Advertisement

ಕಳಂಕಿತರ ವಜಾಕ್ಕೆ ಬಿಜೆಪಿ ಆಗ್ರಹ

12:32 PM Aug 19, 2017 | Team Udayavani |

ಬೀದರ: ಆದಾಯ ತೆರಿಗೆ ದಾಳಿಗೆ ಒಳಗಾಗಿರುವ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು. ಮತ್ತು ಇತರ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಗಣೇಶ ಮೈದಾನದಿಂದ ಜಿಲ್ಲಾಧಿಕಚೇರಿ ವರೆಗೆ ರ್ಯಾಲಿ ನಡೆಸಿ, ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಡಿ.ಕೆ. ಶಿವಕುಮಾರ ನಿವಾಸದ ಮೇಲೆ ಐಟಿ ದಾಳಿ ನಡೆದಾಗ ಆರೋಪಗಳ ಹೊಣೆ ಹೊತ್ತು ರಾಜೀನಾಮೆ ನೀಡದಿದ್ದರೆ ವಜಾ ಮಾಡುವುದಾಗಿ
ಎಚ್ಚರಿಕೆ ನೀಡಬೇಕಾಗಿದ್ದ ಮುಖ್ಯಂಮತ್ರಿಗಳು ನೇರವಾಗಿ ಅವರ ಬೆಂಬಲಕ್ಕೆ ನಿಂತು ಭ್ರಷ್ಟಾಚಾರದ ಘೋಷಣೆ ತನ್ನ ಗುರಿ ಎಂದು ಸಾರಿದರು. ತನ್ನ ಸರ್ಕಾರದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ ಎನ್ನುವ ಬಂಡತನ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು. ನೋಟು ಅಮಾನ್ಯ ವೇಳೆ ನಡೆದ ಐಟಿ ದಾಳಿಯಲ್ಲಿ ಸಚಿವರಾದ ರಮೇಶ ಜಾರಕಿಹೊಳಿ, ಕೆಪಿಸಿಸಿಯ ಲಕ್ಷ್ಮೀ ಹೆಬ್ಟಾಳಕರ್‌, ಎಂಎಲ್‌ಸಿ ಗೋವಿಂದರಾಜ್‌ ಅವರ ಮನೆಗಳಲ್ಲಿ ಕೋಟ್ಯಂತರರೂ., ಅನೇಕ ಆಸ್ತಿ ದಾಖಲೆಗಳು, ಡೈರಿಗಳು ಇತ್ಯಾದಿ ಪತ್ತೆಯಾಗಿದ್ದವು. ಆದರೂ ಯಾವುದೇ ಪ್ರಕರಣಗಳನ್ನು ಸಿಎಂ ಗಂಭೀರವಾಗಿ ಪರಿಗಣಿಸಿಲ್ಲ. ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್‌ ಹೊಂದಿರುವ ರಾಷ್ಟ್ರೀಯ ನೀತಿಯ ಭಾಗವಾಗಿಯೇ ಒಂದಾದ ನಂತರ ಒಂದು ಪ್ರಕರಣಗಳು ಬಹಿರಂಗಗೊಂಡರೂ ಯಾವುದೇ ಕ್ರಮ ಕೈಗೊಳ್ಳಲು ಕಾಂಗ್ರೆಸ್‌, ಸಿಎಂ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿ ಹಾಕುವ ಏಕೈಕ ಕಾಯಕದಲ್ಲಿ ನಿರತವಾಗಿದೆ. ಲೋಕಾಯುಕ್ತ ಸಂಪೂರ್ಣ ದುರ್ಬಲಗೊಳಿಸಿದ ಸರ್ಕಾರ ಸಿಐಡಿ ಮತ್ತು ಎಸಿಬಿ ಸಂಸ್ಥೆಗಳನ್ನು ಕೇವಲ ಕ್ಲಿನ್‌ಚಿಟ್‌ ನೀಡುವ ವಿಭಾಗಗಳೆಂದು ಪರಿಗಣಿಸಿದೆ. ರಾಜ್ಯದಲ್ಲಿ ಮರಳು ಮಾಫೀಯಾ ಹಾವಳಿ ಮಿತಿ ಮೀರಿದ್ದು, ಇದನ್ನು ನಿಯಂತ್ರಿಸಲು ಹೊರಟ ಕೆಲವು ಅಧಿಕಾರಿಗಳ ಹತ್ಯೆ ಮತ್ತು ಬೆದರಿಕೆ ಒಡ್ಡುವುದು ಅವ್ಯಾಹತವಾಗಿ ನಡೆಯುತ್ತಿದೆ. ಇಂಥ
ಭ್ರಷ್ಟ ಸರ್ಕಾರದ ವಿರುದ್ಧ ಜಾಗೃತಿ ಮೂಡಿಸಲು ಬಿಜೆಪಿ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಸಂಸದ ಭಗವಂತ ಖೂಬಾ, ಪಕ್ಷದ ಪ್ರಮುಖರಾದ ಜಯಕುಮಾರ ಕಾಂಗೆ, ಬಾಬುರಾವ್‌ ಕಾರಬಾರಿ, ಶಿವರಾಜ ಗಂದಗೆ, ವಿಜಯಕುಮಾರ ಪಾಟೀಲ ಗಾದಗಿ, ಸಂಗಮೇಶ ನಾಸಿಗಾರ, ಜಗನ್ನಾಥ ಪಾಟೀಲ, ರಾಜಕುಮಾರ ಚಿದ್ರಿ, ಸೂರಜಸಿಂಗ್‌ ರಾಜಪೂತ, ಶಂಕರ, ಗುರುನಾಥ ರಾಜಗೀರಾ, ಬಸವರಾಜ ಜೋಜನಾ, ವಿಶ್ವನಾಥ ಕಾಜಿ, ವಿನಾಯಕ ದೇಶಪಾಂಡೆ, ಶಿವಪುತ್ರ ವೈದ್ಯ, ಮಹೇಶ ಪಾಲಂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next