ಬೆಳ್ತಂಗಡಿ: ತಾಲೂಕಿನಲ್ಲಿ 2019ರ ಆಗಸ್ rನಲ್ಲಿ ಭೀಕರ ಜಲ ಪ್ರಳಯಕ್ಕೆ ತುತ್ತಾದ ಗ್ರಾಮಗಳು ಮತ್ತೆ ಪುನರುಜ್ಜೀವನ ಪಡೆಯುತ್ತಿದೆ. ಆದರೆ ತರಾತುರಿಯಲ್ಲಿ ರಚಿಸಿದ ಕಾಮಗಾರಿಯ ಗುಣಮಟ್ಟ ಇದೀಗ ಒಂದೊಂದಾಗಿ ಬಯಲಾಗುತ್ತಿದೆ.
ಪ್ರವಾಹದಿಂದ ಚಾರ್ಮಾಡಿ ಗ್ರಾಮದ ಮೃತ್ಯುಂಜಯ ನದಿ ಕಿನಾರೆಯ ಫರ್ಲಾನಿ, ಕೊಳಂಬೆ, ಅಂತರ ಭೂ ಪ್ರದೇಶ ಭಾಗಶಃ ಕೊಚ್ಚಿಹೋಗಿತ್ತು. ಪರಿಣಾಮ 20ಕ್ಕೂ ಅಧಿಕ ಕುಟುಂಬ ವಾಸಿಸುತ್ತಿದ್ದ ಮನೆ ನೂರಾರು ಎಕ್ರೆ ಕೃಷಿ ಭೂಮಿ ಕೊಚ್ಚಿಹೋಗಿತ್ತು.
ಪ್ರವಾಹದಂದೇ ಕೊಳಂಬೆ ಪ್ರದೇಶದಲ್ಲಿ 3 ಮನೆಗಳು ಏಕಕಾಲದಲ್ಲಿ ಸಂಪೂರ್ಣ ಕೊಚ್ಚಿ ಹೋಗಿ ಒಂದು ಎಕ್ರೆಗೂ ಅಧಿಕ ಭೂಮಿ ನದಿ ಪಾಲಾಗಿತ್ತು. ತತ್‌ಕ್ಷಣ ತಡೆಗೋಡೆ ರಚಿಸದಿದ್ದಲ್ಲಿ ಉಳಿದ ಭೂಮಿಯೂ ನದಿ ಪಾಲಾಗುವ ಆತಂಕ ಎದುರಾಗಿತ್ತು. ಹೀಗಾಗಿ ಸ್ಥಳೀಯರ ಮನವಿ ಮೇರೆಗೆ ಸಣ್ಣ ನೀರಾವರಿ ಇಲಾಖೆಯಿಂದ 100 ಮೀ. ತಡೆಗೋಡೆಗೆ 49 ಲಕ್ಷ ರೂ.ನಂತೆ 300 ಮೀ. ಕಾಮಗಾರಿಗೆ 1.47 ಕೋ.ರೂ. ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿಯೂ ತರಾತುರಿಯಲ್ಲಿ ನಡೆಸಲಾಯಿತು. ಆದರೆ ಒಂದೇ ಮಳೆಗಾಲಕ್ಕೆ ಕಾಮಗಾರಿಯ ಕಳಪೆ ಗುಣಮಟ್ಟ ಪ್ರದರ್ಶನವಾಗಿದೆ.
ಮುರಿದು ಬಿದ್ದ ತಡೆಗೋಡೆ
ಕೊಳಂಬೆಯಲ್ಲಿ ಮೃತ್ಯುಂಜಯ ನದಿ ಪ್ರದೇಶವಾದ ಕೊಳಂಬೆಯಲ್ಲಿ 300ಮೀ. ತಡೆಗೋಡೆ ಪ್ರತ್ಯೇಕ ಹಂತದಲ್ಲಿ ಕಾಮಗಾರಿ ನಡೆಸಲು ಸಣ್ಣನೀರಾವರಿ ಇಲಾಖೆಯಡಿ ಕಾಸರಗೋಡು ಗುತ್ತಿಗೆದಾರ ಕುಂಞಿ ಕೊಯತ್ತಂಗಲ್ ಅವರಿಗೆ ನೀಡಲಾಗಿತ್ತು. ಕಾಮಗಾರಿಯೇನೋ ಕಳೆದ ಮಾರ್ಚ್ ತಿಂಗಳಲ್ಲಿ ಮುಗಿದಿತ್ತು. ಆದರೆ ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಭಾರೀ ಮಳೆಗೆ ತಡೆಗೋಡೆ ಬುಡವೇ ಅಲುಗಾಡಿದೆ. ತಡೆಗೋಡೆಯ ಒಂದು ಪಾರ್ಶ್ವ ಈಗಾಗಲೇ ಕುಸಿದುಬಿದ್ದಿದ್ದು, ಉಳಿದ ತಡೆಗೋಡೆ ಬಿರುಕು ಬಿಟ್ಟಿದೆ. ಉಳಿದಂತೆ ತಡೆಗೋಡೆ ನದಿಗೆ ವಾಲಿ ನಿಂತಿದ್ದು, ಮುಂದಿನ ಮಳೆ ಗಾಲಕ್ಕೆ ಸಂಪೂರ್ಣ ತಡೆಗೋಡೆ ನೀರುಪಾಲಾಗುವ ಭೀತಿ ಎದುರಾಗಿದೆ. ಜೂನ್ ಮುನ್ನ ಬಿದ್ದ ತಡೆ ಗೋಡೆ ಪುನಾರಚನೆಯಾಗಬೇಕಿತ್ತು. ಆದರೆ ಈವರೆಗೆ ಇತ್ತ ಅಧಿಕಾರಿಗಳು ತಲೆಹಾಕಿಲ್ಲ.
ಮರಳು ಉಚಿತ ಕಲ್ಲು ಉಚಿತ
ತಡೆಗೋಡೆ ರಚನೆಗೆ ಸಮೀಪದ ನದಿ ಮರಳು ಬಳಸಲಾಗಿದೆ. ಉಳಿದ ಸಿಮೆಂಟ್, ಜಲ್ಲಿ, ಕಾಮಗಾರಿ ವೆಚ್ಚವಷ್ಟೆ ಬೀಳಲಿದೆ. ಆದರೂ ಸಂಪೂರ್ಣ ಕಳಪೆ ಕಾಮಗಾರಿ ನಿರ್ವ ಹಿಸಿದ್ದರಿಂದ ಅನುದಾನ ಕೋತಾಹೊಡೆದಿದೆ. ಶಾಸಕರ ಸಲಹೆಯಂತೆ ಬದುಕುಕಟ್ಟೋಣ ತಂಡದ ಸೇವಾಕಾರ್ಯದ ಮೂಲಕ ಸರಕಾರದ ಅನುದಾನ ಸದ್ವಿನಿಯೋಗಿಸಿ ಅದೇ ಸ್ಥಳದಲ್ಲಿ ನೂತನ ಮನೆ ನಿರ್ಮಾಣದ ಹಂತದಲ್ಲಿದೆ. ಆದರೆ ಮುಂದಿನ ಮಳೆಗಾಲದಲ್ಲಿ ತಡೆ ಗೋಡೆ ಬಿದ್ದಲ್ಲಿ ಮತ್ತೆ ಭೂ ಪ್ರದೇಶ ನದಿ ಪಾಲಾಗಲಿದೆ ಎಂಬ ಆತಂಕ ಸ್ಥಳೀಯರಲ್ಲಿ ಉಂಟಾಗಿದೆ.
ನದಿ ಒತ್ತುವರಿ
ಕೊಳಂಬೆ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರು ತಮ್ಮ ಜಮೀನನ್ನು ತಡೆಗೋಡೆ ರಚನೆಗೆಂದು ಬಿಟ್ಟುಕೊಟ್ಟಿದ್ದಾರೆ. ಆದರೆ ಇದೇ ಸ್ಥಳದ ಎದುರುಬದಿ ಖಾಸಗಿ ಒಡೆತನದ ವ್ಯಕ್ತಿಯೊಬ್ಬರು ನದಿಗೆ ಮಣ್ಣು ಸುರಿದು ಒತ್ತುವರಿ ನಡೆಸಿದ್ದಾರೆ ಎಂಬ ದೂರು ಕೇಳಿಬಂದಿದೆ.
ಸೂಚಿಸಲಾಗಿದೆ
ಕೊಳಂಬೆ ಪ್ರದೇಶದಲ್ಲಿ ತಡೆಗೋಡೆ ಹಾನಿಯಾಗಿರುವ ಕುರಿತು ಈಗಾಗಲೇ ಅಧಿಕಾರಿಗಳು ಪರಿಶೀಲಿಸಿ ಮತ್ತೆ ತಡೆಗೋಡೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
-ಗೋಕುಲ್‌ದಾಸ್,
ಎಇಇ, ಸಣ್ಣನೀರಾವರಿ ಇಲಾಖೆ, ದ.ಕ.
ಚೈತ್ರೇಶ್ ಇಳಂತಿಲ