Advertisement

ಒಡಿಶಾದಲ್ಲಿ ಮತ್ತೂಮ್ಮೆ ಬೀಸಿದ ಬಿಜೆಡಿ ಅಲೆ

12:21 PM May 26, 2019 | Sriram |

ಭುವನೇಶ್ವರ: ದೇಶಾದ್ಯಂತ ನರೇಂದ್ರ ಮೋದಿ ಮೋಡಿ ಮಾಡಿದ್ದರೆ, ಒಡಿಶಾದಲ್ಲಿ ಮಾತ್ರ ನವೀನ್‌ ಪಟ್ನಾಯಕ್‌ ಅವರದ್ದೇ ಅಲೆ. ಬಿಜು ಜನತಾ ದಳ (ಬಿಜೆಡಿ)ವನ್ನು ಭಾರಿ ಬಹುಮತದೊಂದಿಗೆ ಮತ್ತೂಮ್ಮೆ ಅಧಿಕಾರಕ್ಕೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

Advertisement

ಮೋದಿ ಅಲೆಯ ನಡುವೆಯೂ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ ಎರಡು ಸ್ಥಾನಗಳನ್ನು ಹೆಚ್ಚು ಗೆದ್ದು ಬೀಗಿದೆ. ಒಟ್ಟಾರೆ 146 ಸ್ಥಾನಗಳ ಪೈಕಿ 111 ಕ್ಷೇತ್ರಗಳಲ್ಲಿ ಬಿಜೆಡಿ ಗೆಲುವಿನ ನಗೆ ಬೀರಿದೆ. ಸುಮಾರು ಎರಡೂವರೆ ದಶಕಗಳಿಂದ ಒಡಿಶಾದಲ್ಲಿ ಪಾರುಪತ್ಯ ಸಾಧಿಸುತ್ತಿರುವ 72 ವರ್ಷದ ನವೀನ್‌ ಪಟ್ನಾಯಕ್‌, ಸತತ ಐದನೇ ಬಾರಿಗೆ ಒಡಿಶಾ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

ಸರ್ಕಾರ ರಚನೆಗೆ ಬಿಜೆಡಿಗೆ ಅವಶ್ಯಕತೆ ಇದ್ದದ್ದು 72 ಸ್ಥಾನಗಳು. ಆದರೆ, ಆ ಪಕ್ಷಕ್ಕೆ 111 ಸ್ಥಾನಗಳು ಲಭಿಸಿವೆ. 2014ರ ವಿಧಾನಸಭಾ ಚುನಾವಣೆಯಲ್ಲಿ 117 ಕ್ಷೇತ್ರಗಳಲ್ಲಿ ಅದು ಗೆಲುವು ಸಾಧಿಸಿತ್ತು. ಅದಕ್ಕೂ ಹಿಂದೆ 103 ಸ್ಥಾನಗಳನ್ನು ಗೆದ್ದು, ಸರ್ಕಾರ ರಚನೆ ಮಾಡಿತ್ತು. ಪ್ರತಿ ಬಾರಿಯ ಚುನಾವಣೆಯಲ್ಲಿಯೂ ನವೀನ್‌ ಪಟ್ನಾಯಕ್‌ ಅವರು ತಮ್ಮ ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ. ಇನ್ನು 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, ಇಲ್ಲಿ ಪ್ರತಿಪಕ್ಷ ಸ್ಥಾನ ಅಲಂಕರಿಸಲಿದೆ.

ಗೆದ್ದ ಪ್ರಮುಖರು

• ಅಮರ ಪ್ರಸಾದ ಸತ್ಪತಿ, ಮುಖ್ಯ ಸಚೇತಕ, (ಬಿಜೆಡಿ) ಬರ್ಚಾನಾ •ಮುಖೇಶ್‌ ಕುಮಾರ್‌ ಪಾಲ್, (ಬಿಜೆಡಿ) ಪಲ್ಲಹಾರ •ಲಕ್ಷ್ಮಣ್‌ ಮುಂಡಾ (ಐಸಿಪಿಎಂ-) ಬೊನಾಯಿ

ಸೋತ ಪ್ರಮುಖರು

•ಅಶೋಕ್‌ ಮೊಹಾಂತಿ, (ಬಿಜೆಪಿ) ಪಲ್ಲಹಾರ •ಅಮರ್‌ ಕುಮಾರ್‌ ನಾಯಕ್‌, (ಬಿಜೆಪಿ)ಬರ್ಚಾನಾ •ಅಜಯ್‌ ಕುಮಾರ್‌ ಸಮಲ್, (ಕಾಂಗ್ರೆಸ್‌) ಬರ್ಚಾನಾ

ವಿರೋಧ ಪಕ್ಷ ಸ್ಥಾನದಿಂದಲೂ ಕಾಂಗ್ರೆಸ್‌ ವಂಚಿತ!

ಕಾಂಗ್ರೆಸ್‌ಗೆ ದೇಶಾದ್ಯಂತ ಇರುವ ಸ್ಥಿತಿಯೇ ಒಡಿಶಾದಲ್ಲೂ ಇದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಕಳಪೆ ಪ್ರದರ್ಶನ ನೀಡಿದ ಕಾಂಗ್ರೆಸ್‌, ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ. ಕಳೆದ ಬಾರಿ 16 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್‌, ಈ ಬಾರಿ 11ಕ್ಕೆ ಕುಸಿದಿದೆ. ಇನ್ನು, 10 ಸ್ಥಾನಗಳನ್ನು ಗೆದ್ದು, ಈ ಮೊದಲು ಮೂರನೇ ಸ್ಥಾನದಲ್ಲಿದ್ದ ಬಿಜೆಪಿ, ಈ ಬಾರಿ 22 ಸ್ಥಾನಗಳಲ್ಲಿ ಜಯ ಗಳಿಸಿ ಪ್ರತಿಪಕ್ಷ ಸ್ಥಾನ ಅಲಂಕರಿಸಿದೆ.

ಸತತ ಎರಡನೇ ಬಾರಿಗೆ ಮೋದಿ ಅಲೆಯನ್ನು ಮೀರಿ ನವೀನ್‌ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಇದರರ್ಥ ರಾಷ್ಟ್ರೀಯ ಟ್ರೆಂಡ್‌ನ್ನು ಕೂಡ ನಾವು ಹಿಂದಿಕ್ಕಿದ್ದೇವೆ.
– ಅಮರ್‌ ಪಟ್ನಾಯಕ್‌, ಬಿಜೆಡಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next