ಕಾಂಗ್ರೆಸ್ ಸರಕಾರದ 5 ಗ್ಯಾರಂಟಿಗಳ ಪೈಕಿ ಒಂದಾದ “ಗೃಹಜ್ಯೋತಿ’ ಯೋಜನೆ ಶನಿವಾರದಿಂದಲೇ ಜಾರಿಯಾಗಿದೆ. “ಅನ್ನಭಾಗ್ಯ” ಯೋಜನೆಯಡಿ ಅಕ್ಕಿಯ ಹಣವನ್ನು ಜು. 10ರ ಅನಂತರ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹೀಗಾಗಿ 2 ಗ್ಯಾರಂಟಿಗಳು ಈ ತಿಂಗಳಲ್ಲೇ ಅನುಷ್ಠಾನಗೊಳ್ಳಲಿದ್ದು, ಯುವನಿಧಿ ಜಾರಿಗೆ ಮೂರ್ನಾಲ್ಕು ತಿಂಗಳು ಕಾಯಬೇಕಾಗುತ್ತದೆ.
ಶನಿವಾರದಿಂದಲೇ ಉಚಿತ ವಿದ್ಯುತ್
ಚಿಕ್ಕಮಗಳೂರು: ಗೃಹಜ್ಯೋತಿ ಯೋಜನೆಯಡಿ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಜು. 1ರಿಂದಲೇ ಉಚಿತ ವಿದ್ಯುತ್ ಯೋಜನೆ ಜಾರಿಯಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ಯೋಜನೆಯ ಪ್ರಯೋಜನ ಪಡೆಯಲು ಬಾಕಿ ಇರುವವರು ಬೇಗ ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಕಿದವರಿಗೆ ಮುಂದಿನ ತಿಂಗಳು ಬಿಲ್ ಬರುವುದಿಲ್ಲ. ನೋಂದಣಿಗೆ ಜು. 25ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಜು. 25ರೊಳಗೆ ನೋಂದಾಯಿಸಿಕೊಳ್ಳದ ವಿದ್ಯುತ್ ಗ್ರಾಹಕರಿಗೆ ಇನ್ನೂ ಒಂದು ತಿಂಗಳು ಅವಕಾಶ ಕಲ್ಪಿಸಲಾಗುವುದು ಎಂದರು.
ಅನ್ನಭಾಗ್ಯ ಹಣ ಜು. 10ರಿಂದ!
ಬೆಂಗಳೂರು: ಅನ್ನಭಾಗ್ಯ ಹಣವನ್ನು ಜು. 1ರಿಂದ ಪಾವತಿಸು ತ್ತೇವೆ ಎಂದಿಲ್ಲ. ಈ ತಿಂಗಳ ಹಣವನ್ನು ಜು. 10ರ ಬಳಿಕ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಯುವನಿಧಿ ಮೂರ್‍ನಾಲ್ಕು ತಿಂಗಳಲ್ಲಿ ಜಾರಿ
ಕಲಬುರಗಿ: 2022-23ರಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ಪದವೀಧರರಿಗೆ 24 ತಿಂಗಳ ಕಾಲ ನೀಡಲಾಗುವ “ಯುವನಿಧಿ” ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ ಎಂದು ಸಚಿವ ಡಾ| ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ. ಶನಿವಾರ ಕಲಬುರಗಿಯಲ್ಲಿ ಮಾತನಾಡಿದ ಅವರು, ಯುವನಿಧಿ ತಮ್ಮ ಕೌಶಲಾಭಿವೃದ್ಧಿ ಇಲಾಖೆಯಡಿಯೇ ಜಾರಿಗೊಳ್ಳಲಿದೆ. ಪದವೀಧರರು, ಡಿಪ್ಲೊಮಾ ಮಾಡಿ ಹೊರಬರುವವರು 4.50 ಲಕ್ಷ ಮಂದಿ ಎಂದು ಅಂದಾಜಿಸಲಾಗಿದೆ. ಅರ್ಜಿ ಸಲ್ಲಿಸಲು ಆ್ಯಪ್ ರೂಪಿಸಲಾಗುತ್ತಿದೆ. ಇಲಾಖೆ ಈಗಾಗಲೇ ಮಾಹಿತಿ ಸಂಗ್ರಹ ಆರಂಭಿಸಲಾಗಿದೆ. ಪದವಿ ಪಡೆದ 6 ತಿಂಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಎಂದರು.