ವಿಜಯಪುರ: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಅನುದಾನ ಶೇಕಡಾ ನೂರರಷ್ಟು ಬಳಕೆಯಾಗುವ ಜೊತೆಗೆ ಸೂಕ್ತ ಪ್ರಗತಿ ಸಾಧಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ ಮೊಹಸೀನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಯೋಜನೆಯಡಿ ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಜುಲೈ ಮಾಹೆವರೆಗಿನ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿಶೇಷ ಘಟಕ ಹಾಗೂ ಗಿರಿಜನ ಯೋಜನೆಯಡಿಯ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ನಿಗದಿಪಡಿಸಿದ ಗುರಿಯನ್ನು ಸಕಾಲಕ್ಕೆ ತಲುಪುವ ಜೊತೆಗೆ ಅನುದಾನವು ಶೇಕಡಾ ನೂರರಷ್ಟು ಬಳಕೆಯಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಈ ಯೋಜನೆಯಡಿ ಮಂಜೂರಾಗಿರುವ ಅನುದಾನವನ್ನು ನಿರ್ಲಕ್ಷ್ಯ ತೋರದೆ ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕು. ತ್ತೈಮಾಸಿಕ ಅನುದಾನ ಬಳಕೆ ಬಗ್ಗೆ ಪರಿಶೀಲಿಸಿ ಅವಶ್ಯಕ ಪ್ರಗತಿ ಸಾಧಿಸಲು ತಿಳಿಸಿದ ಅವರು, ಈ ಅನುದಾನ ಬಳಕೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷತೆ ಸಹಿಸಲಾಗುವುದಿಲ್ಲ ಎಂದು ಹೇಳಿದರು.
ಸಮಾಜ ಕಲ್ಯಾಣ ಅಧಿಕಾರಿಗಳು ವಿವಿಧ ಇಲಾಖೆಗಳೊಂದಿಗೆ ನಿರಂತರ ಸಮನ್ವಯತೆ ಸಾಧಿಸಬೇಕು. ಸಮುದಾಯ ಭವನಗಳ ನಿವೇಶನ ಮತ್ತು ಇತರೆ ನಿವೇಶನಗಳ ಬಗ್ಗೆ ಹಾಗೂ ಸಮಸ್ಯೆಗಳನ್ನು ಪರಸ್ಪರ ಸಮನ್ವಯತೆಯಿಂದ ಬಗೆಹರಿಸಿಕೊಳ್ಳಬೇಕು. ಅನುದಾನ ಬಳಕೆ ಕುರಿತಂತೆ ಬಳಕೆ ಪ್ರಮಾಣ ಪತ್ರ ಸಹ ಸಲ್ಲಿಸುವಂತೆ ತಿಳಿಸಿದ ಅವರು, ಇಲಾಖಾವಾರು ಮಂಜೂರಾಗಿರುವ ಅನುದಾನ ಬಳಸಿ ಅವಶ್ಯಕ ಪ್ರಗತಿಯನ್ನು ಸಾಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ, ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳು ಸಹ ಸಕಾಲಕ್ಕೆ ದೊರೆಯುವಂತೆ ನೋಡಿಕೊಳ್ಳಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ, ಜಿಪಂ ಉಪ ಕಾರ್ಯದರ್ಶಿ ದುರುಗೇಶ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಇದ್ದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ವಂದಿಸಿದರು.