Advertisement

ಸೂರ್ಯ ಚಂದ್ರರ ಹುಟ್ಟು

08:39 PM Mar 30, 2019 | Sriram |

ಒಂದು ಹಳ್ಳಿಯಲ್ಲಿ ಓರ್ವ ಬಡ ಹೆಂಗಸಿದ್ದಳು. ಅವಳಿಗೆ ಒಬ್ಬ ಮಗಳು, ಒಬ್ಬ ಮಗ ಇದ್ದರು. ಗಂಡ ಅಕಾಲಿಕವಾಗಿ ಸತ್ತುಹೋಗಿದ್ದ. ಹೆಂಗಸು ಧನಿಕರೊಬ್ಬರ ಮನೆಗೆ ದುಡಿಯಲು ಹೋಗುತ್ತಿದ್ದಳು. ಅಲ್ಲಿ ಸಿಕ್ಕಿದ ವೇತನದಲ್ಲಿ ಮಕ್ಕಳನ್ನು ಸಲಹಿಕೊಂಡಿದ್ದಳು.

Advertisement

ಒಂದು ಸಲ ಧನಿಕನ ಹುಟ್ಟುಹಬ್ಬ ಬಂದಿತು. ಕತ್ತಲಾಗುವ ವರೆಗೂ ಔತಣ, ನೃತ್ಯಗಳಿಂದ ಧನಿಕ ದಿನವಿಡೀ ಸಂಭ್ರಮ ಆಚರಿಸಿದ. ಹೆಂಗಸು ತನ್ನ ಮನೆಗೆ ಹೊರಟು ನಿಂತಾಗ ಅಕ್ಕಿಯಿಂದ ತಯಾರಿಸಿದ ಎರಡು ತುಂಡು ಕೇಕ್‌ ತಂದು ಅವಳ ಕೈಯಲ್ಲಿರಿಸಿ, “ಇದನ್ನು ನಿನ್ನ ಮಕ್ಕಳಿಗೆ ಕೊಡು. ನಮ್ಮ ಮನೆಯ ಹಬ್ಬದೂಟದಲ್ಲಿ ಅವರಿಗೂ ಒಂದಿಷ್ಟು ಸಂತೋಷ ಸಿಗಲಿ” ಎಂದು ಹೇಳಿದ. ಹೆಂಗಸು ಅದನ್ನು ತನ್ನ ಬಟ್ಟೆಯಲ್ಲಿ ಜೋಪಾನವಾಗಿ ಕಟ್ಟಿಕೊಂಡು ಕಾಡು ದಾರಿಯಲ್ಲಿ ಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದಳು. ಆಗ ಒಂದು ಹೆಬ್ಬುಲಿ ಗರ್ಜಿಸುತ್ತ ಅವಳ ಮುಂದೆ ಬಂದಿತು.

“ಏನಿದು, ನಿನ್ನನ್ನು ತಿಂದು ಹಸಿವು ನೀಗಿಸಿಕೊಳ್ಳಬೇಕು ಅಂದುಕೊಂಡಿದ್ದರೆ ಯಾವುದೋ ಘಮಘಮ ಸುವಾಸನೆ ಬರುತ್ತ ಇದೆಯಲ್ಲ, ನಿನ್ನ ಬಳಿ ಏನಿದೆ?” ಎಂದು ಕೇಳಿತು.

ಹುಲಿಯನ್ನು ಕಂಡು ಹೆಂಗಸಿನ ಜಂಘಾಬಲವೇ ಉಡುಗಿ ಹೋಯಿತು.”ಹುಲಿಯಣ್ಣ, ಇವತ್ತು ಧನಿಕನ ಮನೆಯಲ್ಲಿ ಅವನ ಹುಟ್ಟುಹಬ್ಬ. ಹಲವಾರು ಬಗೆಯ ತಿಂಡಿಗಳಿದ್ದವು. ನನ್ನ ಮಕ್ಕಳಿಗಾಗಿ ಎರಡು ತುಂಡು ಕೇಕ್‌ ಕೊಟ್ಟಿದ್ದಾರೆ. ನಿನಗೆ ಪರಿಮಳ ಬಂದಿರುವುದು ಅದೇ ಹೊರತು ಬೇರೇನಲ್ಲ”ಎಂದಳು ಹೆಂಗಸು.

“”ಎಲ್ಲಿ, ಅದರಲ್ಲಿ ಒಂದು ಕೇಕ್‌ ನನಗೆ ಕೊಡು, ತಿಂದು ನೋಡುತ್ತೇನೆ” ಎಂದು ಹುಲಿ ಕೇಳಿತು. ಹೆಂಗಸು ಒಂದು ತುಂಡು ಅದಕ್ಕೆ ಕೊಡುತ್ತ,”ಹುಲಿಯಣ್ಣ, ನನಗೆ ಒಬ್ಬ ಮಗ, ಒಬ್ಬ ಮಗಳಿದ್ದಾರೆ. ಅವರಿಗಾಗಿ ಕೊಟ್ಟ ಕೇಕ್‌ನಲ್ಲಿ ಒಂದನ್ನು ಮಾತ್ರ ಕೊಡುತ್ತೇನೆ. ಆದರೆ ಇನ್ನೊಂದು ತುಂಡನ್ನು ನೀನು ಕೇಳಬಾರದು. ಕೇಕ್‌ ತಿಂದು ದೂರ ಹೋಗಬೇಕಲ್ಲದೆ ನನಗೇನೂ ತೊಂದರೆ ಮಾಡಬಾರದು” ಎಂದು ಬೇಡಿಕೊಂಡಳು.

Advertisement

ಹೆಂಗಸು ಕೊಟ್ಟ ಕೇಕನ್ನು ಹುಲಿ ತಿಂದಿತು. ಅದರ ಸ್ವಾದಕ್ಕೆ ಮಾರುಹೋಯಿತು.”ಬಹು ರುಚಿಯಾಗಿದೆಯಲ್ಲ, ಈ ವರೆಗೂ ಇಂಥ ತಿಂಡಿ ಬೇರೆಲ್ಲೂ ತಿಂದಿಲ್ಲ. ಎಲ್ಲಿ, ನಿನ್ನ ಬಳಿಯಿರುವ ಇನ್ನೊಂದು ತುಂಡನ್ನೂ ನನಗೇ ಕೊಡು. ಮಕ್ಕಳಿಗೆ ಇದನ್ನೆಲ್ಲ ಕೊಟ್ಟು ರುಚಿ ತೋರಿಸಿದರೆ ದಿನವೂ ಬೇಕು ಎಂದು ಹಟ ಹಿಡಿಯುತ್ತಾರೆ. ನಿನಗೆ ಬದುಕಬೇಕು ಎಂಬ ಬಯಕೆಯಿದ್ದರೆ ನನ್ನ ಆಸೆಯನ್ನು ಇಲ್ಲವೆನ್ನದೆ ಈಡೇರಿಸು” ಎಂದು ಹೇಳಿತು.
ವಿಧಿಯಿಲ್ಲದೆ ಹೆಂಗಸು ನೀಡಿದ ಕೇಕ್‌ ಹೊಟ್ಟೆ ಸೇರಿದ ಮೇಲೆ ಹುಲಿ ಮನಸ್ಸಿನಲ್ಲೇ ಕೇಕ್‌ ಎಷ್ಟೊಂದು ರುಚಿಯಾಗಿದೆ. ಇದನ್ನು ತಿಂದ ಹೆಂಗಸಿನ ಮಾಂಸ ಇನ್ನೆಷ್ಟು ರುಚಿಯಾಗಿರಬೇಡ! ಎಂದುಕೊಂಡು ಹೆಂಗಸಿಗೆ ಯಾವ ಮಾತೂ ಹೇಳದೆ ಅವಳ ಮೇಲೆ ಹಾರಿ ಅವಳನ್ನು ಕೊಂದು ತಿಂದುಬಿಟ್ಟಿತು.

ಆದರೂ ಹುಲಿಗೆ ಹಸಿವೆ ಇಂಗಲಿಲ್ಲ. ಹೆಂಗಸು ತನಗೆ ಇಬ್ಬರು ಮಕ್ಕಳಿದ್ದಾಳೆಂದು ಹೇಳಿದ್ದಾಳಲ್ಲ, ಅವರನ್ನೂ ತಿನ್ನಬೇಕು ಎಂದು ನಿರ್ಧರಿಸಿತು. ಹೆಂಗಸಿನ ಉಡುಪುಗಳನ್ನು ತಾನು ಧರಿಸಿಕೊಂಡಿತು. ಅವಳ ಮನೆಗೆ ಹೋಯಿತು. ಮುಚ್ಚಿರುವ ಬಾಗಿಲನ್ನು ತಟ್ಟಿತು. “ಬಾಗಿಲು ತೆರೆಯಿರಿ ಮಕ್ಕಳೇ, ನಾನು ನಿಮ್ಮ ಅಮ್ಮ ಬಂದಿದ್ದೇನೆ” ಎಂದು ಕೂಗಿತು. ಮಕ್ಕಳಿಗೆ ತಮ್ಮ ಅಮ್ಮ ಬಂದಿದ್ದಾಳೆಂಬ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಅವರು ಬಾಗಿಲು ತೆರೆಯಲಿಲ್ಲ.”ನಮ್ಮ ಅಮ್ಮನ ದನಿ ತುಂಬ ಇಂಪಾಗಿದೆ. ಅವಳ ಕಂಠ ಎಂದಿಗೂ ಇಷ್ಟು ಕಠೊರವಾಗಿರಲಿಲ್ಲ.ಸುಳ್ಳು ಹೇಳಬೇಡ, ನೀನು ನಮ್ಮ ಅಮ್ಮ ಅಲ್ಲವೇ ಅಲ್ಲ ಅನಿಸುತ್ತದೆ. ನಿನ್ನ ಕೈಗಳನ್ನೊಮ್ಮೆ ತೋರಿಸು, ನೋಡೋಣ” ಎಂದು ಹೇಳಿದರು.

“ಅಯ್ಯೋ ಮಕ್ಕಳೇ, ತಣ್ಣೀರು ಕುಡಿದು ಶೀತವಾಗಿದೆ. ನನ್ನನ್ನೂ ಅನುಮಾನಿಸುತ್ತೀರಲ್ಲ, ನನ್ನ ಕೈಗಳನ್ನು ತೋರಿಸುತ್ತೇನೆ. ನಂಬಿಕೆ ಬರುತ್ತದೋ ನೋಡಿ” ಎಂದು ಹುಲಿ ಕಿಟಕಿಯಲ್ಲಿ ಕೈಗಳನ್ನು ತೋರಿಸಿತು. ಮಕ್ಕಳು ಬೆಚ್ಚಿಬಿದ್ದರು.”ಇದು ನಮ್ಮ ಅಮ್ಮನ ಕೈ ಅಲ್ಲವಲ್ಲ! ಅವರ ಕೈಗಳು ಕೋಮಲವಾಗಿವೆ. ಇದರಲ್ಲಿ ತುಂಬ ರೋಮಗಳು ಕಾಣಿಸುತ್ತಿವೆ, ಅವಳ ಕೈಯಂತೆ ಬೆಳ್ಳಗೆ ಇಲ್ಲ. ನಾವು ಬಾಗಿಲು ತೆರೆಯುವುದಿಲ್ಲ” ಎಂದರು. “”ಕೈಗಳು ಬಿಳಿಯಾಗಿ ಕಾಣಿಸಬೇಕೆ? ಕಡು ಕತ್ತಲಲ್ಲಿ ನಿಮಗೆ ಸರಿಯಾಗಿ ಕಾಣಿಸಿಲ್ಲ” ಎಂದು ಹುಲಿಯು ಮೂಲೆಯಲ್ಲಿದ್ದ ಸುಣ್ಣದ ಹುಡಿಯಲ್ಲಿ ಕೈಗಳನ್ನು ಮುಳುಗಿಸಿ ಬಿಳಿಯಾಗಿದೆಯೆಂದು ಪ್ರದರ್ಶಿಸಿತು. ಮಕ್ಕಳು ಅದರ ಮಾತನ್ನು ನಂಬಿದರು. ಬಾಗಿಲು ತೆರೆದುಬಿಟ್ಟರು.

ಹುಲಿ ಒಳಗೆ ಬಂದಿತು.”ನನಗೆ ತುಂಬ ಹಸಿವೆಯಾಗಿದೆ ಮಕ್ಕಳೇ. ಬೇಗನೆ ಸ್ನಾನ ಮುಗಿಸಿ ಬಂದು ಊಟ ಮಾಡುತ್ತೇನೆ” ಎಂದು ಹೇಳಿ ಸ್ನಾನದ ಕೊಠಡಿಗೆ ಹೋಯಿತು. ಹುಡುಗನು ಅದರ ಹಿಂದೆ ಇರುವ ಬಾಲವನ್ನು ನೋಡಿದ. ಅಕ್ಕನನ್ನು ಕರೆದ. “ನೋಡಿದೆಯಾ, ಅದು ನಮ್ಮ ಅಮ್ಮ ಅಲ್ಲ, ಹುಲಿ! ಸ್ನಾನ ಮುಗಿಸಿ ಬಂದು ನಮ್ಮಿಬ್ಬರನ್ನೂ ಮುಗಿಸುತ್ತದೆ” ಎಂದು ಪಿಸುಗುಟ್ಟಿದ. ಅವಳು ಭಯಗೊಂಡಳು. “”ಹಾಗಿದ್ದರೆ ನಾವು ಈಗ ಏನು ಮಾಡಬೇಕು? ಸಾವಿನಿಂದ ಪಾರಾಗುವುದು ಹೇಗೆ?” ಎಂದು ಕೇಳಿದಳು. “ಹುಲಿ ಹೊರಗೆ ಬರುವ Êೂದಲು ಇಲ್ಲಿಂದ ಓಡಿ ಹೋಗಬೇಕು. ಯಾವುದಾದರೂ ಮರದ ಮೇಲೆ ಬೆಳಗಾಗುವ ವರೆಗೂ ಕುಳಿತಿರಬೇಕು” ಎಂದು ಹೇಳಿದ ಹುಡುಗ.

ಅಕ್ಕ ಮತ್ತು ತಮ್ಮ ಮನೆಯಿಂದ ಓಡಿ ಒಂದು ಮರದ ಮೇಲೆ ಹತ್ತಿ ಅಲ್ಲಿಯೇ ಕುಳಿತರು. ಹುಲಿ ಮರದ ಬಳಿಗೆ ಬಂದಿತು.”ನೀವು ಅಲ್ಲಿದ್ದೀರಾ, ಬಿಡುವುದಿಲ್ಲ ನಿಮ್ಮನ್ನು. ಅಲ್ಲಿಗೆ ಹೇಗೆ ಹತ್ತಿದಿರಿ ಎಂದು ಮೊದಲು ಹೇಳಿ. ಸತ್ಯ ಹೇಳದಿದ್ದರೆ ಮರವನ್ನೇ ಮುರಿದು ಹಾಕುತ್ತೇನೆ” ಎಂದು ಗರ್ಜಿಸಿತು.

ಹುಡುಗಿ ಹೆದರಲಿಲ್ಲ.”ಅಯ್ಯೋ ಹುಲಿಯಣ್ಣ, ಮರ ಹತ್ತುವುದು ಕಷ್ಟವೇನಲ್ಲ.ನಾವು ಒಂದು ಬಿಂದಿಗೆ ತೈಲ ತಂದು ಮರದ ಮೇಲೆಲ್ಲ ಸವರಿದ್ದೇವೆ.ಅದರಿಂದ ಸಲೀಸಾಗಿ ಮೇಲೇರಿದೆವು”ಎಂದಳು. ಹುಲಿ ಸಮೀಪದ ಊರಿಗೆ ಓಡಿತು. ಅಲ್ಲಿ ಗಾಣದಿಂದ ಎಣ್ಣೆ ಹಿಂಡುತ್ತಿದ್ದವನ ಮುಂದೆ ನಿಂತು ಬಾಯೆ¤ರೆಯಿತು. ಅವನು ಭಯಪಟ್ಟ.”ನನ್ನಿಂದ ಏನಾಗಬೇಕು ಹೇಳು.ಏನು ಹೇಳಿದರೂ ಕೊಡುತ್ತೇನೆ. ನನ್ನ ಜೀವ ಉಳಿಸಿದರೆ ಸಾಕು” ಎಂದು ಬೇಡಿಕೊಂಡ.

“ಚರ್ಮ ಮತ್ತು ಎಲುಬು ಮಾತ್ರ ಇರುವ ನಿನ್ನಿಂದ ನನಗೆ ಏನೂ ಲಾಭವಿಲ್ಲ.ತಕ್ಷಣ ಒಂದು ಬಿಂದಿಗೆ ತೈಲ ಬೇಕು, ಕೊಟ್ಟುಬಿಡು” ಎಂದು ಹುಲಿ ಕೇಳಿತು.

ಗಾಣದವನು ಕೊಟ್ಟ ತೈಲವನ್ನು ಹುಲಿ ಮರದ ಕಾಂಡಕ್ಕೆ ಸುರಿಯಿತು. ಆದರೆ ಎಷ್ಟು ಸಲ ಪ್ರಯತ್ನಿಸಿದರೂ ಜಾರುವ ಮರವನ್ನು ಏರಲು ಅದರಿಂದ ಆಗಲಿಲ್ಲ. ಅದು ಮರದಿಂದ ಜಾರುತ್ತಿರುವುದನ್ನು ಕಂಡು ಗುಳ್ಳೆನರಿ ಜೋರಾಗಿ ನಕ್ಕಿತು.”ಯಾಕೆ ನಗುತ್ತೀಯೇ?” ಕೇಳಿತು ಹುಲಿ. “ನಿನ್ನ ಅವಿವೇಕಕ್ಕೆ ನಗದೆ ಇರಲು ಸಾಧ್ಯವೆ? ತೈಲ ಹಚ್ಚಿದರೆ ಮರ ಏರಲು ಆಗುತ್ತದೆಯೆ? ಒಂದು ಕೊಡಲಿ ತಂದು ಮರಕ್ಕೆ ಅಲ್ಲಲ್ಲಿ ಮೆಟ್ಟಲುಗಳನ್ನು ಕಡಿದರೆ ಮೇಲೆ ಏರಬಹುದು. ನೀನು ಕೊಡಲಿ ತರುವ ವರೆಗೂ ಮರದ ಮೇಲಿದ್ದವರು ತಪ್ಪಿಸಿಕೊಳ್ಳದಂತೆ ನಾನು ಕಾವಲು ಇರುತ್ತೇನೆ” ಎಂದು ನರಿ ಉಪಾಯ ಹೇಳಿತು.

ಹುಲಿ ಮತ್ತೆ ಹಳ್ಳಿಗೆ ಹೋಯಿತು. ಕಟ್ಟಿಗೆ ಕಡಿಯುವವನನ್ನು ಬೆದರಿಸಿ ಕೊಡಲಿಯನ್ನು ಕಿತ್ತುಕೊಂಡು ಬಂದಿತು. ಮರದ ಕಾಂಡದಲ್ಲಿ ಮೆಟ್ಟಿಲುಗಳನ್ನು ಕಡಿಯತೊಡಗಿತು. ಆಗ ಆಕಾಶದ ಕಡೆಗೆ ನೋಡಿ ಮಕ್ಕಳಿಬ್ಬರೂ,”ದೇವರೇ, ರಕ್ಷಿಸು. ನಾವಿಬ್ಬರೂ ಹುಲಿಯ ಆಹಾರವಾಗುವ ಮೊದಲು ನಮಗೆ ಆಕಾಶಕ್ಕೇರಲು ಒಂದು ಹಗ್ಗವನ್ನು ಎಸೆದುಬಿಡು” ಎಂದು ಕೂಗಿದರು. ಆಗ ಮೇಲಿನಿಂದ ಒಂದು ಗಟ್ಟಿಯಾದ ಹಗ್ಗವು ಸರಸರನೆ ಅವರ ಬಳಿಗೆ ಇಳಿದು ಬಂದಿತು. ಮಕ್ಕಳು ಹಗ್ಗವನ್ನು ಹಿಡಿದುಕೊಂಡು ಮೇಲೆ ಮೇಲೆ ಏರಲಾರಂಭಿಸಿದರು.

ಆಗ ಹುಲಿಯು ತನಗೂ ಒಂದು ಹಗ್ಗ ಇಳಿಸಲು ದೇವರನ್ನು ಬೇಡಿತು. ಆಕಾಶದಿಂದ ಹಗ್ಗ ಇಳಿದುಬಂತು. ಹುಲಿ ಅದನ್ನು ಹಿಡಿದು ಏರುವಾಗ ಅದರ ಹಿಂದಿನಿಂದ ನರಿಯೂ ಏರತೊಡಗಿತು. ಆದರೆ ಅವುಗಳ ಭಾರ ತಾಳಲಾಗದೆ ಹಗ್ಗವು ತುಂಡಾಗಿ ನರಿ ಮತ್ತು ಹುಲಿ ಒಂದು ನೀರು ತುಂಬಿದ ಬಾವಿಗೆ ಬಿದ್ದು ಸತ್ತುಹೋದವು.

ಆಕಾಶ ತಲುಪಿದ ಮಕ್ಕಳನ್ನು ಕಂಡು ದೇವರಿಗೆ ಸಂತೋಷ ವಾಯಿತು. ಹುಡುಗಿಯೊಂದಿಗೆ, “ರೂಪವತಿಯಾ ಗಿರುವ ನೀನು ಸೂರ್ಯನಾಗಿ ಆಕಾಶವಿಡೀ ಸಂಚರಿಸುತ್ತ ಊರಿಗೆ ಬೆಳಕು ಕೊಡು” ಎಂದು ಹೇಳಿದ.

ಹುಡುಗಿ,”ಇದರಿಂದ ನನಗೆ ಸಂತೋಷವಾಗುತ್ತದೆ. ಆದರೆ ರಾತ್ರೆ ಕತ್ತಲಿಗೆ ಭಯವಾಗುತ್ತದಲ್ಲ, ಇದಕ್ಕೆ ಏನು ಮಾಡಲಿ?” ಎಂದು ಕೇಳಿದಳು.”ನಿನ್ನ ಅಣ್ಣನನ್ನು ತಂಪಾದ ಬೆಳಕು ನೀಡುವ ಚಂದ್ರನಾಗಿ ಮಾಡಿ ಆಕಾಶದಲ್ಲಿ ನಿನ್ನ ಜೊತೆಗೆ ಇರುವ ಹಾಗೆ ಮಾಡಿದರಾಯಿತಲ್ಲ”ಎಂದು ಹೇಳಿ ದೇವರು ಹಾಗೆಯೇ ಮಾಡಿದ,ಲೋಕಕ್ಕೆ ಹಿತ ನೀಡಿದ.

– ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next