Advertisement
ಕುಸುರಿ ಕೆಲಸ ಎಲ್ಲೆಲ್ಲಿ ಬೇಕು?ಮನೆಯ ಮುಂಭಾಗದ ಕಾಂಪೌಂಡ್ ಗೋಡೆಯಿಂದ ಹಿಡಿದು, ಬಾಲ್ಕನಿಯ ರೇಲಿಂಗ್‌ವರೆಗೆ ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯ ಕುಸುರಿ ಕೆಲಸವನ್ನು ಮಾಡಬಹುದು. ಸಾಮಾನ್ಯ ಕೆಲಸಕ್ಕೆ ಹೋಲಿಸಿದರೆ ಕುಸುರಿ ಕೆಲಸ ದುಬಾರಿಯೇ ಆಗಿರುತ್ತದೆ ಅನ್ನೋದು ತಿಳಿದಿರಲಿ. ಆದರೆ ಇದು ಕೆಲ ಜಾಗಗಳಲ್ಲಿ ಅನಿವಾರ್ಯವಾಗಿದ್ದು, ಮಾಡಲೇ ಬೇಕಾಗುತ್ತದೆ. ಒಂದು ಮನೆಯಿಂದ ಮತ್ತೂಂದು ಮನೆಯನ್ನು ಪ್ರತ್ಯೇಕವಾಗಿ ಗುರುತಿಸಲು ಕುಸುರಿ ಕೆಲಸ ಸಹಕಾರಿ. ಹೀಗಾಗಲು ಮುಖ್ಯ ಕಾರಣ- ನಮ್ಮ ಕಣ್ಣು ಯಾವುದು ವಿಶೇಷವಾಗಿ ಕಾಣಿಸುತ್ತದೋ ಅದನ್ನೇ ಮೊದಲು ಗಮನಿಸುವುದು. ಗೇಟಿಗೆ ಚಿಲಕವನ್ನು ಸ್ವಲ್ಪ ಕಲಾತ್ಮಕವಾಗಿ ಮಾಡಿದರೆ, ಜನ ಚಿಲಕ ಎಲ್ಲಿ? ಎಂದು ತಡಕಾಡುವ ಅಗತ್ಯ ಇರುವುದಿಲ್ಲ. ಅದೇ ರೀತಿಯಲ್ಲಿ ಕೈಪಿಡಿಗಳೂ ಒಂದಷ್ಟು ಕುಸುರಿ ಕೆಲಸದವಾಗಿದ್ದರೆ, ಸುಲಭದಲ್ಲಿ ಕಾಣುತ್ತವೆ. ಕೆಲವೊಮ್ಮೆ ಮೊದಲ ಮಹಡಿಗೆ ಹೋಗುವ ಬಾಗಿಲು ಹಾಗೂ ಮೆಟ್ಟಿಲು, ಕೋಣೆಯ ಬಾಗಿಲು ಅಕ್ಕಪಕ್ಕದಲ್ಲೇ ಇದ್ದರೆ, ಯಾವುದು ಕೆಳಮನೆಯ ಮುಖ್ಯ ಬಾಗಿಲು ಎಂದು ಸುಲಭದಲ್ಲಿ ತಿಳಿಯದು. ಅದಕ್ಕೊಂದಷ್ಟು ಕುಸುರಿ ಕೆಲಸ ಮಾಡಿಸಿದರೆ, ನೋಡಿದ ಕೂಡಲೆ ಅದು ಮುಖ್ಯದ್ವಾರ ಎಂದು ತಿಳಿದು ಹೋಗುತ್ತದೆ.
ಮೆಟ್ಟಿಲು ಶುರುವಾಗುವ ಮೊದಲ ಮೆಟ್ಟಿಲ ಬಳಿಯೇ ಅದರ ಶುರುವಾತನ್ನು ಸುಲಭವಾಗಿ ಗುರುತಿಹಿಡಿಯುವಂತೆ ಮಾಡಬೇಕು. ಜೊತೆಗೆ ಕೈಗೆ ಆಧಾರವಾಗಿ ಹಿಡಿದುಕೊಳ್ಳಲೂ ಕೂಡ ಒಂದು ನಿಲುವು ಮರವನ್ನು ನೀಡಲಾಗುತ್ತದೆ. ಹೊಸಬರಿಗೆ ಇದು ಅನುಕೂಲಕರವಾಗಿರುವುದರ ಜೊತೆಗೆ ಮನೆ ಮಂದಿಯೂ ಅವಸರದಲ್ಲಿ ಇರುವಾಗ, ಕೈಗೆ ಸುಲಭದಲ್ಲಿ ಸಿಗುವ ಹಾಗೆ ಮಾಡಬೇಕು. ಹೀಗೆ ಮಾಡಿದರೆ ಅದರ ಮೇಲಿರುವ ಕುಸುರಿ ಕೆಲಸ ಮೊದಲು ಕಣ್ಣು ಸೆಳೆದು ನಂತರ ತಂತಾನೇ ಕೈ ಅತ್ತ ಹೋಗುವಂತೆ ಮಾಡುತ್ತದೆ. ಅದೇ ರೀತಿಯಲ್ಲಿ ಮೊದಲ ಮೆಟ್ಟಿಲು ಸ್ವಲ್ಪ ಅಗಲವಾಗಿಯೋ ಇಲ್ಲವೇ ಒಂದಷ್ಟು ಕಲಾತ್ಮಕವಾದ ಕಟಿಂಗ್ ಹೊಂದಿದ್ದರೆ, ನೆಲಮಟ್ಟ ಹಾಗೂ ಮೊದಲ ಮೆಟ್ಟಿಲು ಎಂದು ಸುಲಭಲ್ಲಿ ಗೋಚರವಾಗಿ ಕಾಲಿಡಲು ಅನುವು ಮಾಡಿಕೊಡುತ್ತದೆ.
Related Articles
ಮನೆ ಒಂದೇ ಆದರೂ ರೂಮು, ಹಾಲು, ಅಡುಗೆ ಮನೆ ಹೀಗೆ ಪ್ರತಿಯೊಂದಕ್ಕೂ ತನ್ನದೇ ಆದ ಖಾಸಗೀತನವಿದೆ. ಕೆಲವರನ್ನು ಮನೆಯ ಹೊರಗಿನಿಂದಲೇ ಸಾಗಹಾಕುವುದು ಇದ್ದರೂ, ಮಿಕ್ಕ ಕೆಲವರನ್ನು ಡೈನಿಂಗ್ ರೂಂವರೆಗೂ ಆಹ್ವಾನಿಸುವುದು ಇದ್ದದ್ದೇ. ಆದರೆ ಕೆಲವರು ಕರೆಸಿಕೊಂಡು ಮನೆ ಪ್ರವೇಶಿಸುವುದಿರಲಿ, ನೇರ ಒಳನುಗ್ಗುವುದಕ್ಕೆ ಪ್ರಯತ್ನಿಸುವುದೂ ಉಂಟು.
Advertisement
ಇಂಥವರನ್ನು ತಡೆಯಲು ಮನೆಯ ಮುಂಬಾಗಿಲಿಗೆ ಒಂದು ಕಲಾತ್ಮಕವಾದ ಗ್ರಿಲ್ ಗೇಟ್ ಬಳಸಬಹುದು. ಇದು ಬೇಡದವರನ್ನು ಹೊರಗೇ ತಡೆಯುವುದರ ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದು.ಇನ್ನು ಮನೆಯ ಲಿವಿಂಗ್ ರೂಮಿಗೆ ಬಂದವರು ಒಂದೇ ಹಾಲಿನ ಭಾಗದಂತಿರುವ ಊಟದ ಕೋಣೆಗೂ ಬರುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ, ಒಂದಷ್ಟು ವಿಭಜನೆಯನ್ನು ಕಲಾತ್ಮಕವಾಗಿ ಮಾಡಲು ದೊಡ್ಡದಾದ ಕಮಾನು ಮಾಡಿದರೆ, ಎಲ್ಲರಿಗೂ ಯಾವುದು ಲಿವಿಂಗ್, ಯಾವುದು ಡೈನಿಂಗ್ ಎನ್ನುವುದು ತಿಳಿದು ಬಂದು ನಮ್ಮ ಖಾಸಗಿತನಕ್ಕೆ ಧಕ್ಕೆ ಬರುವುದಿಲ್ಲ. ಲಿವಿಂಗ್, ಡೈನಿಂಗ್ ವಿಭಜಕವಾಗಿ ಬಳಸುವ ಕಮಾನು ಸುಮಾರು ಏಳು ಅಡಿಗಳ ಎತ್ತರದಿಂದ ಶುರುವಾದರೆ ಒಳಿತು. ಏಕೆಂದರೆ, ಓಡಾಡುವಾಗ ತಲೆಗೆ ತಗುಲುವುದಿಲ್ಲ. ಇದರ ಕೆಳಗಿನ ಮಟ್ಟದಲ್ಲೂ ಒಂದಷ್ಟು ವಿಭಜಕದ ರೀತಿಯಲ್ಲಿ, ಓಡಾಡಲು ತೊಂದರೆ ಆಗದಂತೆ ಇರಬೇಕೆಂದಿದ್ದರೆ ಗೋಡೆಗೆ ಅರ್ಧ ಕಂಬಗಳನ್ನು ಅಂದರೆ ಅರ್ಧ ಮಾತ್ರ ಹೊರಗಿದ್ದು, ಇನ್ನರ್ಧ ಗೋಡೆಯಲ್ಲಿ ಹುದುಗಿರುವಂತೆ ಕಲಾತ್ಮಕವಾಗಿ ಬಳಸಬಹುದು. ಮನೆಯ ಮೇಲುಭಾಗ, ಅದರಲ್ಲೂ ಮೊದಲ ಮಹಡಿ ಇದ್ದರೆ ಎಲಿವೇಷನ್ ಮೈದುಂಬಿಕೊಂಡಿರುತ್ತದೆ. ಇದನ್ನು ಸಿಂಗರಿಸಿ ಮನೆಯ ಅಂದ ಹೆಚ್ಚಿಸುವುದು ಸುಲಭವಾದರೂ ನೆಲ ಮಹಡಿ ಮನೆಗಳನ್ನು ಕೂಡ ಹೆಚ್ಚು ಎತ್ತರದ್ದು ಎಂದು ಬಿಂಬಿಸಲು ಕೆಲ ಕುಸುರಿ ಕೆಲಸವನ್ನು ಮಾಡಬೇಕಾಗುತ್ತದೆ. ಕೆಲವೊಮ್ಮೆ ಪೆರ್ಗೊಲ, ಆರ್ಚ್‌ಗಳನ್ನು ಉಪಯೋಗಿಸಿದರೆ, ಮಿಕ್ಕ ಸಮಯದಲ್ಲಿ ಟೈಲ್ಸ್ ಇಲ್ಲವೇ ಇತರೆ ಕ್ಲಾಡಿಂಗ್ ವಸ್ತುಗಳನ್ನು ಕಲಾತ್ಮಕವಾಗಿ ಉಪಯೋಗಿಸಿಯೂ ಆ ಒಂದು ಸೌಂದರ್ಯವನ್ನು ಪಡೆಯಬಹುದು. ನಮ್ಮ ನಾಗರೀಕತೆಯಷ್ಟೇ ಪುರಾತನವಾದ ಕುಸುರಿ ಕೆಲಸಕ್ಕೆ ಮುಖ್ಯ ಪ್ರೇರಣೆ ಪ್ರಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಅದರ ಅಧ್ಯಯನ ಮಾಡಿದರೆ ಮನೆ ಸಿಂಗಾರಕ್ಕೆ ಮತ್ತಷ್ಟು ಹೊಸ ಆಲೋಚನೆಗಳು ಬರಬಹುದು. ಹೆಚ್ಚಿನ ಮಾತಿಗೆ ಫೋನ್ 98441 32826 – ಆರ್ಕಿಟೆಕ್ಟ್ ಕೆ ಜಯರಾಮ್