Advertisement

ಶಕ್ತಿ ದೇವತೆ ಹಾಸನಾಂಬೆ ದರ್ಶನ ಆರಂಭ

03:38 PM Oct 29, 2021 | Team Udayavani |

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಶಕ್ತಿ ದೇವತೆ ಶ್ರೀ ಹಾಸನಾಂಬ ದೇವಾಲಯದ ಬಾಗಿಲು ಶಾಸ್ತ್ರೋಕ್ತವಾಗಿ ಗುರುವಾರ ಮಧ್ಯಾಹ್ನ 12.18ಕ್ಕೆ ತೆರೆಯಿತು. ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ದೇವಾಲಯದ ಬಾಗಿಲು ತೆರೆಯುವಾಗ ಹಾಜರಿದ್ದು, ಹಾಸನಾಂಬೆ ಪವಾಡ ಸಾಕ್ಷೀಕರಿಸಿದರು.

Advertisement

ದೇವಾಲಯದ ಬಾಗಿಲು ತೆರೆಯುವ ಕ್ಷಣಕ್ಕೆ ಸರಿಯಾಗಿ ಮಂಗಳವಾದ್ಯ ಮೊಳಗುತ್ತಿದ್ದಂತೆ ದೇವಾಲಯದ ಆವರಣದಲ್ಲಿ ಗರ್ಭಗುಡಿಯೆದುರು ಬನ್ನಿ ಮುಡಿದು ಪೂಜಿಸಿದ್ದ (ಬಾಳೆಕಂದು)ಗೆ ನಮಿಸಿದ ತಳವಾರ ಸಮುದಾಯದ ನರಸಿಂಹರಾಜ ಅರಸ್‌ ಅವರು ಕದಳಿ ಛೇದನ ಮಾಡಿದರು. ಅಲ್ಲಿ ನೆರೆದಿದ್ದ ನೂರಾರು ಭಕ್ತರು ಜಯಘೋಷ ಕೂಗುತ್ತಾ ಮುಗಿ ಬಿದ್ದು ಬನ್ನಿ ಪಡೆದು ಭಕ್ತಿಭಾವ ಮೆರೆದರು. ದೇವಾಲಯದ ಬಾಗಿಲು ತೆರೆದ ನಂತರ ಮೊದಲ ಪೂಜೆ ನೆರವೇರಿತು. ಆ ನಂತರ ಗಣ್ಯರು ದೇವಿ ದರ್ಶನ ಪಡೆದರು.

ಹಾಸನಾಂಬ ದೇವಾಲಯದ ಮುಂಭಾಗದ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿಯೂ ವಿಶೇಷ ಪೂಜೆ ನೆರವೇರಿತು. ದೇಗುಲ ಬಾಗಿಲು ತೆರೆದ ಮೊದಲ ದಿನ ಸಾರ್ವಜನಿಕರಿಗೆ ದೇವಿಯ ದರ್ಶನ ಇಲ್ಲ ಎಂದು ಹೇಳಿದ್ದರೂ ಭಕ್ತರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ದೇವಾಲಯಕ್ಕೆ ಬಂದು ಸಂಜೆವರೆಗೂ ದೇವಿ ದರ್ಶನ ಪಡೆಯುತ್ತಲೇ ಇದ್ದರು. ಕೊರೊನಾ ಲಸಿಕೆ 2 ಡೋಸ್‌ ಪಡೆದವರಿಗೆ ಮಾತ್ರ ದೇವಾಲಯದ ಪ್ರವೇಶ ಎಂದು ಹೇಳಲಾಗಿತ್ತಾದರೂ ಮೊದಲ ದಿನ ಲಸಿಕೆ ಪಡೆದ ಮಾಹಿತಿ ಪರಿಶೀಲಿಸುವ ವ್ಯವಸ್ಥೆಯೇನೂ ಇರಲಿಲ್ಲ. ಲಸಿಕೆ ಪಡೆಯುವುದಿರಲಿ, ಬಹುಪಾಲು ಮಂದಿ ಮಾಸ್ಕ್ ಅನ್ನೂ ಧರಿಸಿರಲಿಲ್ಲ.

ರಾತ್ರಿ 8 ಗಂಟೆವರೆಗೂ ದರ್ಶನಾವಕಾಶ: ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಭಕ್ತರ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 1 ರಿಂದ 3ಗಂಟೆವರೆಗೆ ಹಾಗೂ ರಾತ್ರಿ 9 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ದೇವರ ಪೂಜೆ, ನೈವೇದ್ಯ ಅರ್ಪಿಸುವ ಸಂಪ್ರದಾಯ ಆಚರಣೆಯಿಂದ ಆ ಅವಧಿಯಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶವಿರಲ್ಲ. ಧರ್ಮ ದರ್ಶನದ ಸಾಲಿನಲ್ಲಿ ಸಾಗಿ ದೇವಿ ದರ್ಶನ ಪಡೆಯಲಾಗದವರಿಗಾಗಿ 300 ರೂ., 1000 ರೂ. ಟಿಕೆಟ್‌ನ ನೇರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಬಳಿಯೇ ವಿಶೇಷ ದರ್ಶನದ ಟಿಕೆಟ್‌ ಪಡೆದು ಭಕ್ತರು ನೇರ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:- ‘ಮತ್ತೆ ಬರುತ್ತೇನೆಂದ ಅಪ್ಪು ಬರಲೇ ಇಲ್ಲ..’ ಕಣ್ಣೀರಾದ ಕಲಬುರಗಿ ಜನತೆ!

Advertisement

ಹಾಸನಾಂಬೆಯ ಪವಾಡ ಕಣ್ಣಾರೆ ಕಂಡೆವು: ಸಚಿವದ್ವಯರ ಮಾತು

ಹಾಸನ: ಹಾಸನಾಂಬೆ ಗರ್ಭಗುಡಿಯಲ್ಲಿ ಕಳೆದ ವರ್ಷ ಹಚ್ಚಿದ್ದ ಹಣತೆಗಳು, ದೇವಿಗೆ ಮುಡಿಸಿದ್ದ ಹೂವು ತಾಜಾ ಆಗಿದ್ದ ಪವಾಡವನ್ನು ಕಣ್ಣಾರೆ ಕಂಡೆವು ಎಂದು ಸಚಿವರಾದ ಕೆ.ಗೋಪಾಲಯ್ಯ, ಜೆ.ಸಿ.ಮಾಧುಸ್ವಾಮಿ ಹೇಳಿದರು. ದೇವಾಲಯದ ಬಾಗಿಲು ತೆರೆದ ತಕ್ಷಣ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯದ ಗರ್ಭಗುಡಿ ಬಾಗಿಲು ತೆರೆದಾಗ ಹಣತೆಗಳು ಉರಿಯುತ್ತಿದ್ದವು.

ಹೂವು ಮತ್ತು ನೈವೇದ್ಯ ಹೊಸತಾಗಿಯೇ ಇತ್ತು. ಕಳೆದ 3 ವರ್ಷಗಳಿಂದಲೂ ಈ ಪವಾಡವನ್ನು ನಾವು ನೋಡುತ್ತಲೇ ಬಂದಿದ್ದೇನೆ ಎಂದು ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದರು. ಕಳೆದ ವರ್ಷ ಕೊರೊನಾ ಹರಡುತ್ತಿದ್ದರಿಂದ ಸಾರ್ವಜನಿಕರಿಗೆ ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಅದೃಷ್ಟವಶಾತ್‌ ಈ ವರ್ಷ ಕೊರೊನಾ ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿಲ್ಲ. ಇದೆಲ್ಲ ದೇವರ ಕೃಪೆ. ಹಾಸನಾಂಬೆ ನೇರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು. ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕೊರೊನಾ 3ನೇ ಅಲೆ ಎರಗಲಿಲ್ಲ.

ಹೀಗಾಗಿ ಹಾಸನಾಂಬೆ ದರ್ಶನಕ್ಕೆ ಜನಸಾಮಾನ್ಯರಿಗೂ ಅವಕಾಶ ನೀಡಲಾಗಿದೆ. ಈ ವರ್ಷ ಉತ್ತಮ ಮಳೆ – ಬೆಳೆ ಆಗಿದೆ. ಇದಕ್ಕೆ ದೇವರ ಕೃಪೆ ಕಾರಣ ಎಂದರು. ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾ ಮಠಾಧ್ಯಕ್ಷ ಶ್ರೀ ಶಂಭುನಾಥ ಸ್ವಾಮೀಜಿ, ಶಾಸಕ ಪ್ರೀತಂ ಜೆ.ಗೌಡ, ನಗರಸಭೆ ಅಧ್ಯಕ್ಷ ಮೋಹನ್‌ಕುಮಾರ್‌, ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಎಸ್ಪಿ ಶ್ರೀನಿವಾಸಗೌಡ ಮತ್ತಿತರರಿದ್ದರು.

ಆಧ್ಯಾತ್ಮದ ಜತೆ ವಿಜ್ಞಾನ ಮಿಳಿತದಿಂದ ಸಮೃದ್ಧಿ

ಹಾಸನ: ಆಧ್ಯಾತ್ಮ ಜತೆ ವಿಜ್ಞಾನವನ್ನೂ ಮೈಗೂಡಿಸಿಕೊಂಡರೆ ಬದುಕು ಸುಂದರವಾಗಿರಲಿದೆ ಎಂದು ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಹಾಸನಾಂಬ ದೇಗುಲದ ಬಾಗಿಲು ತೆರೆದ ತಕ್ಷಣ ದೇವಿ ದರ್ಶನ ಮಾಡಿದ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೊನಾ 2 ವರ್ಷದಿಂದ ಕಾಡಿದೆ. ತಾಯಿ ಕೃಪೆಯಿಂದ ಪೂರ್ಣಪ್ರಮಾಣದಲ್ಲಿ ಈ ರೋಗ ನಾಡಿನಿಂದ ಹೋಗಲಿ, ಜನರ ಬಾಳು ಸಂತೋಷವಾಗಿರಲಿ ಎಂದು ಹಾರೈಸಿದರು.

ಪ್ರತಿ ವರ್ಷದಂತೆ ಶುಭ ಮುಹೂರ್ತದಲ್ಲಿ ಹಾಸನಾಂಬೆ ದರ್ಶನಕ್ಕಾಗಿ ಮಹಾದ್ವಾರ ತೆರೆಯಲಾಗಿದೆ. ಪುರುಷ ಮತ್ತು ಶಕ್ತಿ ಜಗತ್ತಿನಲ್ಲಿ ಜತೆಯಾಗಿರುವುದನ್ನು ನಾವು ಕಂಡಿದ್ದೇವೆ. ಪುರುಷನ ಪ್ರತಿಬಿಂಬವಾಗಿರುವ ಶಕ್ತಿಮಾತೆ ಹಾಸನದ ದೇವಸ್ಥಾನದಲ್ಲಿ 3 ರೀತಿ ನೆಲೆಗೊಂಡಿದ್ದಾಳೆ. ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಗೆ ಮೂರು ರೂಪ ಇದೆ. ಲಕ್ಷಿ$¾àಯಾಗಿ, ಕಾಳಿಯಾಗಿ, ಸರಸ್ವತಿಯಾಗಿ ನೆಲೆಸಿದ್ದಾಳೆ ಎಂದರು.

ದರ್ಶನಕ್ಕೆ ಅಡಚಣೆ: ದೇಗುಲದಲ್ಲೇ ಪ್ರತಿಭಟನೆ

ಹಾಸನ: ಹಾಸನಾಂಬ ದೇವಿ ಬಾಗಿಲು ತೆಗೆಯುವ ವೇಳೆ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡದಿದ್ದರಿಂದ ಕುಪಿತಗೊಂಡ ಹಾಸನ ನಗರಸಭೆ ಅಧ್ಯಕ್ಷ ಮೋಹನ್‌ ಕುಮಾರ್‌, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ರಕ್ಷಿತ್‌ ದೇವಾಲಯದಲ್ಲಿಯೇ ಪ್ರತಿಭಟನೆ ನಡೆಸಿದರು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರು ಗರ್ಭಗುಡಿಗೆ ಪ್ರವೇಶಿಸಿ ದರ್ಶನ ಪಡೆದ ವೇಳೆ ನಗರಸಭಾ ಅಧ್ಯಕ್ಷ ಮೋಹನ್‌ ಕುಮಾರ್‌ ಗರ್ಭಗುಡಿ ಪ್ರವೇಶಿಸಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಕುಪಿತರಾದ ಮೋಹನ್‌ ಕುಮಾರ್‌ ಕೂಗಾಡುತ್ತಾ ದೇವಾಲಯದ ಆವರಣದ ಸ್ವತ್ಛತೆಗೆ ನಗರಸಭೆ ಸಹಕಾರ ಕೇಳುವ ನೀವು, ದರ್ಶನಕ್ಕೆ ಅವಕಾಶ ಕೊಡುವುದಿಲ್ಲವೇ ಎಂದು ಹೊರ ನಡೆದರು.

ಆದರೆ ಅಧಿಕಾರಿಗಳು ಮೋಹನ್‌ ಕುಮಾರ್‌ರ ಮನವೊಲಿಸಿದ ನಂತರ ವಾಪಸ್‌ ಬಂದು ದೇವಿ ದರ್ಶನ ಪಡೆದರು. ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ರಕ್ಷಿತ್‌ ಅವರು ಪರಿಷತ್‌ನ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಗರ್ಭಗುಡಿ ಬಳಿಯೇ 3-4 ಮಂದಿ ಧರಣಿ ಕುಳಿತರು. ಎಎಸ್ಪಿ ನಂದಿನಿ, ಕೆಲ ಬಿಜೆಪಿ ಮುಖಂಡರು ಅವರನ್ನು ಸಮಾಧಾನಪಡಿಸಿ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಗೊಂದಲಕ್ಕೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next