Advertisement

ಶ್ರದ್ಧೆಯಿಂದ ಮೂಡಿದ ಸೃಷ್ಟಿಯ ಸೌಂದರ್ಯ

07:30 AM Jul 22, 2017 | |

ಎಳೆಯ ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿರುತ್ತವೆ. ಅವರ ಆಸಕ್ತಿಯೂ ವ್ಯತ್ಯಸ್ಥವಾಗಿರುತ್ತದೆ. ಆದರೆ ಈ ಮಕ್ಕಳ ಆಸಕ್ತಿಯನ್ನು ಪ್ರತಿಭೆಯನ್ನು ಗುರುತಿಸುವುದು ಬಹಳ ಮುಖ್ಯ. ಗುರುತಿಸಿದ ಪ್ರತಿಭೆಯನ್ನು ಬೆಳೆಸುವುದು ಅದಕ್ಕಿಂತಲೂ ಮುಖ್ಯ. ಮಣ್ಣಿನ ಮುದ್ದೆಯಂತಿರುವ ಪ್ರತಿಭೆಗೆ ರೂಪು ನೀಡಿ ಸುಂದರ ಪ್ರತಿಮೆಯನ್ನು ರೂಪಿಸುವುದು ಅಷ್ಟು ಸುಲಭವಲ್ಲ. ಆದರೆ ಸೂಕ್ತ ಸಮಯದಲ್ಲಿ ಮಗುವಿನಲ್ಲಿರುವ ಸಾಹಿತ್ಯಾಸಕ್ತಿಯನ್ನು ಗುರುತಿಸಿ ಅದನ್ನು ಬೆಳೆಸಿದ ಕೀರ್ತಿ ಶ್ರದ್ಧಾ ಹೊಳ್ಳ ಪರಂಗೋಡು ಅವರ ಹೆತ್ತವರದ್ದು.

Advertisement

ಬಾಲ್ಯದಲ್ಲಿಯೇ ಸಾಹಿತ್ಯದಲ್ಲಿ ಅಭಿರುಚಿ ಹೊಂದಿರುವ ಶ್ರದ್ಧಾ ಇಂದು ತನ್ನ ಲೇಖನಿಯಿಂದ ಹೊರ ಬಂದಿರುವ, ಮನಸ್ಸಿ ಸಾಹಿತ್ಯವನ್ನು ಹೊರತಂದಿರುವ ವಿದ್ಯಾರ್ಥಿನಿ. ಪ್ರಸ್ತುತ ಕಾಸರಗೋಡಿನ ಬಿ.ಇ.ಎಂ. ಹೈಸ್ಕೂಲಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ಶ್ರದ್ಧಾ ತನ್ನ ಚೊಚ್ಚಲ ಕವನ ತೆರುದಿಟ್ಟಿದ್ದಾಳೆ. “ಸೃಷ್ಟಿಯ ಸೌಂದರ್ಯ’ ನಿಜವಾಗಿಯೂ ಪ್ರಕೃತಿಯ ವರದಾನಗಳ ಕುರಿತಾದ ಕವನಗಳ ಸಂಕಲನ.

ಮುಳಿಯಾರು ಗ್ರಾಮದ ಸುಬ್ರಹ್ಮಣ್ಯ ಹೊಳ್ಳ ಹಾಗು ಜಯಶೀಲ ದಂಪತಿಯ ಪುತ್ರಿ ಶ್ರದ್ಧಾ. ಹೆಸರೇ ಸೂಚಿಸುವಂತೆ “ಶ್ರದ್ಧಾ’ ಸದಾ ಶ್ರದ್ಧೆಯುಳ್ಳವಳು. ಪಾಠ್ಯವಾಗಲೀ, ಪಾಠ್ಯೇತರ ಚಟುವಟಿಕೆಗಳಾಗಲೀ ಶ್ರದ್ಧಾ ಎಲ್ಲದರಲ್ಲೂ ಮುಂದೆ. ಗೈಡ್‌ ವಿದ್ಯಾರ್ಥಿನಿಯಾಗಿರುವ ಈಕೆ ಸಮಾಜಮುಖೀ ಚಟುವಟಿಕೆಗಳಲ್ಲಿ ಸಹಾ ಮುಂದು. ತನ್ನೆಲ್ಲಾ ಕೆಲಸಗಳ ನಡುವೆಯೂ ಕವನಗಳನ್ನು ರಚಿಸುವ ಹವ್ಯಾಸವನ್ನು ಬಾಲ್ಯದಲ್ಲಿಯೇ ಬೆಳೆಸಿದ “ಶ್ರದ್ಧಾ’ ಸಾಹಿತ್ಯವನ್ನು ಸದಾ ಮೆಚ್ಚಿಕೊಂಡವಳು.

ಶಿಕ್ಷಕಿ ದಿವ್ಯ ಗಂಗಾ “ಸೃಷ್ಟಿಯ ಸೌಂದರ್ಯ’ಕ್ಕೆ ಉತ್ತಮ ಮುನ್ನುಡಿ ಬರೆದಿದ್ದು, ಶ್ರದ್ಧಾಳ ಕವನಗಳ ಅವಲೋಕನವನ್ನು ಅದರಲ್ಲಿ ಮಾಡಿರುತ್ತಾರೆ. ಶಿಕ್ಷಕರಾದ ಸುಭಾಶ್ಚಂದ್ರ ಅವರು ಹಿನ್ನುಡಿಯನ್ನು ಬರೆದಿದ್ದು, ಶ್ರದ್ಧಾಳ ಸಾಹಿತ್ಯ ಆಸಕ್ತಿಗೆ ಶುಭ ಹಾರೈಸಿದ್ದಾರೆ. ಬರವಣಿಗೆಗೆ ಕಾರಣವಾದ ಹಾದಿಯನ್ನು ಸ್ವತ: ಶ್ರದ್ಧಾಳೇ ವಿವರಿಸಿದ್ದು, ಎಲ್ಲರಿಗೂ ಕೃತಜ್ಞತೆಯನ್ನು ಮನದಾಳದಿಂದ ಸಲ್ಲಿಸಿರುತ್ತಾಳೆ. 

ಪರಿಮಿತಿಯೊಳಗಿದ್ದುಕೊಂಡು ಉತ್ತಮ ಮುಖಪುಟವನ್ನು ಮುದ್ರಣವನ್ನು ಸಿರಿಗನ್ನಡ ನೀಡಿರುತ್ತದೆ. ಕವನ ಸಂಕಲನದ ಪುಟಗಳನ್ನು ಹಾದುಹೋಗುವಾಗ ಸೂರ್ಯೋದಯದಿಂದ ಹಿಡಿದು  ಓ… ನನ್ನ ಒಲವಿನ ಚಿಣ್ಣರೆ’ ವರೆಗೆ ಎಲ್ಲಾ ಕವನಗಳಲ್ಲೂ ಶ್ರದ್ಧಾಳ ಸಾಹಿತ್ಯ ಬೆಳವಣಿಗೆಯನ್ನು ಕಾಣಬಹುದು. ವಿವಿಧ ಕವನಗಳ ಸಾಲುಗಳಲ್ಲಿನ ಸಾಹಿತ್ಯವು ನಿಜವಾಗಿಯೂ ಲೇಖಕಿಯ ಮನದ ಭಾವವನ್ನು ಪ್ರತಿಬಿಂಬಿಸುತ್ತದೆ. ಹೆಚ್ಚಿನ ಕವನಗಳೂ ಪ್ರಕೃತಿಗೆ ಹಾಗು ಭಾಷೆಗೆ ಸಂಬಂಧಿಸಿದವುಗಳಾಗಿವೆ. ಪವಿತ್ರ ನಾಡನ್ನು ಬಣ್ಣಿಸುವ, ತಾಯ್ನಾಡು, ಭೂಮಾತೆಯನ್ನು ವಂದಿಸುವ “ಭೂತಾಯಿ ನಿನಗೆ ವಂದನೆ’, ಕಾಸರಗೋಡಿನ ಗಂಡುಕಲೆಯನ್ನು ಹೊಗಳುವ ಯಕ್ಷಗಾನ, ಪರೋಪಕಾರದ ಮೌಲ್ಯವನ್ನು ಬಿಂಬಿಸುವ ದಾನವೇ ಧರ್ಮದ ಮೂಲವಯ್ಯ ಮೊದಲಾದವುಗಳು “ಸೃಷ್ಟಿಯ ಸೌಂದರ್ಯ’ದಲ್ಲಿ ಶ್ರದ್ಧಾಳ ಸಾಹಿತ್ಯವನ್ನು ಬಿಚ್ಚಿಟ್ಟ ಕವನಗಳು.

Advertisement

ನೃತ್ಯ, ಕೀಬೋರ್ಡ್‌, ವಯಲಿನ್‌ ನುಡಿಸುವಲ್ಲಿ ಆಸಕ್ತಿ ಹೊಂದಿರುವ, ವಿದ್ಯಾರ್ಥಿನಿಯಾಗಿರುವ ಶ್ರದ್ಧಾ ಸಂಗೀತದಲ್ಲಿ ಅಪಾರ ಅಭಿರುಚಿಯನ್ನು ಹೊಂದಿದ್ದಾಳೆ. ಈಗಾಗಲೇ ಹಲವಾರು ಕಡೆಗಳಲ್ಲಿ ತನ್ನ ಪ್ರತಿಭೆಯನ್ನು ಪ್ರಕಟಿಸಿರುವ ಶ್ರದ್ಧಾ ಧಾರಾಳ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾಳೆ. ಭಾಷಣ, ನಾಟಕಾಭಿನಯ ಮೊದಲಾದವುಗಳಲ್ಲಿ ಉಪಜಿಲ್ಲಾ ಹಾಗು ಜಿಲ್ಲಾ ಮಟ್ಟದಲ್ಲೂ ಬಹುಮಾನ ಗಳಿಸಿರುತ್ತಾಳೆ. ಹಲವಾರು ವೇದಿಕೆಗಳಲ್ಲಿ ಸಂಗೀತವನ್ನು ನುಡಿಸಿರುತ್ತಾಳೆ. ಅಲ್ಲದೆ ನೃತ್ಯಗಳನ್ನು ಮಾಡಿರುತ್ತಾಳೆ. ಈ ಎಲ್ಲಾ ಸಾಧನೆಗಳಿಗೂ ಹೆತ್ತವರ ಪ್ರೋತ್ಸಾಹ ಸದಾ ಇದ್ದೇ ಇದೆ. ತಾಯಿ ಜಯಶೀಲ ಪ್ರಸ್ತುತ ಕುಂಬಳೆ ಹೋಲಿ ಫ್ಯಾಮಿಲಿ ಅನುದಾನಿತ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಶ್ರದ್ಧಾಳ ಸಾಹಿತ್ಯ ಅಭಿರುಚಿಗೆ ತುಂಬು ಪ್ರೋತ್ಸಾಹ ನೀಡುತ್ತಿದ್ದಾರೆ.

ಈ ಬಹುಮುಖೀ ಪ್ರತಿಭೆಯ ಸಾಹಿತ್ಯ ಪ್ರತಿಭೆಯು ಇನ್ನೂ ಬೆಳಗಲಿ. ಮುಂದೆ ಧಾರಾಳ ಸಾಹಿತ್ಯ ಕೊಡುಗೆಗಳು ಇವರಿಂದ ಸಾಹಿತ್ಯ ಲೋಕಕ್ಕೆ ಲಭಿಸಲಿ. ಸಾಹಿತ್ಯದ ಮೂಲಕ ಸಮಾಜದ ತೊಡಕುಗಳನ್ನು ನಿವಾರಿಸುವ ಪ್ರಯತ್ನ ಸಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ. ಈ ನಿಟ್ಟಿನಲ್ಲಿ “ಸೃಷ್ಟಿಯ ಸೌಂದಯ’ ದಿಂದ ಆರಂಭವಾದ ಸಾಹಿತ್ಯ ಪ್ರಯಾಣ ಸಾಂಗವಾಗಿ ಸಾಗಲಿ ಎಂಬುದೇ ನಮ್ಮ ಹಾರೈಕೆ.

-ಸ್ಟ್ಯಾನಿ ಲೋಬೊ ಬೇಳ

Advertisement

Udayavani is now on Telegram. Click here to join our channel and stay updated with the latest news.

Next