Advertisement

ಚಿತ್ತಾಪುರ ದತ್ತು ಮರೆತ ಬಿಜೆಪಿ

09:38 AM Nov 04, 2017 | |

ವಾಡಿ: ಚಿತ್ತಾಪುರ ಮತಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿ ಮಾಡುವುದಾಗಿ ಚುನಾವಣೆ ವೇಳೆ ಹೇಳಿಕೆ ನೀಡಿದ್ದ ಬಿಜೆಪಿಯ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ಎಲ್ಲಿ ಹೋದರು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗಳ ಯೋಜನೆಯಡಿ ಹಳಕರ್ಟಿ ಗ್ರಾಮದ ದೊಡ್ಡ ಹಳ್ಳಕ್ಕೆ ಆಣೆಕಟ್ಟು ನಿರ್ಮಾಣಕ್ಕೆ ಮಂಜೂರಾದ 60 ಲಕ್ಷ ರೂ. ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

Advertisement

ಗಟ್ಟಿ ಸಿದ್ಧಾಂತವಿಲ್ಲದ ಬಿಜೆಪಿ ನಾಯಕ ಯಡಿಯೂರಪ್ಪ, ಕೆಜೆಪಿ ಕಟ್ಟಿದ್ದಾಗ ಟಿಪ್ಪು ಪೇಠಾ ಧರಿಸುವ ಮೂಲಕ ತಾನು
ಜಾತ್ಯತೀತವಾದಿ ಎಂದು ಹೇಳಿಕೊಂಡರು. ಅದೇ ಯಡಿಯೂರಪ್ಪ ಈಗ ಬಿಜೆಪಿಯಲ್ಲಿದ್ದು ಟಿಪ್ಪು ಜಯಂತಿ ವಿರೋ ಧಿಸುತ್ತಿದ್ದಾರೆ. ಇವರ ಯಡಬಿಡಂಗಿ ನೀತಿಗೆ ಏನು ಹೇಳಬೇಕು ಎಂದು ಹರಿಹಾಯ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರಕ್ಕೆ ಬಂದಿದ್ದ ಯಡಿಯೂರಪ್ಪ ಮತ್ತು ಶೋಭಾ ಜನರಲ್ಲಿ ಬಣ್ಣ ಬಣ್ಣದ ಕನಸುಗಳನ್ನು ಬಿತ್ತಿ ಮರಳು ಮಾಡಲು ನೋಡಿದ್ದರು. ನಂತರ ಅವರು ಎಲ್ಲಿಗೆ ಹೋದರೋ ಗೊತ್ತಾಗಲಿಲ್ಲ ಎಂದು ಟೀಕಿಸಿದರು. ಈ ವೇಳೆ ಸಭೆಯಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ಜೈಲಿಗೆ ಹೋದರು ಎಂದು ಗೇಲಿ ಮಾಡಿದರು.

ಸ್ವಾರ್ಥಕ್ಕಾಗಿ ಪಕ್ಷ ಸೇರಿದ ಅವಕಾಶವಾದಿಗಳಿಂದ ನಾವು ಎಚ್ಚರವಾಗಿರಬೇಕಿದೆ. ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋದವರೆಲ್ಲ ಮೂಲ ಕಾಂಗ್ರೆಸ್ಸಿಗರಲ್ಲ. ಅಲ್ಲಿಂದಲೇ ಬಂದಿದ್ದರು, ಅಲ್ಲಿಗೇ ಹೋಗಿದ್ದಾರೆ. ಇದರಿಂದ ನಮಗೇನು ನಷ್ಟವಿಲ್ಲ. ಅವರೆಲ್ಲ ಚಿತ್ತಾಪುರದ ಅಭಿವೃದ್ಧಿ ಬಯಸುವವರಲ್ಲ. ಬದಲಿಗೆ ಚಿತ್ತಾಪುರವನ್ನು ಮಾರಲು ಬಿಜೆಪಿ ಸೇರಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಅಧ್ಯಕ್ಷ ಜಗಣ್ಣಗೌಡ ಪಾಟೀಲ, ರಾಯಚೂರು ಕೃಷಿ ವಿವಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ, ಚಿತ್ತಾಪುರ ಬ್ಲಾಕ್‌ ಅಧ್ಯಕ್ಷ ಭೀಮಣ್ಣ ಸಾಲಿ, ಜಗದೀಶ ಸಿಂಧೆ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಚೆನ್ನಮ್ಮ ಉಪ್ಪಿನ್‌, ಎಪಿಎಂಸಿ ಅಧ್ಯಕ್ಷ ಬಸವರಾಜ ಸಜ್ಜನ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ್‌ ಮಹೆಮೂದ್‌ ಸಾಹೇಬ, ಜಿಪಂ ಸದಸ್ಯ ಶಿವುರುದ್ರ ಭೀಣಿ, ಮುಖಂಡರಾದ ಟೋಪಣ್ಣ ಕೋಮಟೆ, ಅಜೀಜ್‌ ಸೇಠ, ಜಾಫರ್‌ ಪಟೇಲ, ಶಂಕ್ರಯ್ಯಸ್ವಾಮಿ ಮದರಿ, ಸೂರ್ಯಕಾಂತ ರದ್ದೇವಾಡಿ, ಮಲ್ಲಿಕಾರ್ಜುನ ಮುಡಬೂಳಕರ ಪಾಲ್ಗೊಂಡಿದ್ದರು. ಸಿದ್ದು ಮುಗುಟಿ ನಿರೂಪಿಸಿ, ವಂದಿಸಿದರು

ಸೋತರೂ ಇಲ್ಲೇ.. ಗೆದ್ದರೂ ಇಲ್ಲೇ
ನಾನು ಚಿತ್ತಾಪುರ ಕ್ಷೇತ್ರ ಬಿಟ್ಟು ಕಲಬುರಗಿ ಗ್ರಾಮೀಣ ಕ್ಷೇತ್ರಕ್ಕೆ ಹೋಗುತ್ತೇನೆ ಎನ್ನುವ ಗುಮಾನಿ ಹಬ್ಬಿಸಿದ್ದಾರೆ.
ಕ್ಷೇತ್ರಕ್ಕಾಗಿ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನಾನ್ಯಾಕೆ ಕ್ಷೇತ್ರ ಬಿಡಲಿ.
ಗೆದ್ದರೂ ಇಲ್ಲೇ.. ಸೋತರೂ ಇಲ್ಲೇ. ಚಿತ್ತಾಪುರ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ. ಪ್ರತಿ ಗ್ರಾಮಕ್ಕೂ ಅನುದಾನ
ನೀಡಿ ಪ್ರಗತಿಗೆ ಪಣ ತೊಟ್ಟಿದ್ದೇನೆ. ಕ್ಷೇತ್ರದ ಜನರ ಮನೆ ಮಗನಾಗಿ ದುಡಿದಿದ್ದೇನೆ. ಬರುವ ವಿಧಾನ ಸಭೆ ಚುನಾವಣೆಯಲ್ಲಿ ಮತ್ತೆ ನಿಮ್ಮಿಂದ ಕೂಲಿ ಕೇಳುತ್ತೇನೆ.ಮುಂದೆಯೂ ನಾನೇ ಗೆಲ್ಲುತ್ತೇನೆ. ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಷ್ಠಾವಂತ ಕಾರ್ಯರ್ತರು ಮತ್ತು ಪ್ರಜ್ಞಾವಂತ ಮತದಾರರಿರುವಾಗ ನಮಗೆ ಸೋಲಿಲ್ಲ.
ಪ್ರಿಯಾಂಕ್‌ ಖರ್ಗೆ, ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next