Advertisement

ಹುಣಸೂರಲ್ಲಿ ಬಿಜೆಪಿ ಹೆಚ್ಚು ಮತ ಪಡೆದಿಲ್ಲ

10:30 PM May 23, 2019 | Team Udayavani |

ಹುಣಸೂರು: ಬಿಜೆಪಿಗರಿಗೆ ಒಂದೆಡೆ ಮೈಸೂರು-ಕೊಡಗು ಕ್ಷೇತ್ರವನ್ನು ಗೆದ್ದಿದ್ದೇವೆಂದು ಬೀಗುತ್ತಿದ್ದರೂ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ನಿರೀಕ್ಷಿತ ಲೀಡ್‌ ಪಡೆಯಲು ವಿಫಲವಾಗಿದೆ. ಕ್ಷೇತ್ರದಲ್ಲಿ ಪ್ರತಾಪಸಿಂಹ ಜಯಭೇರಿ ಬಾರಿಸಿದ್ದರೂ ಕಾಂಗ್ರೆಸ್‌ ಎಂದಿನಂತೆ ತಾಲೂಕಿನಲ್ಲಿ 3725 ಮತಗಳ ಲೀಡ್‌ ಪಡೆದಿರುವುದು ವಿಶೇಷ.

Advertisement

1984-1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸತತ 2 ಬಾರಿ ಗೆಲುವು ಸಾಧಿಸಿದ್ದರು. 30 ವರ್ಷಗಳ ನಂತರ ಇದೀಗ ಮೋದಿ ನಾಮಬಲದಿಂದ ಪ್ರತಾಪಸಿಂಹ ಸತತವಾಗಿ 2ನೇ ಬಾರಿಗೆ ಬಿಜೆಪಿಯಿಂದ ಗೆಲುವು ಸಾಧಿಸಿರುವುದು ವಿಶೇಷ.

2014-2019: ಪ್ರತಿ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಮುನ್ನೆಡೆ ಸಾಧಿಸಿಕೊಂಡು ಬಂದಿದ್ದು, ಈ ಬಾರಿಯೂ ಲೀಡ್‌ ಅಬಾಧಿತವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ವಿಶ್ವನಾಥ್‌ 64,970, ಪ್ರತಾಪ್‌ಸಿಂಹ 48,582, ಜೆಡಿಎಸ್‌ನ ಚಂದ್ರಶೇಖರಯ್ಯ 34,870 ಹಾಗೂ ಬಿಎಸ್‌ಪಿ 3,225 ಮತ ಪಡೆದುಕೊಂಡು ಕಾಂಗ್ರೆಸ್‌ 16,388 ಮತಗಳ ಲೀಡ್‌ ಪಡೆದಿತ್ತು.

ಈ ಬಾರಿಯೂ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಸಿ.ಎಚ್‌.ವಿಜಯಶಂಕರ್‌ 82,493, ಬಿಜೆಪಿಯ ಪ್ರತಾಪ್‌ಸಿಂಹ 78,695 ಮತಗಳಿಸಿದ್ದಾರೆ. ಈ ಬಾರಿ ಒಟ್ಟಾರೆ ಕಾಂಗ್ರೆಸ್‌ 3,798 ಹೆಚ್ಚಿನ ಮತಗಳಿಸಿದ್ದು, ತನ್ನ ಅಸ್ತಿತ್ವ ಉಳಿಸಿಕೊಂಡಿದೆ.

ಹಿನ್ನೆಡೆಗೆ ಒಳ ಏಟು ಕಾರಣ: ಈ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಕಳೆದ ಚುನಾವಣೆಗಿಂತ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚಿನ ಲೀಡ್‌ ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸೋತಿದ್ದರಿಂದ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿದ್ದೇ ಕಾರಣವಾಗಿದೆ.

Advertisement

ಹೆಚ್ಚಿನ ಬೆಟ್ಟಿಂಗ್‌: ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಗೆಲುವಿಗಿಂತ ಹುಣಸೂರು ಕ್ಷೇತ್ರದಲ್ಲಿ ಯಾವ ಪಕ್ಷ ಹೆಚ್ಚಿನ ಮತ ಗಳಿಸುವುದೋ ಎಂಬುದರ ಮೇಲೆಯೇ ಹೆಚ್ಚಿನ ಬೆಟ್ಟಿಂಗ್‌ ನಡೆದಿದೆ. ಕಾಂಗ್ರೆಸ್‌ ನವರಿಗಂತೂ ಜೆಡಿಎಸ್‌ ಒಳ ಏಟು ನೀಡಿದರೂ ಹೆಚ್ಚು ಲೀಡ್‌ ಪಡೆದಿದ್ದೇವೆಂದು ಬೀಗುತ್ತಿದ್ದರು.

ಎರಡೂ ಪಕ್ಷಗಳ ಮುಖಂಡರು ಈ ಬಗ್ಗೆ ಕೆಸರೆರಚಾಡಿಕೊಂಡಿದ್ದರಾದರೂ ತಾಲೂಕಿನ ಜನತೆ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಪರ ಒಲವು ಇಟ್ಟುಕೊಂಡಿರುವುದು ಈ ಬಾರಿಯ ಚುನಾವಣೆಯೇ ಸಾಕ್ಷಿ. ಮೋದಿ ನಾಮಬಲ ಜೊತೆಗೆ ಹನುಮ ಜಪದಿಂದಾಗಿ ಬಿಜೆಪಿ ಮತ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳುವುದೋ ಕಾದು ನೋಡಬೇಕಿದೆ.

ಸಂಭ್ರಮಿಸದ ಬಿಜೆಪಿಗರು: ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದರೂ ಹುಣಸೂರು ಬಿಜೆಪಿಗರು ವಿಜಯೋತ್ಸವವಿರಲಿ, ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಮುಖಂಡರು ಮತ ಎಣಿಕೆಗೆ ತೆರಳಿದ್ದರಿಂದ ಯಾರೊಬ್ಬರೂ ಸಂಭ್ರಮಿಸಲಿಲ್ಲ.

ಹುಣಸೂರು ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯೋಗಾನಂದಕುಮಾರ್‌ ಮಾತನಾಡಿ, ಪ್ರತಿ ಚುನಾವಣೆಯಲ್ಲೂ 16-20 ಸಾವಿರ ಮತಗಳ ಅಂತರವಿರುತ್ತಿತ್ತು. ಈ ಬಾರಿ ಅಂತರ ಕಡಿಮೆಯಾಗಿದೆ ಅಲ್ಲದೆ 3ಸಾವಿರಕ್ಕಿಳಿಸಿದ್ದೇವೆ. ತಾಲೂಕಿನ ಮತದಾರರು ಜಾತ್ಯಾತೀತವಾಗಿ ಮೋದಿಯವರ ಆಡಳಿತ, ನಮ್ಮ ಸಂಸದರ ಕಾರ್ಯವೈಖರಿ ಮೆಚ್ಚಿ ಮತನೀಡಿದ್ದಾರೆ. ಕ್ಷೇತ್ರದ ಜನತೆಗೆ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ.

* ಸಂಪತ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next