ನವದೆಹಲಿ:ರಾಷ್ಟ್ರಪತಿ ಭವನದ ಮುಂಭಾಗ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗಣ್ಯಾತೀಗಣ್ಯರು, ಸಚಿವರು ಕಾರುಗಳಲ್ಲಿ ಆಗಮಿಸಿದ್ದರು. ಆದರೆ ಇಬ್ಬರು ಸಚಿವರು ಮಾತ್ರ ಅದಕ್ಕೆ ಹೊರತಾಗಿದ್ದರು. ಯಾಕೆಂದರೆ ಅವರಿಬ್ಬರು ಸೈಕಲ್ ತುಳಿದು ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದರು!
ಅರೆ ಯಾರಪ್ಪಾ ಆ ಇಬ್ಬರು ಸಚಿವರು ಎಂದು ಹುಬ್ಬೇರಿಸುತ್ತಿದ್ದೀರಾ? ಬೇರೆ ಯಾರೂ ಅಲ್ಲ ಬಿಜೆಪಿಯ ಮನ್ ಸುಖ್ ಲಾಲ್ ಮಾಂಡವ್ಯ ಮತ್ತು ಅರ್ಜುನ್ ರಾಮ್ ಮೇಘವಾಲ್! ಇಬ್ಬರು ತಮ್ಮ ಮನೆಯಿಂದ ಸೈಕಲ್ ಹೊಡೆಯುತ್ತ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದು ಎಲ್ಲರ ಗಮನ ಸೆಳೆದಿತ್ತು!
ಹೌದು 64 ವರ್ಷದ ಮಾಂಡವ್ಯ ಕಳೆದ ಐದು ವರ್ಷಗಳ ಕಾಲ ಆಗಮಿಸಿದ್ದು ಸೈಕಲ್ ನಲ್ಲಿಯೇ. ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದರೆ, ಸೈಕಲ್ ಸವಾರಿ ಫ್ಯಾಶನ್ ಅಲ್ಲ, ಇದು ನನ್ನ ಫ್ಯಾಶನ್ ಎಂದು ಮಾಂಡವ್ಯ ಪ್ರತಿಕ್ರಿಯಿಸುತ್ತಿದ್ದರು ಎಂದು ವರದಿ ತಿಳಿಸಿದೆ.
ಸೌರಾಷ್ಟ್ರದ ಭಾವ್ ನಗರ್ ಜಿಲ್ಲೆಯ ಪಾಲಿಟಾಣಾ ತಾಲೂಕಿನ ಸಣ್ಣ ಹಳ್ಳಿ ಹಾನೋಲ್ ಎಂಬಲ್ಲಿ ಮಾಂಡವ್ಯ ಜನಿಸಿದ್ದರು. ಅವರದ್ದು ಪುಟ್ಟ ರೈತ ಕುಟುಂಬವಾಗಿತ್ತು. 2002ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮಾಂಡವ್ಯ ಗೆಲುವು ಸಾಧಿಸಿದ್ದರು. ಆಗ ಈ ಯುವ ಶಾಸಕನ ವಯಸ್ಸು ಕೇವಲ 28!
ಇದೀಗ ಗುರುವಾರ ಸಂಜೆ ಗುಜರಾತ್ ನ ಬಿಜೆಪಿ ರಾಜ್ಯಸಭಾ ಸದಸ್ಯ ಮಾಂಡವ್ಯ 2ನೇ ಅವಧಿಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕಳೆದ ಬಾರಿ ಮೋದಿಯ ಕ್ಯಾಬಿನೆಟ್ ನಲ್ಲಿ ಮಾಂಡವ್ಯ ರಾಜ್ಯ ರಸ್ತೆ ಸಾರಿಗೆಯ ಕೇಂದ್ರದ ರಾಜ್ಯ ಖಾತೆ ಸಚಿವರಾಗಿದ್ದರು.
ಮೇಘವಾಲ್ ಐಎಎಸ್ ಅಧಿಕಾರಿ:
ಐಎಎಸ್ ಅಧಿಕಾರಿ, ರಾಜಕಾರಣಿ ಅರ್ಜುನ್ ರಾಮ್ ಪಾಲ್ ಮೇಘವಾಲ್ ಅವರಿಗೆ ಸೈಕಲ್ ಸವಾರಿ ಫ್ಯಾಶನ್ ಆಗಿದೆ. ಸಚಿವರಾದ ನಂತರ 2016ರಲ್ಲಿ ಸೈಕಲ್ ಸವಾರಿಯನ್ನು ಬಿಟ್ಟಿದ್ದರು. ಗುರುವಾರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸೈಕಲ್ ನಲ್ಲಿಯೇ ಆಗಮಿಸಿದ್ದರು. ಮೇಘವಾಲ್ ಸಹೋದರ ಸಂಬಂಧಿ, ಕಾಂಗ್ರೆಸ್ ಅಭ್ಯರ್ಥಿ ಮದನ್ ಗೋಪಾಲ್ ಮೇಘವಾಲ್ ಅವರನ್ನು ಬಿಕಾನೇರ್ ಲೋಕಸಭಾ ಕ್ಷೇತ್ರದಲ್ಲಿ ಪರಾಜಗೊಳಿಸಿದ್ದರು. 2009ರಲ್ಲಿ ಮೊದಲ ಬಾರಿಗೆ ಅರ್ಜುನ್ ರಾಮ್ ಪಾಲ್ ಗೆಲುವು ಸಾಧಿಸಿ ಕೇಂದ್ರದ ವಿತ್ತ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಎರಡನೇ ಬಾರಿಯೂ ಮೋದಿ ಕ್ಯಾಬಿನೆಟ್ ನಲ್ಲಿ ಸಚಿವರಾಗಿದ್ದಾರೆ.