Advertisement

ಬೀಚ್‌ ಪ್ರವೇಶ ನಿರ್ಬಂಧ ದೇವರ ದರ್ಶನ ಮಾತ್ರ; ಸೇವೆಗಳು ರದ್ದು

12:32 AM Mar 18, 2020 | mahesh |

ಮಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಮಾ. 17ರಿಂದ ಮುಂದಿನ ಆದೇಶದವರೆಗೆ ಪಾಲಿಸಬೇಕು ಎಂದು ದ.ಕ. ಜಿಲ್ಲಾಡಳಿತ ಮಂಗಳವಾರ ಆದೇಶಿಸಿದೆ.

Advertisement

ದ.ಕ. ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ನಡೆಯುವ ಉತ್ಸವ/ಜಾತ್ರೆಗಳಲ್ಲಿ ಕೇವಲ ಅಲ್ಲಿನ ಸಿಬಂದಿ ಮಾತ್ರ ಭಾಗವಹಿಸಬೇಕು ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ಸೂಚಿಸಲಾಗಿದೆ. ಭಕ್ತರಿಗೆ ದೇವರ ದರ್ಶನಕ್ಕಷ್ಟೇ ಅವಕಾಶ ನೀಡಿ ಉಳಿದೆಲ್ಲ ಸೇವೆಗಳನ್ನು ರದ್ದುಪಡಿಸಲಾಗಿದೆ. ದೇವಸ್ಥಾನಗಳಿಗೆ ಬರುವ ಸಾರ್ವಜನಿಕರಿಗೆ ತಂಗಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಆದೇಶಿಸಿದ್ದಾರೆ.

ಗುಂಪು ಪ್ರವೇಶ ಇಲ್ಲ: ದೇವಸ್ಥಾನ, ಮಸೀದಿ, ಚರ್ಚ್‌ ಒಳಗೊಂಡಂತೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು ಪ್ರವೇಶಿಸಬಾರದೆಂದು ಸೂಚಿಸಲಾಗಿದೆ. ಬೇಸಗೆ ಶಿಬಿರ, ಸಮಾರಂಭಗಳು, ವಿಚಾರ ಸಂಕಿರಣಗಳು ಮತ್ತಿತರ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಆದೇಶಿಸಿದೆ. ಬೀಚ್‌ಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮದುವೆ ಸಮಾರಂಭಗಳಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ಸರಳವಾಗಿ ಆಯೋಜಿಸಲು ಆದೇಶದಲ್ಲಿ ಸೂಚಿಸಲಾಗಿದೆ.

ಪಿಜಿ, ವಸತಿ ನಿಲಯಗಳಿಗೆ ಸೂಚನೆ
ಶಿಕ್ಷಣ ಸಂಸ್ಥೆಗಳಿಗೆ ಈಗಾಗಲೇ ರಜೆ ಘೋಷಿಸಿರುವುದರಿಂದ ಪಿಜಿ ಮತ್ತು ವಸತಿ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಮನೆಗಳಿಗೆ ವಾಪಸು ಹೋಗುವುದು ಉತ್ತಮ. ಒಂದು ವೇಳೆ ಯಾರಾದರೂ ಉಳಿದುಕೊಳ್ಳಲು ಬಯಸಿದ್ದಲ್ಲಿ ಅಂತಹವರಿಗೆ ಪಿಜಿ ಹಾಗೂ ವಸತಿ ನಿಲಯಗಳ ಮಾಲಕರು/ ವ್ಯವಸ್ಥಾಪಕರು ರಾಜ್ಯ ಸರಕಾರದ ಸಲಹೆಗಳಂತೆ ವೈಯಕ್ತಿಕ ಸ್ವಚ್ಛತೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪರಿಸರದ ಸ್ವಚ್ಛತೆ ಕಾಪಾಡುವುದು ಪಿಜಿ / ವಸತಿನಿಲಯಗಳ ಮಾಲಕರ/ ವ್ಯವಸ್ಥಾಪಕರ ಜವಾಬ್ದಾರಿ. ನಿರ್ದೇಶನಗಳನ್ನು ಅನುಸರಿಸದೇ ಕೊರೊನಾ ಹರಡಲು ಕಾರಣಕರ್ತರಾದವರ ವಿರುದ್ಧ ಕಠಿನ ಕ್ರಮ ಜರಗಿಸಲಾಗುವುದು ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next