವರೆಲ್ಲಿ ಹೋಗಬೇಕು? ಅವರನ್ನೆಲ್ಲಿಗೆ ಕಳುಹಿಸಬೇಕು? ರಕ್ತದ ಕೋಡಿ ಹರಿಯಬೇಕಾ? ಅವರನ್ನು ರಕ್ಷಿಸಲೇಬೇಕಾಗಿದೆ ಎಂದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ 37 ಸ್ಥಾನಗಳನ್ನು ಗಳಿಸಿತ್ತು. ಆದರೆ, 78 ಸ್ಥಾನ ಗೆದ್ದ ಕಾಂಗ್ರೆಸ್‌ ಬೆಂಬಲ ನೀಡಿದ್ದರಿಂದ, ದೆಹಲಿ ಮುಖಂಡರು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದರಿಂದ  ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ದೇಶದ
29 ಪಕ್ಷಗಳು ಕುಮಾರಸ್ವಾಮಿಯವರು ಸಿಎಂ ಆಗಬೇಕು ಎಂದು ಬಯಸಿದ್ದವು. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಈ ಪಕ್ಷಗಳು ಭಾಗಿಯಾಗಿದ್ದೇ ಅದಕ್ಕೆ ಸಾಕ್ಷಿ. ಇದರಲ್ಲಿ ವೈಯಕ್ತಿಕ ಹೋರಾಟ ಏನಿಲ್ಲ. ಅಷ್ಟೇಕೆ, ನಾನು ಪ್ರಧಾನಿಯಾಗಿದ್ದು ಕೂಡ ಕಾಂಗ್ರೆಸ್‌ನ ಸಹಕಾರದಲ್ಲೇ ಎಂದರು.

ಉಪಚುನಾವಣೆ ಪ್ರಚಾರ ಕಣಕ್ಕೆ ಎಚ್‌ಡಿಡಿ 
ಬೆಂಗಳೂರು: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಭಾನುವಾರದಿಂದಲೇ ಮೈತ್ರಿ ಸರ್ಕಾರದ ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿದ್ದು, ಸೋಮವಾರ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೂಡಿ ಕಾಂಗ್ರೆಸ್‌ ಅಭ್ಯರ್ಥಿ ಪರ ಜಂಟಿ ಪ್ರಚಾರ ನಡೆಸಲಿದ್ದಾರೆ. ಲಂಡನ್‌ ಪ್ರವಾಸದಿಂದ ಭಾನುವಾರ ಬೆಂಗಳೂರಿಗೆ ಆಗಮಿಸಿದ ದೇವೇಗೌಡರು, ರಾಮನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಸೊಸೆ ಅನಿತಾ ಕುಮಾರಸ್ವಾಮಿ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಸೋಮವಾರ ಬಳ್ಳಾರಿ ಜಿಲ್ಲೆಯ ಕೂಡ್ಲಗಿಯಲ್ಲಿ ಸಿದ್ದರಾಮಯ್ಯ
ಅವರೊಂದಿಗೆ ಬಹಿರಂಗ ಸಭೆಯಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಸುಮಾರು 12-13 ವರ್ಷಗಳ ನಂತರ ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಂಗಳವಾರ ಶಿವಮೊಗ್ಗದಲ್ಲಿ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಪರ ಸಿದ್ದರಾಮಯ್ಯ ಅವರೊಂದಿಗೆ ಪ್ರಚಾರ ನಡೆಸಲಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಈ ಮಧ್ಯೆ ದೇವೇಗೌಡರು, ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ಪ್ರಚಾರ ಮುಗಿಸಿ ಅ.31 ಹಾಗೂ ನ.1ರಂದು ಮತ್ತೂಂದು ಸುತ್ತಿನಲ್ಲಿ ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರ ಮಾಡಲಿದ್ದಾರೆ. ಹಾಗೆಯೇ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಹಾಗೂ ಪದಾಧಿಕಾರಿಗಳ ತಂಡ ಭಾನುವಾರದಿಂದ ಉಪಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. 

ಸಿಎಂ ಗೈರು?: ಬಳ್ಳಾರಿ ಲೋಕಸಭೆ ಮತ್ತು ಜಮಖಂಡಿ ವಿಧಾನಸಭೆ ಉಪ ಚುನಾವಣಾ ಕಣದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಪ್ರಚಾರ ನಡೆಸುವುದು ಅನುಮಾನ. ಅ.31ಕ್ಕೆ ಶಿವಮೊಗ್ಗಕ್ಕೆ ತೆರಳಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಬಳ್ಳಾರಿ ಹಾಗೂ ಜಮಖಂಡಿ ಪ್ರಚಾರಕ್ಕೆ ಮುಖ್ಯಮಂತ್ರಿಗಳು ಗೈರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ನಾನಾನ ರಾಜಕೀಯ ವಿಶ್ಲೇಷಣೆಗೂ ಕಾರಣವಾಗುತ್ತಿದೆ.

Advertisement

ನಾನು ಮುಖ್ಯಮಂತ್ರಿ ಆಗಿದ್ದು, ಪ್ರಧಾನಿಯಾಗಿದ್ದು ದೈವದ ಲೀಲೆ. ನಾನು ಇಲ್ಲಿಂದ ಸ್ಪರ್ಧಿಸಿದ್ದು ಸಹ ದೈವಾನುಗ್ರಹ.
ಕುಮಾರಸ್ವಾಮಿಯವರನ್ನು ಸಹ ಇದೇ ಕ್ಷೇತ್ರ ಕೈಹಿಡಿದಿದೆ. ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆ ಇಲ್ಲಿ ಸಾಂಕೇತಿಕ ಅಷ್ಟೆ. ರಾಮನಗರ ಮತ್ತು ಚನ್ನಪಟ್ಟಣ ಎರಡೂ ಸಹ ಕುಮಾರಸ್ವಾಮಿಯವರ ಎರಡು ಕಣ್ಣುಗಳಿದ್ದ ಹಾಗೆ. ಇಡೀ ಜಿಲ್ಲೆಯಲ್ಲಿ ಅಭಿವೃದ್ದಿ ಆಗಲಿದೆ. 

● ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next