Advertisement

ಕಾಡಿನ ಮಕ್ಕಳಿಗಾಗಿ ಮಿಡಿಯುವ ಹಾಡು ಹಕ್ಕಿ

01:00 AM Mar 08, 2019 | Team Udayavani |

ಕುಂದಾಪುರ: ಸಂಗೀತಗಾರರಾಗಿ ಅಪಾರ ಹಣ, ಹೆಸರು ಸಂಪಾದನೆ ಮಾಡಲು ಸಾಧ್ಯವಿದ್ದರೂ ಸಂಗೀತದಿಂದ ಬಂದ ಹಣವನ್ನು ಆದಿವಾಸಿಗಳಿಗೆ, ರೋಗಿಗಳಿಗೆ ಹಂಚಿ ನೆಮ್ಮದಿ ಕಂಡವರು ಕುಂದಾಪುರದ ವೆಸ್ಟ್‌ಬ್ಲಾಕ್‌ ರಸ್ತೆ ನಿವಾಸಿ ಆಶಾ ಶಿವಾನಂದ ನಾಯಕ್‌.

Advertisement

ಬಾಲ್ಯದಿಂದಲೇ ಸಂಗೀತಾಸಕ್ತಿ
ಕುಂದಾಪುರದಲ್ಲಿ ಜನಿಸಿದ ಆಶಾ ತನ್ನ 10ನೇ ವಯಸ್ಸಿನಲ್ಲಿ ವಾಸುದೇವ ನಾಯಕ್‌ ಬಳಿ ಸಂಗೀತ ಕಲಿತರು. ಕಾರ್ಪೊರೇಶನ್‌ ಬ್ಯಾಂಕ್‌ನ ಅಧಿಕಾರಿ ಪಾಂಗಾಳ ಶಿವಾನಂದ ನಾಯಕ್‌ ಅವರನ್ನು ವಿವಾಹವಾದ ಬಳಿಕ ಮುಂಬಯಿಯಲ್ಲಿ ನೆಲೆಸಿ ಕೆ.ಎಂ. ದಾಸ್‌ ಅವರಿಂದ ಖಯಾಲ್‌ ಗಾಯಕ್‌ ಕಲಿತು ಸೀನಿಯರ್‌ ಗ್ರೇಡ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ, ಸುರ್‌ಸಿಂಗಾರ್‌ ಸಂಸತ್‌ ನಡೆಸಿದ ಸ್ಪರ್ಧೆಯಲ್ಲಿ ದೇಶಕ್ಕೆ 5ನೇ ಸ್ಥಾನ ಗಳಿಸಿದರು. ಮಧುಕರ್‌ ಪನ್ಹಾಳ್‌ಕರ್‌ ಬಳಿ ಅಭ್ಯಸಿಸಿ ವಿಶಾರದ ಪದವಿ, ಎಸ್‌ಎನ್‌ಡಿಟಿ ವಿ.ವಿ.ಯಲ್ಲಿ ಪ್ರಬಾತ್ರೆ ಮಾರ್ಗದರ್ಶನದಲ್ಲಿ ಎಂಎ, ವೈಜಯಂತಿ ಜೋಷಿ ಮಾರ್ಗದರ್ಶನದಲ್ಲಿ ಎಂಫಿಲ್‌ ಮಾಡಿದರು.

ದೇಶ-ವಿದೇಶಗಳಲ್ಲಿ ಹಿಂದೂಸ್ತಾನಿ ಸಂಗೀತ ಕಛೇರಿ ನೀಡಿದ ಹೆಗ್ಗಳಿಕೆ ಇದೆ. ದೂರದರ್ಶನ ಚಂದನ ವಾಹಿನಿಯಲ್ಲೂ ಕಛೇರಿಗಳು ಪ್ರಸಾರವಾಗಿವೆ. ಈಗ  ಆನ್‌ಲೈನ್‌ ಮೂಲಕ ಅಮೆರಿಕ, ಲಂಡನ್‌ ಮೊದಲಾದ ರಾಷ್ಟ್ರಗಳ ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಹಾಗೂ ಸ್ತೋತ್ರ ಗಾಯನ ಹೇಳಿಕೊಡುತ್ತಿದ್ದಾರೆ. ಸಾಮವೇದ ಹಾಗೂ ಸಂಗೀತದ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

ಅದೊಂದು ದಿನ…
ಮುಂಬಯಿಯಲ್ಲಿದ್ದಾಗ ಕ್ಯಾನ್ಸರ್‌ ಪೀಡಿತ ಮಕ್ಕಳ ವಾರ್ಡ್‌ಗೆ ಭೇಟಿ ನೀಡಿದ್ದ ಸಂದರ್ಭ ಅಲ್ಲಿ ಕಂಡ ಮಕ್ಕಳ ವೇದನೆ ಕರುಳು ಹಿಂಡಿತು. ಎರಡು ತಿಂಗಳ ಮಗುವಿನ ಹೊಟ್ಟೆಯ ಹೊರಗೆ ಗಡ್ಡೆಯೊಂದು ಕಂಡು ಅದರ ಅಮ್ಮ ಅಳುತ್ತಿದ್ದ, ಮಗುವನ್ನು ಬದುಕಿಸಲು ಪ್ರಯತ್ನ ಪಡುತ್ತಿದ್ದ ದೃಶ್ಯ ಮನದಲ್ಲಿ ಅಚ್ಚೊತ್ತಿತು. ಅಂದೇ ನಿರ್ಧರಿಸಿ ತನ್ನ ಆದಾಯದ ಬಹುಪಾಲನ್ನು ಸಮಾಜಸೇವೆಗೆ ನೀಡುತ್ತಿದ್ದಾರೆ. ಕ್ಯಾನ್ಸರ್‌ಗೆ ಒಳಗಾದ ರೋಗಿಗಳಿಗೂ ತಿಳಿಯದಂತೆ ಆಸ್ಪತ್ರೆಗೆ ನೇರ ಹಣ ಪಾವತಿ ಮಾಡುತ್ತಿದ್ದಾರೆ. ನೀಳಗೂದಲನ್ನು ಕತ್ತರಿಸಿ ಚಿಕಿತ್ಸೆಗೆ ಒಳಗಾಗಿ ಕೂದಲು ಕಳೆದುಕೊಂಡ ಮಹಿಳಾ ಕ್ಯಾನ್ಸರ್‌ ರೋಗಿಗಳಿಗೆ ವಿಗ್‌ ಮಾಡಲು ಕೊಟ್ಟಿದ್ದಾರೆ. 

ಪರಮಹಂಸ ಯೋಗಾನಂದರ ಅನುಯಾಯಿಯಾಗಿರುವ ಇವರು ರಾಂಚಿಯಲ್ಲಿರುವ ಆಶ್ರಮದ ಮೂಲಕ ಆದಿವಾಸಿಗಳ ಶಿಕ್ಷಣದ ವೆಚ್ಚ ಭರಿಸುತ್ತಿದ್ದಾರೆ. ಬಡವರು, ಅನಾಥರಿಗೆ ನೆರವಾಗುತ್ತಿದ್ದಾರೆ. ಸತತ ಎರಡು ವರ್ಷ ಪ್ರತಿ ಶನಿವಾರ ಉಡುಪಿ ಸರಕಾರಿ ಆಸ್ಪತ್ರೆಯ 101 ರೋಗಿಗಳಿಗೆ ಹಣ್ಣುಹಂಪಲು ಕೊಟ್ಟದ್ದೂ ಸೇರಿದಂತೆ ವಿವಿಧ ಶಾಲೆಗಳಿಗೆ ಕೊಡುತ್ತಿರುವ ಶೈಕ್ಷಣಿಕೆ ಸಹಕಾರ ದೊಡ್ಡದಿದೆ.

Advertisement

–  ಲಕ್ಷ್ಮೀ  ಮಚ್ಚಿ

Advertisement

Udayavani is now on Telegram. Click here to join our channel and stay updated with the latest news.

Next