Advertisement
ಮೇಲಿನಿಂದ ಕೆಳಗಡೆ ಬಿದ್ದಿದ್ದವನಿಗೆ ಮೊಣಕಾಲು ಗಾಯವಾಗಿತ್ತು. ಠಾಣೆಯಲ್ಲಿಯೇ ಪ್ರಥಮ ಚಿಕಿತ್ಸೆ ಕೊಡಿಸಿದರು. ಪೊಲೀಸರ ಪ್ರಶ್ನೆಗಳಿಗೆ ತಲೆ ಅಲ್ಲಾಡಿಸುವುದೊಂದನ್ನು ಬಿಟ್ಟು ಬೇರೆ ಏನನ್ನೂ ಹೇಳಲು ಸಿದ್ಧನಿರಲಿಲ್ಲ ಭೂಪ! ಹಲವು ಗಂಟೆಗಳ ವಿಚಾರಣೆ ಬಳಿಕ ತಲಪಾಡ್ ನವಗಾನ್ ಎಂದು ನನ್ನ ಹೆಸರು ಎಂದು ತಿಳಿಸಿದ್ದ.
Related Articles
Advertisement
ಕೋಟ್ಯಾಧಿಪತಿ ಕುಳ “ತಲಪಾಡ್’: ಆರೋಪಿ ತಲಪಾಡ್‌ನನ್ನು ಅವನ ಸ್ವಂತ ಊರಾದ ಓಡೆ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದ ಪೊಲೀಸರಿಗೇ ಅಚ್ಚರಿ ಕಾದಿತ್ತು. ಬರೋಬ್ಬರಿ 2 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಐಶಾರಾಮಿ ಮನೆ ಆತನದ್ದಾಗಿತ್ತು. ಟ್ರಾಕ್ಟರ್, ಜೆಸಿಬಿ ಒಡೆಯ ಆತನಾಗಿದ್ದ. ಆತನ ಹಣಕಾಸು ವ್ಯವಹಾರ ನೋಡಿಕೊಳ್ಳಲು ಪದವೀಧರ ಯುವಕನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಎಂಬ ಸಂಗತಿಯೂ ಬಯಲಾಯಿತು.
ಮತ್ತೂಂದೆಡೆ ತಲಪಾಡ್‌ನ ಹಿನ್ನೆಲೆ ಕೆದಕುತ್ತಾ ಹೋದ ಪೊಲೀಸರಿಗೆ ಹಲವು ಕುತೂಹಲ ಸಂಗತಿಗಳು ಹೊರಬಿದ್ದವು. ತಲಪಾಡ್ ಇಡೀ ಕುಟುಂಬಕ್ಕೆ ಕಳ್ಳತನ ವೃತ್ತಿಯಾಗಿತ್ತು. ತಂದೆಯಿಂದಲೇ ಬಳುವಳಿಯಾಗಿ ತಲಪಾಡ್ ಹಾಗೂ ಆತನ ಸಹೋದರ ಮನೆಗಳವು ಕೃತ್ಯವನ್ನು ಮುಂದುವರಿಸಿಕೊಂಡು ಬಂದಿದ್ದರು.
ಚೆನೈ, ಹೈದ್ರಾಬಾದ್, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ತಿಂಗಳುಗಟ್ಟಲೆ ಠಿಕಾಣಿ ಹೂಡುತ್ತಿದ್ದ ಆತ ಮನೆಕಳ್ಳತನ ಮಾಡಿ ಚಿನ್ನಾಭರಣ ದೋಚುತ್ತಿದ್ದ. ಅವುಗಳನ್ನು ಮಾರಿ ಬಂದ ಹಣದಿಂದ ಸ್ಥಳೀಯ ರಾಜಕಾರಣಿಯಾಗಿಯೂ ಗುರ್ತಿಸಿಕೊಂಡಿದ್ದ. ತಮ್ಮ ಸಮುದಾಯದ ಜನರ ಮದುವೆ, ಸಮಾರಂಭಗಳು, ಕಷ್ಟ ಎಂದು ಬಂದರೆ ಸಹಾಯ ಹಸ್ತ ಚಾಚುತ್ತಿದ್ದ. ಹೀಗಾಗಿ ಆತನ ಸುಳಿವನ್ನು ಊರಿನವರು ಬಿಟ್ಟುಕೊಡುತ್ತಿರಲಿಲ್ಲ.
ಕಳವು ಮಾಡಿದ ಆಭರಣಗಳನ್ನು ಕರಗಿಸಲು ರಾಜು ಎಂಬಾತನಿಗೆ ಹೇಳುತ್ತಿದ್ದ. ಆತ ಕಳವು ಆಭರಣಗಳ ಸ್ವರೂಪ ಬದಲಿಸುತ್ತಿದ್ದ. ಚಿನ್ನದ ಬಿಸ್ಕತ್‌ಗಳಾಗಿ ಮಾರ್ಪಾಡಿಸುತ್ತಿದ್ದ. ಇನ್ನು ತಲಪಾಡ್‌ನ ಊರಿನಲ್ಲಿರುವ ಗುತ್ತಿಗೆ ವ್ಯವಹಾರ, ಇನ್ನಿತರೆ ಹಣಕಾಸು ವ್ಯವಹಾರಗಳನ್ನು ಪದವೀಧರ ನಿತೇಶ್ ಪಾಂಚಾಲ್ ನೋಡಿಕೊಳ್ಳುತ್ತಿದ್ದ.
ತಂದೆಯ ಚಿನ್ನಲೇಪಿತ ವಿಗ್ರಹಕ್ಕೆ ನಿತ್ಯಪೂಜೆ!: ತಲಪಾಡ್ ಊರಿನಲ್ಲೊಂದು ಗ್ರಾಮ ದೇವತೆಯ ದೇವಾಲಯ ಕಟ್ಟಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಯಿತು. ದೇವಾಲಯ ನೋಡಲು ಹೋದ ಪೊಲೀಸರಿಗೆ ಅಚ್ಚರಿ ಕಾದಿದ್ದು ದೇವಾಲಯದಲ್ಲಿ ದೇವತೆ ಸಮೀಪವೇ ಫ್ಯಾಂಟ್ ಷರ್ಟ್ ಧರಿಸಿದ ವ್ಯಕ್ತಿಯೊಬ್ಬನ ಮೂರ್ತಿಗೂ ಪೂಜೆ ನಡೆಯುತ್ತಿತ್ತು. ಮಾಹಿತಿ ಕೆದಕಿದಾಗ, ಅದು ತಲಪಾಡ್ ತಂದೆ ಪಂಜೀಹಾಭಾಯ್ ವಿಗ್ರಹ ಎಂಬ ಸತ್ಯ ಬಯಲಾಯಿತು.
ಕಳ್ಳತನದ ಬದುಕು ಕಟ್ಟಿಕೊಟ್ಟಿದ್ದ ತಂದೆಯನ್ನು ದೇವರ ರೀತಿ ನೋಡುತ್ತಿದ್ದ. ಹಾಗಾಗಿ ತಲಪಾಡ್ ತಂದೆಯ ವಿಗ್ರಹನ್ನು ಮಾಡಿಸಲು ನಿರ್ಧರಿಸಿ. ಅದರಂತೆ ಕಳವು ಮಾಡಿದ ತಾಮ್ರ ಹಾಗೂ ಬೆಳ್ಳಿ ಆಭರಣಗಳನ್ನು ಉಪಯೋಗಿಸಿ ಆಪ್ತ ರಾಜು ಕಡೆಯಿಂದ 20 ಕೆ.ಜಿಗೂ ಅಧಿಕ ತೂಕದ ತಂದೆ ವಿಗ್ರಹ ಮಾಡಿಸಿದ್ದ. ಆ, ವಿಗ್ರಹಕ್ಕೆ ಸುಮಾರು ಒಂದೂವರೆ ಕೆ.ಜಿಯಷ್ಟು ಚಿನ್ನ ಲೇಪನವನ್ನು ಮಾಡಿಸಿದ್ದ ದೇವಾಲಯದಲ್ಲಿಟ್ಟು ಪ್ರತಿನಿತ್ಯ ತಂದೆಗೆ ಪೂಜೆ ಸಲ್ಲುವಂತೆ ನೋಡಿಕೊಂಡಿದ್ದ.
ಕಳವಿಗೆ ಆಶೀರ್ವಾದ: ಅಂತಾರಾಜ್ಯಗಳಿಗೆ ಕಳ್ಳತನಕ್ಕೆ ತೆರಳುವ ಮುನ್ನ ತಂದೆಯ ಪ್ರತಿಮೆಗೆ ಪೂಜೆ ಸಲ್ಲಿಸಿಯೇ ಅಲ್ಲಿಂದ ಹೊರಡುತ್ತಿದ್ದ. ತಂದೆಯ ಆಶೀರ್ವಾದ ಇದ್ದರೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಅಚಲ ನಂಬಿಕೆ ಅವನದಾಗಿತ್ತು.
ಕಳ್ಳತನ ಮುಗಿಸಿಕೊಂಡು ವಾಪಾಸ್ ಬಂದ ಮೇಲೆ ಕೆಲವು ದಿನಗಳ ಮಟ್ಟಿಗೆ ಆ ಆಭರಣಗಳನ್ನು ತಂದೆಯ ವಿಗ್ರಹದ ಕೆಳಗಡೆ ಇಡುತ್ತಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಬಳಿಕ ಅದೇ ದೇವಾಲಯದಲ್ಲಿ ಆತನ ತಂದೆಯ ವಿಗ್ರಹವನ್ನು ಇನ್ನಿತರೆ ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಂಡು ಬರಲಾಗಿತ್ತು ಎಂದು ತನಿಖಾ ತಂಡದ ಅಧಿಕಾರಿ ವಿವರಿಸಿದರು.
2016ರಲ್ಲಿ ವಿಜಯನಗರ ಠಾಣೆಯ ಇನ್ಸ್‌ಪೆಕ್ಟರ್ ಎಚ್. ಬಿ ಸಂಜೀವ್‌ಗೌಡ ನೇತೃತ್ವದ ತನಿಖಾ ತಂಡ ತಲಪಾಡ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಇವರ ಬಂಧನದಿಂದ ಸಿ.ಕೆ ಅಚ್ಚುಕಟ್ಟು ಸೇರಿದಂತೆ ಹಲವು ಠಾಣೆಗಳ ಮನೆಕಳವು ಪ್ರಕರಣಗಳು ಬೆಳಕಿಗೆ ಬಂದವು. ವಿಜಯನಗರ ಠಾಣೆ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿ ಅನ್ವಯದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
* ಮಂಜುನಾಥ ಲಘುಮೇನಹಳ್ಳಿ