Advertisement

ಈ ಬಾರಿ ಉತ್ತಮ ಮುಂಗಾರು, ಶೇ.96ರಷ್ಟು ಮಳೆ ಸಾಧ್ಯತೆ

11:08 PM Apr 29, 2019 | Lakshmi GovindaRaju |

ಧಾರವಾಡ: ರಾಜ್ಯದಲ್ಲಿ ಈ ಬಾರಿ ಉತ್ತಮ ಮುಂಗಾರು ಮಳೆ ಸುರಿಯಲಿದ್ದು, ರೈತರು ಸಂಭ್ರಮದಿಂದ ಈ ವರ್ಷ ಕೃಷಿ ಮಾಡಬಹುದು.

Advertisement

ಹೌದು, 2012 ಮತ್ತು 2018, ಈ ಎರಡೂ ವರ್ಷಗಳಲ್ಲಿ ಸುರಿದಷ್ಟೇ ಸರಾಸರಿ ಮಳೆ 2019ರಲ್ಲಿಯೂ ರಾಜ್ಯದಲ್ಲಿ ಸುರಿಯಲಿದ್ದು, ರೈತರು ಕೃಷಿಗೆ ಉತ್ತಮ ಸಿದ್ಧತೆ ಮಾಡಿಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಶೇ.96ರಷ್ಟು ಪ್ರಮಾಣದ ಸರಾಸರಿ ಮಳೆ ಈ ವರ್ಷ ಸುರಿಯಲಿದೆ ಎಂದು ಅಂದಾಜಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಸತತ ಬರಗಾಲ ಆವರಿಸುತ್ತಿದ್ದು, ಈ ವರ್ಷದ ಕಥೆ ಏನು ಎಂದು ರೈತರು ಆತಂಕದಲ್ಲಿರುವಾಗಲೇ ಹವಾಮಾನ ಇಲಾಖೆ ಉತ್ತಮ ಮಳೆಯ ಕುರಿತು ಆಶಾದಾಯಕ ಮಾತುಗಳನ್ನಾಡಿದ್ದು,

ಈ ಭಾಗದ ರೈತರಿಗೆ ಕೊಂಚ ನೆಮ್ಮದಿ ತಂದಂತಾಗಿದೆ. ಇನ್ನು, ದಕ್ಷಿಣ ಕರ್ನಾಟಕ ಭಾಗದ ಹಳೇ ಮೈಸೂರಿನ ಜಿಲ್ಲೆಗಳಲ್ಲಿ ಸಾಮಾನ್ಯಕ್ಕೆ ಸಮೀಪ (ನಿಯರ್‌ ನಾರ್ಮಲ್‌) ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದ್ದು, ಕರಾವಳಿಯಲ್ಲಿ ಉತ್ತಮ ಮಳೆಯ ನಿರೀಕ್ಷೆ ಹೊಂದಲಾಗಿದೆ.

ಇನ್ನು, ಈ ವರ್ಷ ದೇಶಕ್ಕೆ ಉತ್ತಮ ಮಳೆ ಸುರಿಯಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಪ್ರಕಟಿಸಿದೆ. ದೇಶವನ್ನು ಹಚ್ಚ ಹಸರಿನಿಂದ ಹೊದ್ದು ನಿಲ್ಲುವಂತೆ ಮಾಡುವ ಮಾನ್ಸೂನ್‌ ಮಳೆಗಳಿಗೆ ಪೂರಕವಾದ ವಾತಾವರಣ ಈ ವರ್ಷ ಹಿಂದೂ ಮಹಾಸಾಗರದಲ್ಲಿ ಕಂಡು ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಡಾ|ರಮೇಶ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಹಿಂದೂ ಮಹಾಸಾಗರದ ಪರಿಸರದಲ್ಲಿ ಮಳೆಗೆ ಸಂಬಂಧಪಟ್ಟಂತೆ ಉಂಟಾಗುವ ನೈಸರ್ಗಿಕ ಪ್ರಕ್ರಿಯೆಗಳು ಕರ್ನಾಟಕ ರಾಜ್ಯಕ್ಕೂ ಉತ್ತಮ ಮಳೆಯಾಗುವ ಲಕ್ಷಣಗಳನ್ನೇ ಸೂಚಿಸುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇನ್ನಷ್ಟು ಉತ್ತಮ ಮಳೆ ಸಾಧ್ಯ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಕ್ತಮತಾನುಸಾರ ಸಂವತ್ಸರ ಫಲ: ಇನ್ನು, ಪಂಚಾಂಗ ಮತ್ತು ಜ್ಯೋತಿಷ್ಯದ ಆಧಾರದಲ್ಲಿಯೂ ಈ ಬಾರಿ ಅಲ್ಲಲ್ಲಿ ಉತ್ತಮ ಮಳೆ ಮತ್ತು ಕೆಲವು ಕಡೆಗಳಲ್ಲಿ ಅತಿವೃಷ್ಟಿ ಸಂಭವಿಸಲಿದೆ ಎಂದು ಜ್ಯೋತಿಷಿಗಳು ವರ್ಷದ ಕೃಷಿ ಫಲಪ್ರಾಪ್ತಿಯನ್ನು ವಿವರಿಸಿದ್ದಾರೆ. ಈ ಬಾರಿ ಮಳೆಗೆ “ರವಿ’ ಅಧಿಪತಿ ಇರುವುದರಿಂದ ಮಳೆ ಅಲ್ಪ ಮತ್ತು ಬೆಳೆಯೂ ಅಲ್ಪವಾಗಿರುತ್ತದೆ. ಮುಂಗಾರಿಗೆ ಖಂಡಮಂಡಲವೂ, ಹಿಂಗಾರಿ ಅತಿ ಕಡಿಮೆ, ಹೀಗಾಗಿ ಪಶು ನಾಶ, ಸಮಸ್ತ ಧಾನ್ಯಗಳು ಮತ್ತು ರಸವರ್ಗಗಳ ದರ ದ್ವಿಗುಣವಾಗಲಿವೆ.

ಅಂದರೆ, ಧಾನ್ಯದ ಬೆಲೆ ಹೆಚ್ಚಲಿದೆ. 18 ಕೋಟಿ ಜೀವಗಳ ಲಯ ಮಕ್ಕುಂ, ಕಪ್ಪು ಮಂಡಿಗಳಿಂದ ಕೊಂಕಣಕ್ಕೆ ಕೇಡು, ಕುಂತಲ ದೇಶಕ್ಕೆ ಬರ, ಚೈತ್ರದಿಂದ ಆಷಾಢದಲ್ಲಿ ಉತ್ತಮ ಮಳೆ, ಭಾದ್ರಪದ ಅಲ್ಪಮಳೆ, ಸಾಧಾರಣವಾಗಿರುತ್ತದೆ. ಪುಷ್ಯದಲ್ಲಿ ರೋಗ ಪೀಡೆಯು ರೈತರನ್ನು ಬಾಧಿಸಲಿದೆ ಎಂದು ಹೆಸರಾಂತ ಕೃಷಿ ಜ್ಯೋತಿಷಿ ಗದಗ ಜಿಲ್ಲೆಯ ಹುಲಕೋಟಿಯ ಗುರುಪಾದಯ್ಯ ಶಾಸ್ತ್ರಿಗಳು ಭವಿಷ್ಯ ನುಡಿದಿದ್ದಾರೆ.

ಅಂದಾಜು 50 ವರ್ಷಗಳ ಮಾನ್ಸೂನ್‌ ಮಳೆಯನ್ನು ಸರಾಸರಿಯಾಗಿ ನೋಡಿಕೊಂಡು ಹವಾಮಾನ ತಜ್ಞರು ಮುನ್ಸೂಚನೆ ನೀಡುತ್ತಾರೆ. 2019ನೇ ವರ್ಷದ ಮಟ್ಟಿಗೆ ಕರ್ನಾಟಕಕ್ಕೆ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.
-ಡಾ|ಕೆ.ಜೆ. ರಮೇಶ, ನಿರ್ದೇಶಕರು, ಭಾರತೀಯ ಹವಾಮಾನ ಇಲಾಖೆ, ನವದೆಹಲಿ.

ರಾಜ್ಯದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಪ್ರದೇಶದಲ್ಲಿ ಈ ಬಾರಿ ಸಹಜ ಸಾಧಾರಣ ಮಳೆ ಸುರಿಯಲಿದೆ. ಜನರಿಗೆ ನಾನಾ ರೀತಿಯ ರೋಗ ಪೀಡೆ, ಕೆಲವು ಭಾಗದಲ್ಲಿ ಅತಿವೃಷ್ಟಿಯೂ, ಇನ್ನೂ ಕೆಲವು ಭಾಗದಲ್ಲಿ ಅನಾವೃಷ್ಟಿಯೂ ಆಗಲಿದೆ. ಹೀಗಾಗಿ ಮುಂಗಾರಿ ಅಲ್ಪ, ಹಿಂಗಾರಿ ಉತ್ತಮ ಬೆಳೆಯ ಫಲ ರೈತರಿಗೆ ಲಭಿಸಲಿದೆ.
-ಗುರುಪಾದಯ್ಯ ಶಾಸ್ತ್ರಿ ಗುರುವಿನ, ಜ್ಯೋತಿಷಿಗಳು, ಹುಲಕೋಟಿ, ಗದಗ ಜಿಲ್ಲೆ.

ನಾವು ಕೂಡ ಭಾರತೀಯ ಹವಾಮಾನ ಇಲಾಖೆ ನೀಡುವ ವರದಿಯನ್ನೇ ಹೆಚ್ಚು ಅವಲಂಬಿಸಿದ್ದೇವೆ. ರೈತರು ಬರ ನಿರೋಧಕ ತಳಿ, ಮಿಶ್ರ ಬೇಸಾಯ, ಹನಿ ನೀರಾವರಿ ಅಷ್ಟೇಯಲ್ಲ, ವಿನೂತನ ತಂತ್ರಗಳನ್ನು ಬಳಸಿಕೊಂಡು ಕೃಷಿ ಮಾಡಬೇಕು. ಹವಾಗುಣಕ್ಕೆ ತಕ್ಕಂತೆ ಬೆಳೆಗಳ ಆರೈಕೆ ಮಾಡುವುದರಿಂದ ಉತ್ತಮ ಬೆಳೆ ಪಡೆಯಲು ಸಾಧ್ಯ.
-ಡಾ|ಎಂ.ವಿ.ಚೆಟ್ಟಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ.

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next