Advertisement
ನಗರದಲ್ಲಿ ಅನಧಿಕೃತವಾಗಿ ಒಎಫ್ಸಿ ಅಳವಡಿಸುವುದನ್ನು ತಡೆಯಲು, ಅನಗತ್ಯವಾಗಿ ರಸ್ತೆ ಅಗೆಯುವುದನ್ನು ನಿಲ್ಲಿಸುವ ಉದ್ದೇಶದಿಂದ ಪಾಲಿಕೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ನಗರದಲ್ಲಿ ಅನಧಿಕೃತ ಒಎಫ್ಸಿ ಅಳವಡಿಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ರಸ್ತೆ ಅಗೆತ ಅನುಮತಿ ನೀಡುವಲ್ಲಿಯೂ ಪಾರದರ್ಶಕತೆ ಮೂಡಿದೆ.
Related Articles
ಪಾಲಿಕೆಯ ಯೋಜನೆಯಿಂದ ಪ್ರೇರಿತವಾದ ಸಂವಹ ಇಲಾಖೆ, ತನ್ನ 15 ಅಧಿಕಾರಿಗಳ ತಂಡವನ್ನು ಕಳೆದ ಗುರುವಾರ ನಗರಕ್ಕೆ ಕಳುಹಿಸಿತ್ತು. ಈ ವೇಳೆ ಪಾಲಿಕೆಯ ಅಧಿಕಾರಿಗಳು ಆನ್‌ಲೈನ್ ವ್ಯವಸ್ಥೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಪಾಲಿಕೆ ಅಳವಡಿಸಿಕೊಂಡಿರುವ ಸಾಫ್ಟ್ವೇರ್, ನಿರ್ವಹಣೆ ಸೇರಿದಂತೆ ವಿವಿಧ ಕ್ರಮಗಳ ಕುರಿತು ಅಧಿಕಾರಿಗಳೂ ಮಾಹಿತಿ ಪಡೆದಿದ್ದಾರೆ. ಈ ವೇಳೆ ಪಾಲಿಕೆ ಕ್ರಮಗಳಿಗೆ ಅಧಿಕಾರಿಗಳು ಅಭಿನಂದಿಸಿದ್ದಾರೆ ಎಂದು ಸಭೆಯಲ್ಲಿದ್ದ ಅಧಿಕಾರಿಯೊಬ್ಬರು “ಉದಯವಾಣಿಗೆ’ ಮಾಹಿತಿ ನೀಡಿದ್ದಾರೆ.
Advertisement
ಇತರ ರಾಜ್ಯಗಳಿಗೆ ಬಿಬಿಎಂಪಿ ತಾಂತ್ರಿಕ ಸಲಹೆ ನೀಡಬೇಕು ರಸ್ತೆ ಅಗೆತಕ್ಕೆ ಪಾಲಿಕೆ ಅಳವಡಿಸಿಕೊಂಡಿರುವ ಆನ್‌ಲೈನ್ ವ್ಯವಸ್ಥೆಯನ್ನು ದೇಶದ ಇತರೆ ರಾಜ್ಯಗಳೂ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡುವುದಾಗಿ ಸಂವಹನ ಇಲಾಖೆಯ ಅಧಿಕಾರಿಗಳು ಪಾಲಿಕೆಗೆ ತಿಳಿಸಿದ್ದಾರೆ. ಜತೆಗೆ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗುವ ರಾಜ್ಯಗಳಿಗೆ ಬಿಬಿಎಂಪಿಯಿಂದ ತಾಂತ್ರಿಕ ನೆರವು ನೀಡಬೇಕು ಎಂದು ಸಂವಹನ ಇಲಾಖೆ ಪಾಲಿಕೆಯನ್ನು ಕೋರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಶಕ್ಕೆ ಮಾದರಿಯಾದ ಬಿಬಿಎಂಪಿ!
ವಿವಿಧ ಸಮಸ್ಯೆಗಳಿಗೆ ಪಾಲಿಕೆ ಅನುಸರಿಸುವ ಪರಿಹಾರ ಕ್ರಮಗಳಿಂದಾಗಿ ಬಿಬಿಎಂಪಿ ದೇಶದ ಇತರ ನಗರಗಳಿಗೆ ಮಾದರಿಯಾಗುತ್ತಿದೆ. ಈ ಮೊದಲು ಶೇ.50ರಷ್ಟು ಘನತ್ಯಾಜ್ಯ ವಿಂಗಡಣೆ ಸಾಧಿಸಿದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾಲಿಕೆ ಪಾತ್ರವಾಗಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಅವರು ಬಿಬಿಎಂಪಿ ಅನುಸರಿಸುವ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ದೇಶದ ಇತರ ಸ್ಥಳೀಯ ಆಡಳಿತಗಳಿಗೆ ಸಲಹೆ ನೀಡಿದ್ದರು. ಅದರ ಬೆನ್ನಲ್ಲೆ ಇದೀಗ ಒಎಫ್ಸಿಗೆ ಅನುಮತಿ ನೀಡುವ ಆನ್‌ಲೈನ್ ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೊಳಿಸುವ ಪ್ರಯತ್ನ ನಡೆದಿರುವುದು ಪಾಲಿಕೆ ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಮಾಡಿದೆ. ಆನ್‌ಲೈನ್ ವ್ಯವಸ್ಥೆ ಕಾರ್ಯ ಹೇಗೆ?
ನೆಲದಡಿಯ ಜಾಲ ಬೆಸುಗೆಗೆ ರಸ್ತೆ ಅಗೆಯುವ ಮುನ್ನ ಸಂಸ್ಥೆಗಳು ಪಾಲಿಕೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ರಸ್ತೆ ಅಗೆತದ ಉದ್ದೇಶ, ಸ್ಥಳ ಹಾಗೂ ಅಗೆಯುವ ಅಳತೆಯ ಮಾಹಿತಿ ನೀಡಿ, ಗೂಗಲ್ ಮ್ಯಾಪಿಂಗ್ ಮೂಲಕ ಸ್ಥಳವನ್ನು ಪಿನ್ ಮಾಡಬೇಕು. ರಸ್ತೆ ಅಗೆತಕ್ಕೆ ಬಂದ ಅರ್ಜಿಯನ್ನು ವಲಯ ಜಂಟಿ ಆಯುಕ್ತರು ಹಾಗೂ ಆಯಾ ವಾರ್ಡ್‌ನ ಸಹಾಯಕ ಎಂಜಿನಿಯರ್‌ಗಳಿಗೆ ರವಾನೆ ಮಾಡಲಾಗುತ್ತದೆ. ಅವರು ಸ್ಥಳ ಪರಿಶೀಲಿಸಿ ಅನುಮತಿ ನೀಡುತ್ತಾರೆ ಅಥವಾ ನಿರಾಕರಿಸುತ್ತಾರೆ. ಅದರಂತೆ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಒಂದೊಮ್ಮೆ ಸ್ಥಳೀಯ ಎಂಜಿನಿಯರ್ ಹಾಗೂ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿದರೆ, ಸ್ವಯಂಚಾಲಿತವಾಗಿ ಡಿಮ್ಯಾಂಡ್ ನೋಟಿಸ್ ಸೃಷ್ಟಿಯಾಗಲಿದೆ. ನಿಗದಿತ ಶುಲ್ಕವನ್ನು ಬ್ಯಾಂಕ್‌ನಲ್ಲಿ ಪಾವತಿಸಿದ ನಂತರ ಅನುಮತಿ ದೊರೆಯಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ಅಧಿಕಾರಿಗಳು ಪ್ರಮಾಣ ಪತ್ರ ನೀಡುತ್ತಾರೆ. ಒಂದೊಮ್ಮೆ ರಸ್ತೆ ಸಮರ್ಪಕವಾಗಿ ದುರಸ್ತಿಪಡಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ನಗರದಲ್ಲಿ ಡಾಂಬರೀಕರಣ ಮಾಡಿದ ಮರುದಿನವೇ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನೆಲದಡಿಯ ಜಾಲಕ್ಕಾಗಿ ರಸ್ತೆ ಅಗೆದು ಹಾಳು ಮಾಡಿದ ಹಲವಾರು ಪ್ರಕರಣಗಳಿವೆ. ಹಾಗಾಗಿ ಆನ್‌ಲೈನ್ ಮೂಲಕ ಅನುಮತಿ ವ್ಯವಸ್ಥೆ ಜಾರಿಗೊಳಿಸಲಾಯಿತು. ಈಗ ರಸ್ತೆ ಅಗೆತಕ್ಕೂ ಮೊದಲು ಪಾಲಿಕೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಾರೆ. ಇದರಿಂದ ಅನಗತ್ಯವಾಗಿ ರಸ್ತೆ ಅಗೆಯುವುದು ತಪ್ಪಲಿದೆ. ಈ ವ್ಯವಸ್ಥೆಯನ್ನು ದೇಶದಾದ್ಯಂತ ಅಳವಡಿಸುವ ಕುರಿತಂತೆ ಕೇಂದ್ರ ಸಂವಹನ ಇಲಾಖೆ ಚಿಂತನೆ ನಡೆಸಿರುವುದು ಸ್ವಾಗತಾರ್ಹ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ * ವೆಂ.ಸುನೀಲ್‌ಕುಮಾರ್