Advertisement

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

01:29 AM Sep 30, 2024 | Team Udayavani |

ಉಡುಪಿ: ಇನ್ನು ನಗರಸಭೆ ವ್ಯಾಪ್ತಿಯಲ್ಲಿ ಜನಿಸಿರುವ ಮಕ್ಕಳ ಮನೆಗೇ ಬರಲಿದೆ ಜನನ ಪ್ರಮಾಣ ಪತ್ರ. ಜತೆಗೆ ನಗರಸಭೆಯಿಂದ ಸಿಹಿತಿಂಡಿಯೂ ಇರಲಿದೆ!

Advertisement

ನಗರಸಭೆಯಲ್ಲಿ ಜನನ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಪ್ರಯಾಸಪಡುವುದನ್ನು ಗಮನಿಸಿದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಜನರ ಕಷ್ಟ ಪರಿಹಾರಕ್ಕೆ ಇಂಥದ್ದೊಂದು ಹೊಸ ಹಾಗೂ ಮಾದರಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ನಗರದಲ್ಲಿ ಜನಿಸಿದ ಪ್ರತಿ ಮಗುವಿನ ಮನೆಗೆ ಜನನ ಪ್ರಮಾಣ ಪತ್ರವನ್ನು ಸ್ವೀಟ್‌ ಬಾಕ್ಸ್‌ ಹಾಗೂ ಮಗುವು ನಗರದ ಶ್ರೇಷ್ಠ ಪ್ರಜೆಯಾಗಿ ರೂಪುಗೊಳ್ಳಲಿ ಎಂಬ ಶುಭ ಸಂದೇಶದೊಂದಿಗೆ ತಲುಪಿಸಲು ಚಿಂತನೆ ನಡೆಸಲಾಗುತ್ತಿದೆ.

ಈಗಿನ ಕಿರಿಕಿರಿಯೇನು?
ಸದ್ಯ ನಗರಸಭೆಯಲ್ಲಿ ಜನನ, ಮರಣ ಪತ್ರ ದಾಖಲಾತಿ (ಅರ್ಜಿ ಸ್ವೀಕಾರ ಹಾಗೂ ವಿತರಣೆ ವಿಭಾಗ) ವಿಭಾಗದ ಸಿಬಂದಿಯು ಜನರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂಬ ದೂರು ಇದೆ. ಹಲವು ಬಾರಿ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು, ಸಿಬಂದಿ ಬದಲಾವಣೆಗೂ ಆಗ್ರಹ ಕೇಳಿ ಬಂದಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದೆ ಇರುವುದರಿಂದ ಸಮಸ್ಯೆಯೂ ಬಗೆಹರಿ ದಿಲ್ಲ. ಈಗ ಚುನಾಯಿತರ ಆಡಳಿತ ಪುನಃ ಆರಂಭವಾಗಿದ್ದು, ಈ ವಿಭಾಗದ ಸಿಬಂದಿ ಬದಲಾವಣೆಯೂ ನಡೆದಿದೆ.

ಏನಿದು ಹೊಸ ಯೋಜನೆ?
ಮಗು ಹುಟ್ಟಿದಾಗ ಆ ಮನೆಯಲ್ಲಿ ಸಂತೋಷ, ಸಂಭ್ರಮ ಇರುತ್ತದೆ. ಪ್ರತಿ ಮಗುವೂ ನಗರದ ಹೆಮ್ಮೆ. ಜನನ ಪ್ರಮಾಣ ಪತ್ರವನ್ನು ನಗರಸಭೆ ಸಿಬಂದಿಯೇ ನೇರವಾಗಿ ಮಗುವಿನ ಮನೆಗೆ ತೆರಳಿ ಸ್ವೀಟ್‌ ಬಾಕ್ಸ್‌ ಹಾಗೂ ಶುಭ ಸಂದೇಶದೊಂದಿಗೆ ನೀಡಲಿದ್ದಾರೆ. ಇದರ ಜತೆಗೆ ಇನ್ನೇನಾದರೂ ಸೇರಬೇಕೆ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ಆಸ್ಪತ್ರೆಗಳೇ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡುತ್ತಿವೆ. ಆದರೂ ಮಗುವಿನ ಪಾಲಕ, ಪೋಷಕರು ಅರ್ಜಿ ಸಲ್ಲಿಸಿದ ಬಳಿಕ ನಿರ್ದಿಷ್ಟ ದಿನಗಳೊಳಗೆ ನಗರಸಭೆಗೆ ಬಂದು ಪ್ರಮಾಣ ಪತ್ರವನ್ನು ಪಡೆಯಬೇಕಿತ್ತು.

Advertisement

ಸಿಬಂದಿ ನಿರ್ವಹಣೆ ಸವಾಲು
ಯೋಜನೆ ಅನುಷ್ಠಾನಕ್ಕೆ ಸಿಬಂದಿ ನಿರ್ವಹಣೆಯೇ ಸವಾಲು. ವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ನಗರಸಭೆ ರೂಪುರೇಷೆ ಸಿದ್ಧಪಡಿಸಲಿದೆ. ಇದಕ್ಕೆ ನಿರ್ದಿಷ್ಟ ಸಿಬಂದಿಯನ್ನು ನಿಯೋಜಿಸಿದಾಗ ಮಾತ್ರ ಯೋಜನೆಯ ಸಮರ್ಪಕ ಅನುಷ್ಠಾನ ಸಾಧ್ಯ.

ನಗರ ವ್ಯಾಪ್ತಿಯ ನಾಗರಿಕರಿಗೆ ನಗರಸಭೆಯಿಂದ ಸುಲಭವಾಗಿ ಸೇವೆ ದೊರೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸುತ್ತಿದ್ದೇವೆ. ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಇದಕ್ಕೊಂದು ಸ್ಪಷ್ಟ ರೂಪ ನೀಡಿ, ಅನುಷ್ಠಾನ ಮಾಡಲಿದ್ದೇವೆ. ನಗರಸಭೆ ವ್ಯಾಪ್ತಿಯಿಂದ ಹೊರಗಿರುವವರಿಗೆ ಇದು ಅನ್ವಯವಾಗುವುದಿಲ್ಲ.
– ಪ್ರಭಾಕರ ಪೂಜಾರಿ, ಅಧ್ಯಕ್ಷರು ನಗರಸಭೆ ಉಡುಪಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next