Advertisement

ರೆಕ್ಕೆ ಅಲುಗಿಸದೆ ನೂರಾರು ಕಿ.ಮೀ ಕ್ರಮಿಸುವ ಪಕ್ಷಿ

10:05 AM Apr 26, 2019 | Hari Prasad |

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

Advertisement

ಉಳಿತಾಯ ಎನ್ನುವುದು ದುಡ್ಡಿನ ವಿಷಯದಲ್ಲಷ್ಟೇ ಅಲ್ಲ, ಇತರೆ ವಿಚಾರಗಳಲ್ಲೂ ಬಳಕೆಗೆ ಬರುತ್ತದೆ. ಉದಾಹರಣೆಗೆ, “ಎನರ್ಜಿ ವೇಸ್ಟ್‌ ಮಾಡೋಕೆ’ ಇಷ್ಟ ಇಲ್ಲ ಎನ್ನುವ ಮಾತು ಕೇಳಿರಬಹುದು. ಸುಖಾಸುಮ್ಮನೆ ಜಗಳ ಮಾಡಲು ಇಷ್ಟವಿಲ್ಲದಾಗ ಈ ಮಾತು ಹೇಳುತ್ತಾರೆ. ಆದರೆ, ಎನರ್ಜಿ ಉಳಿತಾಯದ ವಿಷಯ ತುಂಬಾ ದೂರಕ್ಕೆ ಸಾಗುತ್ತದೆ.

ಸೈಕಲ್‌ ತುಳಿಯುವಾಗ ತಗ್ಗು ರಸ್ತೆ ಸಿಕ್ಕರೆ ಆನಂದವೋ ಆನಂದ. ಏಕೆಂದರೆ, ಅಲ್ಲಿಯವರೆಗೆ ಪೆಡಲ್‌ ತುಳಿದೂ ತುಳಿದು ಬಸವಳಿದ ನಮಗೆ ತಗ್ಗಿನಲ್ಲಿ ಪೆಡಲ್‌ ತುಳಿಯದೇ ಸೈಕಲ್‌ ನಡೆಸಬಹುದಲ್ಲ ಎಂಬುದೇ ಖುಷಿ. ಇದನ್ನೂ ಎನರ್ಜಿ ಉಳಿತಾಯದ ಖಾತೆಗೆ ಸೇರಿಸಬಹುದು. ನಾವೋ, ತಗ್ಗಿನಲ್ಲಿ ಒಂದರ್ಧ ಕಿ.ಮೀ ಎನರ್ಜಿ ಉಳಿತಾಯ ಮಾಡಿದ್ದಕ್ಕೇ ಈ ಪರಿ ಸಂತಸಪಟ್ಟುಕೊಳ್ಳುತ್ತೇವೆ.

ಆ ಲೆಕ್ಕದಲ್ಲಿ ಅಲ್ಬಟ್ರಾಸ್‌ ಎನ್ನುವ ಕಡಲ ಪಕ್ಷಿ ನಮಗಿಂತಲೂ ಸಾವಿರ ಪಾಲು ಹೆಚ್ಚು ಸಂತಸಪಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ, ಅದು ರೆಕ್ಕೆಯನ್ನು ಒಂದಿನಿತೂ ಮಿಟುಕಿಸದೆ 800- 900 ಕಿ.ಮೀ ದೂರವನ್ನು ಕ್ರಮಿಸುತ್ತದೆ! ಅಂಟಾರ್ಟಿಕ್‌ ಸಾಗರ ಮತ್ತು ಉತ್ತರ ಪೆಸಿಫಿಕ್‌ ಸಾಗರದಲ್ಲಿ ಈ ಪಕ್ಷಿಗಳು ಕಂಡು ಬರುತ್ತವೆ. ಸಂಶೋಧಕರು ವರ್ಷಗಳಿಂದ ಈ ಪಕ್ಷಿಯ ಬೆನ್ನು ಬಿದ್ದಿದ್ದಾರೆ. ಅದರ ಹಾರಾಟದ ರಹಸ್ಯವನ್ನು ಕೂಲಂಕಷವಾಗಿ ತಿಳಿದುಕೊಳ್ಳುವುದು ಅವರ ಉದ್ದೇಶ.

ಜಿ.ಪಿ.ಎಸ್‌ ಮತ್ತಿತರ ಆಧುನಿಕ ತಂತ್ರಜ್ಞಾನವನ್ನು ಇದಕ್ಕಾಗಿ ಬಳಸುತ್ತಿದ್ದಾರೆ. ಒಂದುವೇಳೆ, ಈ ರಹಸ್ಯವನ್ನು ತಿಳಿದುಕೊಂಡುಬಿಟ್ಟರೆ ವಿಮಾನಗಳು ಗ್ಯಾಲನ್‌ಗಟ್ಟಲೆ ಇಂಧನವನ್ನು ಉಳಿಸುವಂತೆ ಮಾಡಬಹುದು ಎನ್ನುವುದು ಅವರ ಲೆಕ್ಕಾಚಾರ. ಇದರಿಂದ ಬರೀ ಇಂಧನ ಮಾತ್ರವೇ ಅಲ್ಲ, ಮುಚ್ಚುವ ಹಂತದಲ್ಲಿರುವ ನಮ್ಮ ವಿಮಾನಯಾನ ಸಂಸ್ಥೆಗಳನ್ನು ಕೂಡಾ ಉಳಿಸಿಕೊಳ್ಳಬಹುದೇನೋ…!

ಈ ಹುಳಕ್ಕೆ ಕಣ್ಣು ಯಾಕಿಲ್ಲ?


ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲಿಲ್ಲ ಎನ್ನುವ ನಾಣ್ಣುಡಿಯನ್ನು ಕೇಳಿರಬಹುದು. ಇದು ಮಾನವ ನಿರ್ಮಿತ ಸಮಾಜದ ಸ್ಥಿತಿಯನ್ನು ಸೂಚ್ಯವಾಗಿ ತಿಳಿಸುತ್ತದೆ. ತಾರತಮ್ಯ ಎನ್ನುವುದು ನಮ್ಮಲ್ಲಿರಬಹುದು ಆದರೆ ಪ್ರಕೃತಿಯಲ್ಲಿಲ್ಲ. ಯಾವ ಜೀವಿಗೆ ಏನೇನು ಅಗತ್ಯವೋ ಅದನ್ನು ಅದರ ಭೌಗೋಳಿಕ ಪರಿಸರಕ್ಕೆ ತಕ್ಕಂತೆ, ಅಸ್ತಿತ್ವಕ್ಕೆ ಸಹಾಯವಾಗುವಂತೆ ದಯಪಾಲಿಸಿದೆ ಪ್ರಕೃತಿ.

Advertisement

ಸ್ಪ್ರಿಂಗ್‌ಟೇಲ್‌ ಎಂಬ ಹುಳ ಅದಕ್ಕೆ ಸಾಕ್ಷಿ. ಇಲ್ಲಿಯತನಕ ಚೇಳು ಮತ್ತು ಸಿಲ್ವರ್‌ಫಿಶ್‌ ಭೂಮಿಯ ಅತ್ಯಂತ ಆಳದಲ್ಲಿ (ಮುಕ್ಕಾಲು ಕಿ.ಮೀ) ಪತ್ತೆಯಾದ ಜೀವಿ ಎಂದೇ ಪರಿಗಣಿತವಾಗಿದ್ದವು. ಆದರೆ 2 ಕಿ.ಮೀ ಆಳದ ಗುಹೆಯಲ್ಲಿ ಸಿಕ್ಕ ಸ್ಪ್ರಿಂಗ್‌ಟೇಲ್‌ ಆ ದಾಖಲೆಯನ್ನು ಮುರಿದಿತ್ತು. ಈ ಹುಳಕ್ಕೆ ಕಣ್ಣುಗಳಿಲ್ಲ. ಬಹುತೇಕ ಜೀವಿಗಳಿಗೆ ಹುಳ ಹುಪ್ಪಟೆಗಳಿಗೆ ಕಣ್ಣುಗಳನ್ನು ದಯಪಾಲಿಸಿರುವ ಪ್ರಕೃತಿ ಇದಕ್ಕೆ ಯಾಕೆ ಕಣ್ಣುಗಳನ್ನು ನೀಡಿಲ್ಲ? ಅದಕ್ಕೆ ಕಾರಣ, ಅದು ವಾಸಿಸುವ ಪರಿಸರ.

ಭೂಮಿಯಿಂದ ಎರಡು ಕಿ.ಮೀ ಆಳದಲ್ಲಿ ಬೆಳಕು ಇಲ್ಲವೇ ಇಲ್ಲ. ಬರೀ ಕತ್ತಲು. ಅಲ್ಲಿ ಕಣ್ಣುಗಳಿದ್ದರೂ ಪ್ರಯೋಜನವಿಲ್ಲ. ಸ್ಪ್ರಿಂಗ್‌ಟೇಲ್‌ಗೆ ಕಣ್ಣುಗಳಿಲ್ಲದಿರುವುದಕ್ಕೆ ಕಾರಣ ಈಗ ತಿಳಿಯಿತಲ್ಲ?! ಯಾರಿಗೆ ಏನು ಅಗತ್ಯವೋ ಅದನ್ನು ನೀಡುವಲ್ಲಿ ಸೃಷ್ಟಿ ಹಿಂದೆ ಬಿದ್ದಿಲ್ಲ, ಅದೇ ರೀತಿ ಯಾರಿಗೆ ಏನು ಅಗತ್ಯವಿಲ್ಲವೋ ಅದನ್ನು ಕಿತ್ತುಕೊಳ್ಳುವುದರಲ್ಲಿಯೂ ಸೃಷ್ಟಿ ಹಿಂದೆ ಬಿದ್ದಿಲ್ಲ!

— ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next