Advertisement

ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಲು ಬೆಳಗಾವಿ ಜಿಲ್ಲಾಧಿಕಾರಿ ಸೂಚನೆ

12:33 PM May 26, 2020 | keerthan |

ಬೆಳಗಾವಿ: ಮಳೆಗಾಲ ಆರಂಭಗೊಳ್ಳಲಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಬಾರಿಯ ಭೀಕರ ಪ್ರವಾಹ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ಜನರ ತುರ್ತು ರಕ್ಷಣೆಗೆ ಬೋಟ್ ಹಾಗೂ ಪುನರ್ವಸತಿಗೆ ಪರಿಹಾರ ಕೇಂದ್ರಗಳ ಸ್ಥಾಪನೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಉಪ ವಿಭಾಗ ಮಟ್ಟದಲ್ಲೂ ಇದೇ ವಾರದಲ್ಲಿ ಪೊಲೀಸ್, ಅಗ್ನಿಶಾಮಕ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ ಎಲ್ಲ ವಿಷಯಗಳ ಬಗ್ಗೆ ವಿಸ್ತ್ರೃತವಾಗಿ ಚರ್ಚೆ ನಡೆಸಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಚರಂಡಿ ಮತ್ತು ನಾಲಾಗಳನ್ನು ಸ್ವಚ್ಛಗೊಳಿಸಬೇಕು. ಲೋಕೋಪಯೋಗಿ ಇಲಾಖೆಯು ರಸ್ತೆ, ಸಿ.ಡಿ ಹಾಗೂ ಸೇತುವೆಗಳ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕು ಎಂದರು.

Advertisement

ಶೀಘ್ರದಲ್ಲೇ ಜಿಲ್ಲೆಗೆ ಎನ್.ಡಿಆರ್.ಎಫ್ ತಂಡ ಕೂಡ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಲಿದೆ. ಜಿಲ್ಲೆಗೆ ಅಗತ್ಯವಿರುವ ಬೋಟ್ ಗಳ ಬಗ್ಗೆ ಪ್ರಸ್ತಾವ ಸಿದ್ಧಪಡಿಸಬೇಕು. ಅದೇ ರೀತಿ ತಕ್ಷಣಕ್ಕೆ ಬೋಟ್ ಪಡೆಯಲು ಮುಂಚಿತವಾಗಿಯೇ ಎಲ್ಲ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ ಈಗಾಗಲೇ ಲಭ್ಯವಿರುವ ಬೋಟ್ ಗಳ ಮಾಹಿತಿಯನ್ನು ಪಡೆದುಕೊಂಡು ಬೋಟ್ ಗಳ ದುರಸ್ತಿ ಮಾಡಿಸಬೇಕು ಹಾಗೂ ಬೋಟ್ ಬಳಕೆಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡಬೇಕು ಎಂದರು.

ನದಿ ದಂಡೆಯಲ್ಲಿರುವ ಗ್ರಾಮಗಳಲ್ಲಿ ಜನರ ತುರ್ತು ರಕ್ಷಣೆಗೆ ಅಗತ್ಯವಿರುವ ಬೋಟ್ ಮತ್ತು ಅವುಗಳ ಆಪರೇಟರ್ ಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಹಾರಾಷ್ಟ್ರಕ್ಕೆ ಪತ್ರ: ಮಹಾರಾಷ್ಟ್ರದ ಜಲಾಶಯಗಳಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡಬೇಕು. ಜಲಾಶಯಗಳಿಂದ ನೀರು ಬಿಡುವಾಗ ಜಿಲ್ಲಾಡಳಿತಕ್ಕೆ ಮುಂಚಿತವಾಗಿಯೇ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದು ಮಹಾರಾಷ್ಟ್ರದ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಮತ್ತು ಜಲಸಂಪನ್ಮೂಲ ಇಲಾಖೆಗೆ ತಕ್ಷಣವೇ ಪತ್ರವನ್ನು ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.

ನಗರ ಪ್ರದೇಶಗಳಲ್ಲಿ ಬಹುತೇಕ ಕಟ್ಟಡಗಳಲ್ಲಿ ತಳಮಹಡಿ ಹಾಗೂ ಸೆಲ್ಲರ್ ಭಾಗದಲ್ಲಿ ವಿದ್ಯುತ್ ಮೀಟರ್ ಗಳಿದ್ದು, ಕಟ್ಟಡ ಅಥವಾ ಬಡಾವಣೆ ಜಲಾವೃತಗೊಂಡಾಗ ಮೀಟರ್ ಗಳು ಮುಳುಗಡೆಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಎಲ್ಲ ಕಟ್ಟಡ ಮಾಲೀಕರು ವಿದ್ಯುತ್ ಮೀಟರ್ ಗಳನ್ನು ಮೇಲಿನ ಮಹಡಿಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.

ಈ ರೀತಿಯಲ್ಲಿ ಕಟ್ಟಡದ ಸೆಲ್ಲರ್ ಭಾಗದಲ್ಲಿ ಮೀಟರ್ ಅಳವಡಿಸಿರುವವರಿಗೆ ತಕ್ಷಣವೇ ನೋಟಿಸ್ ನೀಡಬೇಕು. ಒಂದು ವೇಳೆ ಮೀಟರ್ ಸ್ಥಳಾಂತರಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಹೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ‌.ಎಚ್. ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next