ಬೆಂಗಳೂರು: ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಪಕ್ಷದ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ವಾತಂತ್ರ್ಯ ಪೂರ್ವದಲ್ಲಿಯೂ ಆರ್‌ಎಸ್‌ಎಸ್ ಇತ್ತು. ಆದರೆ, ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಆರ್‌ಎಸ್‌ಎಸ್ ಸರಸಂಘಚಾಲಕರಾಗಿದ್ದ ಹೆಡಗೆವಾರ್ ಹಾಗೂ ಗೋಲ್ವಲ್ಕರ್ ಅವರ ಕೊಡುಗೆ ಏನಿದೆ? ಆರ್‌ಎಸ್‌ಎಸ್‌ನವರು ಹಳೆಯ ವ್ಯವಸ್ಥೆಯೇ ಇರಬೇಕು ಎಂದು ಬಯಸುತ್ತಾರೆ. ಏಕೆಂದರೆ ಎಲ್ಲಿಯವರೆಗೆ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಶೋಷಣೆ ಇರುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದರು. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಅವರ ಬೆಂಬಲ ಇದೆ ಎಂದು ಅರ್ಥ. ನಮ್ಮ ಸಂವಿಧಾನದಲ್ಲಿ ಯಾವುದೇ ಧರ್ಮವನ್ನು ಅನುಸರಿಸಲು ಅವಕಾಶ ಕೊಟ್ಟಿದೆ. ಅಧಿಕಾರ ಮತ್ತು ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು. ಬಿಜೆಪಿಯವರು ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುತ್ತಾರೆ. ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ನೀಡಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕು ಎಂದು ಪದಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಂವಿಧಾನ ಜಾಗೃತಿ ಅಭಿಯಾನ
ರಾಜ್ಯ ಕಾಂಗ್ರೆಸ್ ಪಂಚಾಯತ್ ರಾಜ್ ಘಟಕದ ವತಿಯಿಂದ ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದ್ದು. ಪ್ರತಿ ವಿಧಾನಸಭೆಗೊಬ್ಬರನ್ನು ಉಸ್ತುವಾರಿಗಳನ್ನು ನೇಮಕ ಮಾಡಲಾಗಿದ್ದು ಅವರು ಗ್ರಾಮ ಮಟ್ಟದಲ್ಲಿ ತಿಂಗಳಲ್ಲಿ ಕನಿಷ್ಠ ಹತ್ತು ದಿನ ಸಂವಿಧಾನದ ಬಗ್ಗೆ ಸಾರ್ವಜನಿಕರು, ಶಾಲಾ ಮಕ್ಕಳಿಗೆ ಮಾಹಿತಿ ನೀಡುವುದು ಹಾಗೂ ಪಕ್ಷದ ಕೆಳ ಹಂತದ ಕಾರ್ಯಕರ್ತರಿಗೂ ತರಬೇತಿ ನೀಡಿ, ಹೆಚ್ಚಿನ ಜನರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.