Advertisement

6.71 ಲಕ್ಷ ಮತ ಗಳಿಸಿದ್ದು ಬಿಜೆಪಿಗೆ ಆತ್ಮಸ್ಥೈರ್ಯ ತಂದಿದೆ

10:02 AM May 27, 2019 | Team Udayavani |

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದ್ದರೂ 6.71 ಲಕ್ಷ ಮತ ಗಳಿಸಿರುವುದು ಆತ್ಮ ಸ್ಥೈರ್ಯ ತುಂಬಿದೆ ಎಂದು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಹೇಳಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಮಪತ್ರ ಸಲ್ಲಿಸುವ ಕೊನೇ ದಿನ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ವರಿಷ್ಠರು ಸೂಚನೆ ಕೊಟ್ಟರು. ಕ್ಷೇತ್ರದ ಮತದಾರರನ್ನು ಭೇಟಿ ಮಾಡಲು ತಮಗೆ ಸಮಯಾವಕಾಶ ಸಿಗಲಿಲ್ಲ. ಆದರೂ ಕ್ಷೇತ್ರದ ಮತದಾರರು ನರೇಂದ್ರ ಮೋದಿ ಅವರ ಆಡಳಿತವನ್ನು ಪುನಃ ಬಯಸಿ 6.71 ಲಕ್ಷ ಮತ ಕೊಟ್ಟಿದ್ದಾರೆ. ಡಿ.ಕೆ.ಸಹೋದರರನ್ನು ಎದುರಿಸುವುದು ಕಷ್ಟ ಎಂಬ ವಾತಾವರಣ ಈಗ ತೊಲಗಿದಂತಾಗಿದೆ. ಅಭ್ಯರ್ಥಿ ನಿರ್ಧಾರ ಇನ್ನು ಮೊದಲೇ ಆಗಿದ್ದರೆ ಬಹುಶಃ ಈ ಬಾರಿ ಕರ್ನಾಟಕ ಕಾಂಗ್ರೆಸ್‌ ಮುಕ್ತ ಆಗಿರುತ್ತಿತ್ತು ಎಂದರು.

ರಾಮನಗರ ಜಿಲ್ಲೆಯೊಂದರಲ್ಲೇ ಬಿಜೆಪಿ 2 ಲಕ್ಷಕ್ಕೂ ಹೆಚ್ಚು ಮತ ಸಿಕ್ಕಿವೆ. ಬಿಜೆಪಿಗೆ ಸೋಲಾದರೂ ಅದು ಗಳಿಸಿರುವ ಮತಗಳ ಪ್ರಮಾಣದ ಪರಿಣಾಮ ಡಿ.ಕೆ.ಸಹೋದರರಿಗೂ ಗೊತ್ತಾಗಿದೆ. ಕಳೆದ 5 ವರ್ಷಗಳಲ್ಲಿ ಸಂಸದರಾಗಿ ಜನರ ಗಮನ ಸೆಳೆಯುವ ಕೆಲಸ ಮಾಡಿಲ್ಲವೆಂದು ಈಗಾಗಲೇ ಅವರು ವಿಮರ್ಶೆ ಮಾಡಿಕೊಂಡಿರಬಹುದು ಎಂದರು.

ರಾಜ್ಯದಲ್ಲಿ ಬಿಜೆಪಿಯ ನಾಗಾಲೋಟಕ್ಕೆ ಮೈತ್ರಿ ಪಕ್ಷಗಳ ಕಿತ್ತಾಟ ಕಾರಣ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ ಅವರು, ಪ್ರಧಾನಿಯಾಗಿ ಮತ್ತೂಮ್ಮೆ ಮೋದಿ ಅಧಿಕಾರಕ್ಕೆ ಬರಬೇಕು ಎಂಬುದು ಮತದಾರರ ಇಚ್ಚೆಯಾಗಿತ್ತು. ಅದರಂತೆ ಬಿಜೆಪಿ ಗೆದ್ದಿದೆ ಎಂದರು.

ಸಿ.ಪಿ.ಯೋಗೇಶ್ವರ್‌ ಸ್ಪರ್ಧಿಸಿದ್ದರೆ ಗೆಲುವು ನಿಶ್ಚಿತವಾಗುತ್ತಿತ್ತು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿ.ಪಿ.ಯೋಗೇಶ್ವರ್‌ರಿಗೆ ಪಕ್ಷ ಸೂಚನೆ ಕೊಟ್ಟಿತ್ತು. ಆದರೆ, ಅವರು ದೆಹಲಿ ರಾಜಕಾರಣ ಬೇಡ ಎಂದು ಕೈಚೆಲ್ಲಿದರು. ಅವರು ಸ್ಪರ್ಧಿಸಿದ್ದರೆ ಅವರೇ ಗೆಲ್ಲುತ್ತಿದ್ದರು ಎಂದು ಅಶ್ವತ್ಥನಾರಾಯಣ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

ಎಷ್ಟೋ ಬೂತ್‌ಗಳಲ್ಲಿ ಏಜೆಂಟರು ಇರಲಿಲ್ಲ, ಕೊನೇ ಎರಡು ದಿನ ಪ್ರಚಾರ ಮಾಡಲಿಲ್ಲ , ಪ್ರಚಾರಕ್ಕೆ ಬಿ.ಎಸ್‌.ಯಡಿಯೂರಪ್ಪ ಬರಲಿಲ್ಲ. ಡಿ.ಕೆ.ಸುರೇಶ್‌ ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪಗಳಿವೆ ಎಂಬ ಪ್ರಶ್ನೆಗೆ, ಇದೆಲ್ಲಾ ವಿರೋಧಿಗಳ ಸಂಚಿನ ಮಾತು. ಮೇಲ್ಮಟ್ಟದಲ್ಲಿ ಆದ ಒಪ್ಪಂದಗಳಿಗೆ ಕಾರ್ಯಕರ್ತರು-ಮತದಾರರು ಒಪ್ಪೊಲ್ಲ ಎಂದರು. ಯೋಗಿ ಆದಿತ್ಯನಾಥ್‌ ಅವರ ಜೊತೆ ಬಿ.ಎಸ್‌.ಯಡಿಯೂರಪ್ಪ ಪ್ರಚಾರಕ್ಕೆ ಬರಬೇಕಿತ್ತು. ಆದರೆ ಯೋಗಿ ಆದಿತ್ಯನಾಥರ ಭೇಟಿ ರದ್ದಾಯಿತು. ಹೀಗಾಗಿ ಬಿಎಸ್‌ವೈ ಬರಲಾಗಲಿಲ್ಲ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜು: ತಾವು ಸೋಲಿನಿಂದ ವಿಚಲಿತರಾಗಿಲ್ಲ. ಬಿಜೆಪಿ ಗಳಿಸಿದ ಮತಗಳು ತಮ್ಮಲ್ಲಿ ಆತ್ಮಸ್ಥೈರ್ಯ ತುಂಬಿದೆ. ಸಂಘಟನೆಯಲ್ಲಿ ತೊಡಗಿ ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸರ್ಕಾರದ ಗಮನ ಸೆಳೆಯು ವುದಾಗಿ ಹೇಳಿದರು. ಜಿಲ್ಲೆಯ ಸ್ಥಳೀಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಜ್ಜಾಗುತ್ತಿದೆ. ಸರ್ಕಾರದಿಂದ ಮೂಲ ಸೌಕರ್ಯ ವೃದ್ಧಿಗೆ ನೂರಾರು ಕೋಟಿ ರೂ. ಬಂದಿದೆ. ಆದರೆ, ಕಾಮಗಾರಿಗಳೇ ಆಗದೆ ಬಿಲ್ಗಳಾಗಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿವರ ಕೊಡುವುದಾಗಿ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್‌, ಪ್ರಮುಖರಾದ ಎಸ್‌.ಆರ್‌.ನಾಗರಾಜ್‌, ಮಲವೇಗೌಡ, ಮುರುಳೀಧರ, ಜಿ.ವಿ.ಪದ್ಮನಾಭ, ಪ್ರವೀಣ್‌ಗೌಡ, ಬಿ.ನಾಗೇಶ್‌, ರಾಘವೇಂದ್ರ, ಕಿರಣ್‌ ಹಳ್ಳಿಮಾಳ, ನಾಗಣ್ಣ, ಸದಾನಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next