Advertisement

ಕೆಮ್ಮಾರ ಸೇತುವೆಯ ತಡೆಗೋಡೆ ಕುಸಿತ 

02:47 PM Jun 21, 2018 | |

ಉಪ್ಪಿನಂಗಡಿ: ಇಲ್ಲಿನ ಕೆಮ್ಮಾರ ಸೇತುವೆಯ ತಡೆಗೋಡೆ ಕುಸಿಯಲು ಆರಂಭವಾಗಿದ್ದು, ಇದು ಇನ್ನಷ್ಟು ಮುಂದುವರಿದರೆ ಹೆದ್ದಾರಿ ಹಾಗೂ ಸೇತುವೆ ಕುಸಿತಕ್ಕೊಳಗಾಗುವ ಭೀತಿ ಉಂಟಾಗಿದೆ.

Advertisement

ಉಪ್ಪಿನಂಗಡಿ-ಮರ್ಧಾಳ ರಾಜ್ಯ ಹೆದ್ದಾರಿಯಲ್ಲಿ ಕೆಮ್ಮಾರ ಬರುತ್ತಿದ್ದು, ಇಲ್ಲಿ ಹರಿಯುವ ಹೊಳೆಗೆ ಸೇತುವೆಯನ್ನು ಕಟ್ಟಿ ಮರ್ದಾಳಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಸೇತುವೆಯ ಪಾರ್ಶ್ವಗಳಲ್ಲಿ ಕಲ್ಲಿನ ತಡೆಗೋಡೆಯನ್ನು ಕಟ್ಟಲಾಗಿದೆ. ಆದರೆ ಈ ಬಾರಿಯ ಮಳೆಗಾಲದಲ್ಲಿ ರಭಸದಿಂದ ಹರಿಯುವ ನೀರಿನ ಹೊಡೆತಕ್ಕೆ ಸಿಲುಕಿ ಸೇತುವೆಯ ಒಂದು ಪಾರ್ಶ್ವದ ತಡೆಗೋಡೆಯ ಕಲ್ಲುಗಳು ಕುಸಿಯಲು ಆರಂಭಿಸಿವೆ. ಸೇತುವೆಯ ಇನ್ನೊಂದು ಪಾರ್ಶ್ವದಲ್ಲಿಯೂ ಹಾಕಿದ ಮಣ್ಣು ಕುಸಿಯಲು ಅರಂಭವಾಗಿದ್ದು, ಇದರ ಬಳಿಯಲ್ಲಿಯೇ ಇರುವ ಮಸೀದಿ ಹಾಗೂ ರಾಜ್ಯ ಹೆದ್ದಾರಿಯ ಸಂಪರ್ಕ ರಸ್ತೆಗೆ ಅಪಾಯವೊದಗುವ ಸಂಭವವಿದೆ.

ಕೆಎಸ್ಸಾರ್ಟಿಸಿ ಬಸ್‌ಗಳು, ಘನ ವಾಹನಗಳು ಸಹಿತ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತವೆ. ಈಗಾಗಲೇ ಇಲ್ಲಿ ಮಣ್ಣು ಕುಸಿದು ರಸ್ತೆಯ ಅಡಿಭಾಗವು ರಂಧ್ರ ಕೊರೆದಂತಾಗಿದ್ದು, ರಭಸದಿಂದ ಹರಿದು ಬರುವ ನೀರಿನ ಹೊಡೆತಕ್ಕೆ ಸಿಲುಕಿ ಇನ್ನಷ್ಟು ಕೊರೆತವುಂಟಾಗುವ ಸಾಧ್ಯತೆಯಿದೆ. ಇದರಿಂದ ರಸ್ತೆಯೂ ಕುಸಿದು ಬೀಳುವ ಅಪಾಯ ಎದುರಾಗಿದೆ.

ಇನ್ನೊಂದೆಡೆ ಸೇತುವೆಯ ಪಿಲ್ಲರ್‌ ಬುಡದಲ್ಲಿಯೇ ತಡೆಗೋಡೆ ಕುಸಿದು ಮಣ್ಣಿನ ಕೊರೆತವುಂಟಾಗಿದ್ದು, ಇಲ್ಲಿ ಮಣ್ಣಿನ ಕೊರೆತ ಜಾಸ್ತಿ ಉಂಟಾದರೆ ಸೇತುವೆಗೂ ಕಂಟಕ ಉಂಟಾಗುವ ಸಾಧ್ಯತೆ ಹೆಚ್ಚು. 

ಅಪಾಯ 
ಈಗಾಗಲೇ ಎರಡು ಕಡೆ ಕುಸಿತವುಂಟಾಗಿದ್ದು, ಇದು ಇನ್ನಷ್ಟು ಹೆಚ್ಚಾಗುವುದರಿಂದ ಸಂಪೂರ್ಣ ತಡೆಗೋಡೆಯೇ
ಕುಸಿತಕ್ಕೊಳಗಾಗುವ ಸಾಧ್ಯತೆ ಇದೆ. ಅಲ್ಲದೆ, ಸೇತುವೆಯ ಇನ್ನೊಂದು ಬದಿ ರಸ್ತೆಯಂಚಿನಿಂದ ಹಾಕಿದ ಮಣ್ಣು ಕೂಡಾ
ಕುಸಿತಕ್ಕೊಳಗಾಗಿದ್ದು, ಇದು ಕುಸಿದರೆ ವಾಹನ ಸವಾರರಿಗೆ ಅಪಾಯವುಂಟಾಗುವ ಸಾಧ್ಯತೆ ಹೆಚ್ಚಿದೆ. 

Advertisement

ಗಂಭೀರ ಸಮಸ್ಯೆ
ಕೆಮ್ಮಾರದಲ್ಲಿ ಸೇತುವೆ ತಡೆಗೋಡೆ ಕುಸಿತ ಕ್ಕೊಳಗಾಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇದೊಂದು ಗಂಭೀರವಾದ ಸಮಸ್ಯೆ. ಆದ್ದರಿಂದ ನಾಳೆಯೇ ಅದನ್ನು ಪರಿಶೀಲಿಸಿ, ಮುಂದಿನ ಕ್ರಮದ ಬಗ್ಗೆ ಚಿಂತಿಸಲಾಗುವುದು.
– ಗೋಕುಲದಾಸ್‌
ಲೋಕೋಪಯೋಗಿ ಇಲಾಖೆ
ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು

Advertisement

Udayavani is now on Telegram. Click here to join our channel and stay updated with the latest news.

Next