Advertisement

ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ ಆರಂಭ

12:14 PM Jan 24, 2018 | |

ಬೆಂಗಳೂರು: ಇತಿಹಾಸ ಪ್ರಸಿದ್ಧ ಭಗವಾನ್‌ ಬಾಹುಬಲಿ ಏಕಶಿಲಾ ಮೂರ್ತಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಳ್ಳುತ್ತಿದ್ದು, ಐತಿಹಾಸಿಕ ಆಚರಣೆಗೆ ದಿನಗಣನೆ ಶುರುವಾಗಿದೆ.

Advertisement

ವಿಂಧ್ಯಗಿರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿನ ಮಂಟಪ, ಗುಡಿ ಗೋಪುರಗಳು ಸಿಂಗಾರಗೊಂಡಿವೆ. ಚಿಕ್ಕರಾಜ ಒಡೆಯರ್‌ ಕಲ್ಯಾಣಿ ಸ್ವತ್ಛಗೊಂಡು ಕಂಗೊಳಿಸುತ್ತಿದೆ. ತ್ಯಾಗಿ ನಗರ, ಯಾತ್ರಿನಗರ, ಕಳಸ ನಗರ, ಪಂಚ ಕಲ್ಯಾಣ ನಗರ, ಸ್ವಯಂಸೇವಕರ ನಗರ ಸೇರಿ 12 ತಾತ್ಕಾಲಿಕ ಉಪನಗರಗಳ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕೆಲವೆಡೆ ವಾಸ್ತವ್ಯ ಆರಂಭವಾಗಿದೆ. ವಿಂಧ್ಯಗಿರಿಯ ಆವರಣ ಹಾಗೂ ಮೂರ್ತಿಯಿರುವ ಪ್ರಾಂಗಣದಲ್ಲಿ ಮಠದಿಂದ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ಮೂಲ ಸೌಕರ್ಯ ಕಲ್ಪಿಸುವ ಕಾರ್ಯದಲ್ಲಿ ಜಿಲ್ಲಾಡಳಿತ ತೊಡಗಿಸಿಕೊಂಡಿದೆ. ಈಗಾಗಲೇ ಭಕ್ತರು, ಪ್ರವಾಸಿಗರ ಸಂಖ್ಯೆ ಏರಿಕೆಯಾಗಲಾರಂಭಿಸಿದೆ. ಒಟ್ಟಾರೆ  ಕ್ಷೇತ್ರದಲ್ಲಿ ಸಂಭ್ರಮ, ಸಡಗರದೊಂದಿಗೆ ಕಳೆಗಟ್ಟಿದೆ.

ಅತ್ಯಾಧುನಿಕ ಅಟ್ಟಣಿಗೆ: ಇದೇ ಮೊದಲ ಬಾರಿಗೆ ಜರ್ಮನ್‌ ತಂತ್ರಜ್ಞಾನದಡಿ ಲೆಹರ್‌ ಸಂಸ್ಥೆಯು 58.8 ಅಡಿ ಎತ್ತರದ ಬಾಹುಬಲಿ ಮೂರ್ತಿಯ ಮಸ್ತಕಾಭಿಷೇಕಕ್ಕೆ 70 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸುತ್ತಿದೆ. ಬಾಹುಬಲಿ ಮೂರ್ತಿಯ ಮಸ್ತಕದ ಮೇಲ್ಭಾಗ,
ಎರಡೂ ಭುಜಗಳ ಬಳಿ ಕ್ಯಾಂಟಿ ಲಿವರ್‌ ನಿರ್ಮಿಸಲಾಗುತ್ತಿದ್ದು, ಸುರಕ್ಷತಾ ಬಲೆ ಅಳವಡಿಸಲಾಗುವುದು ಎಂದು ಮಹಾಮಸ್ತಕಾಭಿಷೇಕ ವಿಶೇಷಾಧಿಕಾರಿ ಬಿ.ಎನ್‌. ವರಪ್ರಸಾದ ರೆಡ್ಡಿ ತಿಳಿಸಿದರು. ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಮಿತಿ, ಐಐಎಸ್ಸಿಯ ತಜ್ಞರು ಈ ತಂತ್ರಜ್ಞಾನವನ್ನು ದೃಢೀಕರಿಸಿ  ದ್ದಾರೆ. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ರಾಕ್‌ ಮೆಕಾನಿಕ್ಸ್‌ ತಂಡ ಪರಿಶೀಲನೆ ನಡೆಸಿ ಮೂರ್ತಿಗೂ, ಅಟ್ಟಣಿಗೆಗೂ ಸಂಪರ್ಕವಿಲ್ಲ ಎಂಬುದನ್ನು ದೃಢೀಕರಿಸಿದೆ. ಅಟ್ಟಣಿಗೆ ಬಳಿ 3 ಲಿಫ್ಟ್ ಅಳವಡಿಸಲಾಗುವುದು ಎಂದು ವಿವರಿಸಿದರು.

ಲಾಂಛನದಲ್ಲಿ ಗುಳ್ಳಕಾಯಜ್ಜಿ
ಬಾಹುಬಲಿ ಮೂರ್ತಿಯಿರುವ ಪ್ರಾಂಗಣದ ಎದುರಿಗೆ ಗುಳ್ಳಕಾಯಜ್ಜಿಯ ಮೂರ್ತಿಯಿದೆ. ಬಾಹುಬಲಿಯ 58.8 ಅಡಿ ಎತ್ತರದ ಮೂರ್ತಿ ಕೆತ್ತಿಸಿದ ಚಾವುಂಡರಾಯನಿಗೆ ಅಹಂಕಾರ ಬಂದಿತ್ತು. ಕ್ರಿ.ಶ.981ರಲ್ಲಿ ನಡೆದ ಮೊದಲ ಮಹಾಮಸ್ತಕಾಭಿಷೇಕದ ವೇಳೆ ಹಾಲು, ಗಂಧ, ಅರಿಶಿನ ಎಷ್ಟು ಸುರಿದರೂ ಮೂರ್ತಿ ಪೂರ್ತಿಯಾಗಿ ತೊಯ್ಯಲಿಲ್ಲ. ಆಗ ಗಿಂಡಿಯಲ್ಲಿ ಹಾಲು ಹಿಡಿದು ಬಂದ ಅಜ್ಜಿಯೊಂದು ಚಾವುಂಡರಾಯನ ಅನುಮತಿ ಪಡೆದು ಅಭಿಷೇಕ ಮಾಡಿದಾಗ ಇಡೀ ಮೂರ್ತಿ ತೊಯ್ದು ಹಾಲು ಹೊಳೆಯಾಗಿ ಹರಿದು ಬೆಳಗೊಳವಾಯಿತು ಎಂಬ ಪ್ರತೀತಿ ಇದೆ. ಈ ಬಾರಿಯ ಮಹಾಮಸ್ತಕಾಭಿಷೇಕದ ಲಾಂಛನದಲ್ಲಿ ಗುಳ್ಳಕಾಯಜ್ಜಿಯೇ ಮಹತ್ವ ಪಡೆದುಕೊಂಡಿರುವುದು ವಿಶೇಷ.

ಕೈಪಿಡಿ ತರಲು ಚಿಂತನೆ
ಕಳೆದ ಬಾರಿಯ ಮಹಾಮಸ್ತಕಾಭಿಷೇಕದ ಬಗ್ಗೆ ಹೆಚ್ಚಿನ ಮಾಹಿತಿಯೇ ಇಲ್ಲ. ಹಾಗಾಗಿ ಈ ಬಾರಿಯ ಮಹಾಮಸ್ತಕಾಭಿಷೇಕ ಮಹೋತ್ಸವ ಕುರಿತಂತೆ ಕೈಪಿಡಿ ತರಲು ಚಿಂತಿಸಲಾಗಿದ್ದು, ದಾಖಲೀಕರಣ ನಡೆಯಲಿದೆ. ನ್ಯಾಷನಲ್‌ ಜಿಯೋಗ್ರಾಫಿಕ್‌ ವಾಹಿನಿಯು ಮಹೋತ್ಸವ ಕುರಿತಂತೆ ಡಾಕ್ಯುಮೆಂಟ್‌ ರೂಪಿಸಲು ಅನುಮತಿ ಕೋರಿದ್ದು, ಈ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಕಾಯಂ ಕಾರ್ಯ
ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಶ್ರವಣ ಬೆಳಗೊಳ ಗ್ರಾಪಂ ವ್ಯಾಪ್ತಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿತ್ಯ 1.5 ದಶಲಕ್ಷ ಲೀಟರ್‌ ಕೊಳಚೆ ನೀರು ಸಂಸ್ಕರಿಸುವ ರಾಚೇನಹಳ್ಳಿ ಕೆರೆ ಬಳಿ ನಿರ್ಮಾಣವಾಗಿದೆ. ಆ ಮೂಲಕ ದೇಶದಲ್ಲೇ ಎಸ್‌ಟಿಪಿ ಸೌಲಭ್ಯ ಪಡೆದ ಪ್ರಥಮ ಗ್ರಾಪಂ ಎಂಬ ಹೆಗ್ಗಳಿಕೆಗೆ ಶ್ರವಣ ಬೆಳಗೊಳ ಪಾತ್ರವಾಗಲಿದೆ.

ಶ್ರವಣ ಬೆಳಗೊಳ ಕ್ಷೇತ್ರ ಸಂಪರ್ಕಿಸುವ ಎಲ್ಲ ಪ್ರಮುಖ ರಸ್ತೆಗಳನ್ನು 89 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

ಜನಿವಾರ ಕೆರೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಲಾಗಿದ್ದು, ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 

ಮಹಾಮಸ್ತಕಾಭಿಷೇಕದ ಕಳಸ ಹರಾಜಿನಿಂದ ಸಂಗ್ರಹ  ವಾಗುವ ಹಣವನ್ನು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಹಿಂದಿನ ಮಹಾಮಸ್ತಕಾಭಿಷೇಕದಲ್ಲಿ ಮೊದಲ ಕಳಶ 1.08 ಕೋಟಿ ರೂ.ಗೆ ಹರಾಜಾಗಿತ್ತು. ಆ ಹಣದಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ.
 ●ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳೆ

ರಾಜ್ಯ ಸರ್ಕಾರ 175 ಕೋಟಿ ರೂ. ಅನುದಾನ ನೀಡಿದ್ದು, ಕೇಂದ್ರದಿಂದ ಯಾವುದೇ ಅನುದಾನ ಬಂದಿಲ್ಲ. 175 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಜಿಎಸ್‌ಟಿಯಡಿ 15ರಿಂದ 18 ಕೋಟಿ ರೂ. ಪಾವತಿಸಬೇಕಿದ್ದು, ವಿನಾಯ್ತಿ ಕೋರಲಾಗಿದೆ.
 ●ಎ. ಮಂಜು, ಮಹಾಮಸ್ತಕಾಭಿಷೇಕ ಸಮಿತಿ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ

 ●ಎಂ.ಕೀರ್ತಿಪ್ರಸಾದ್‌
ಚಿತ್ರ: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next