ಬೆಳ್ಳಾರೆ : ಬೆಳೆಯುತ್ತಿರುವ ಬೆಳ್ಳಾರೆ ಪಟ್ಟಣದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿರುವ ಬೆಳ್ಳಾರೆ ಬಸ್ ನಿಲ್ದಾಣಕ್ಕೆ ಕೊನೆಗೂ ದುರಸ್ತಿ ಭಾಗ್ಯ ದೊರೆತಿದೆ. ಟಿ.ಸಿ. ಕೊಠಡಿ ತೆರವು ಮಾಡಿ ಪ್ರಯಾಣಿಕರ ವಿಶ್ರಾಂತಿ ಕೊಠಡಿಯನ್ನು ವಿಸ್ತರಿಸಿ, ಟೈಲ್ಸ್ ಅಳವಡಿಸುವುದೂ ಸಹಿತ ಬಣ್ಣ ಬಳಿದು ಬಸ್ ನಿಲ್ದಾಣವನ್ನು ನವೀಕರಿಸಲಾಗಿದೆ. ಪುತ್ತೂರು ಸುಳ್ಯ ತಾಲೂಕಿನ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಕೊಂಡಿಯಾಗಿರುವ ಬೆಳ್ಳಾರೆಗೆ ನಿತ್ಯ ಸಾವಿರಾರು ಪ್ರಯಾಣಿಕರು ಬರುತ್ತಾರೆ.
ಬಹುತೇಕ ಜನ ಸರಕಾರಿ ಬಸ್‌ಗಳನ್ನೇ ಅವಲಂಬಿಸಿರುವುದರಿಂದ ಬಸ್ ನಿಲ್ದಾಣದಲ್ಲಿ ಕಾಯುವುದು ಸಾಮಾನ್ಯವಾಗಿದೆ. ಈಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ವಿಶ್ರಾಂತಿ ಕೊಠಡಿ ವಿಸ್ತರಿಸಿ ಟೈಲ್ಸ್ ಅಳವಡಿಸಿ ಆಸನದ ವ್ಯವಸ್ಥೆ ಮಾಡಲಾಗಿದೆ. ಸಂಚಾರ ನಿಯಂತ್ರಕರ ಕೊಠಡಿಯನ್ನೂ ನವೀಕರಿಸಲಾಗಿದೆ. ಸುಮಾರು 4.5 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಸಲಾಗಿದ್ದು, ಬಸ್ ನಿಲ್ದಾಣದ ಎದುರಿನ ಚರಂಡಿಗೆ ಮೋರಿ ಹಾಗೂ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.
ಇನ್ನೂ ಆಗಬೇಕಿದೆ ವ್ಯವಸ್ಥೆ ಬಸ್ ನಿಲ್ದಾಣದ ನವೀಕರಣ ಕಾರ್ಯ ನಡೆದರೂ ನಿಲ್ದಾಣದಲ್ಲಿ ಬಸ್ ನಿಲ್ಲಲು ಸ್ಥಳಾವಕಾಶದ ಕೊರತೆ ಎದ್ದು ಕಾಣುತ್ತಿದೆ. ಪ್ರಯಾಣಿಕರಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಆಗಬೇಕಿದೆ. ಇಲ್ಲಿ ರಾತ್ರಿಯ ವರೆಗೂ ಬಸ್ ಸಂಚಾರವಿದ್ದರೂ ಸಂಚಾರ ನಿಯಂತ್ರಕರು ಸಂಜೆ ವೇಳೆಯಲ್ಲಿ ಹಾಗೂ ರವಿವಾರ ಬಾಗಿಲು ಹಾಕಿ ತೆರಳುವುದರಿಂದ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಇಲಾಖೆ ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಸಮಸ್ಯೆಗಳು ಜೀವಂತ
ಬೆಳ್ಳಾರೆ ಗ್ರಾ.ಪಂ. ವತಿಯಿಂದ 12 ವರ್ಷಗಳ ಹಿಂದೆ ಬಸ್ ನಿಲ್ದಾಣ ನಿರ್ಮಿಸಲಾಗಿತ್ತಾದರೂ ಇಲ್ಲಿನ ಸಮಸ್ಯೆಗಳು ಜೀವಂತವಾಗಿಯೇ ಇತ್ತು. ಬಸ್ ನಿಲ್ದಾಣದಲ್ಲಿ ದಿನಪ್ರಂತಿ ನೂರಾರು ಬಸ್ ಪ್ರಯಾಣಿಕರು ವಿಶ್ರಾಂತಿ ಪಡೆದು ಪ್ರಯಾಣ ಮಾಡುತ್ತಾರೆ. ಆದರೆ ಕಿರಿದಾದ ವಿಶ್ರಾಂತಿ ಕೊಠಡಿ ನಿರ್ವಹಣೆ ಇಲ್ಲದ ಬಸ್ ನಿಲ್ದಾಣ ಸಮಸ್ಯೆಯಾಗಿ ಪರಿಣಮಿಸಿತ್ತು. ಈ ಬಗ್ಗೆ “ಉದಯವಾಣಿ’ ಈ ಹಿಂದೆಯೇ ವರದಿ ಮಾಡಿತ್ತು.
ಇನ್ನೂ ಅಭಿವೃದ್ಧಿ ಆಗಲಿದೆ
ಇದ್ದ ಅನುದಾನದಲ್ಲಿ ಬಸ್ ನಿಲ್ದಾಣದ ನವೀಕರಣ ಕಾರ್ಯ ನಡೆಸಲಾಗಿದ್ದು, ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಬಸ್ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಫ್ಯಾನ್, ಮೊಬೈಲ್ ಚಾರ್ಜರ್ ವ್ಯವಸ್ಥೆ ಮಾಡಲಾಗುವುದು. ಪ್ರಯಾಣಿಕರಿಗೆ ಕುಡಿಯುವ ನೀರು ಸೇರಿದಂತೆ ಬಸ್ ತೆರಳುವ ಸಮಯದ ವೇಳಾಪಟ್ಟಿ ಅಳವಡಿಸಲಾಗುವುದು. ಮುಂದೆ ಸಂತೆ ಮಾರುಕಟ್ಟೆಯನ್ನು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಿ ಬಸ್ ನಿಲ್ದಾಣ ವಿಸ್ತರಿಸಲಾಗುವುದು.
- ಧನಂಜಯ್ ಕೆ.ಆರ್., ಗ್ರಾ.ಪಂ. ಪಿಡಿಒ
ಉಮೇಶ್ ಮಣಿಕ್ಕಾರ