Advertisement

ಮಕ್ಕಳಿಂದಲೇ ಮೂಡಿಬರುತ್ತಿದೆ ಬಾನುಲಿ ಕೇಂದ್ರ

07:48 PM Jan 11, 2022 | Team Udayavani |

ಬೆಳ್ತಂಗಡಿ: ವಿದ್ಯಾರ್ಥಿಗಳು ಸಂಕೋಚ ಸ್ವಭಾವದಿಂದ ಹೊರಬಂದು, ಶಾಲಾ ಹಂತದಲ್ಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನಾನಾ ವೇದಿಕೆಗಳನ್ನು ಸೃಷ್ಟಿಸುತ್ತಿರುವುದರಿಂದ ಅನೇಕ ಪ್ರತಿ ಭಾನ್ವಿತ ವಿದ್ಯಾರ್ಥಿಗಳು ಸಾಧನೆಯ ಶಿಖರದಲ್ಲಿದ್ದಾರೆ. ಇಲ್ಲೊಂದು ಗ್ರಾಮೀಣ ಶಾಲೆಯೊಂದಿದೆ, ನಾಲ್ಕು ವರ್ಷಗಳ ಹಿಂದೆ ಬಾನುಲಿ ಕೇಂದ್ರದ ಸ್ಥಾಪಿಸಿ ಮಕ್ಕಳು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುತ್ತಿರುವುದು ನಾವು ಕಾಣಬಹುದಾಗಿದೆ.

Advertisement

ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟು ಮರಿ ಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಧ್ಯಾಹ್ನ ಭೋಜನದ ವಿರಾಮ ಆಕಾಶ ವಾಣಿ ಕೇಂದ್ರವಾಗಿ ಬದಲಾಗುತ್ತಿದೆ. ಪ್ರತಿ ತರಗತಿಯ ವಿದ್ಯಾರ್ಥಿಗಳಿಗೆ ಇಲ್ಲಿ, ಹಾಡು, ಮಾತುಗಾರಿಕೆ, ಹಾಸ್ಯ ಅಥವಾ ತಮ್ಮ ಮನಸ್ಸಿಗೆ ತೋಚಿದ ಪ್ರತಿಭೆಯನ್ನು ಅನಾವರಣಗೊಳಿಸಲು ಸದಾವಕಾಶ ನೀಡಲಾಗುತ್ತಿದೆ.

ಶಾಲೆಯಲ್ಲಿ 1 ರಿಂದ 10 ನೇ ತರಗತಿಯವರೆಗೆ ಸುಮಾರು 500 ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಾನುಲಿ ಕೇಂದ್ರದ ವಿಶೇಷ ಎಂದರೆ ಯಾವುದೇ ಮಗುವಿನ ಕಾರ್ಯಸಾಧನೆ ಪೂರ್ವನಿರ್ಧರಿತವಲ್ಲ, ಬದಲಾಗಿ ಎಲ್ಲ ಮಕ್ಕಳಿಗೂ ಇಲ್ಲಿ ಅವಕಾಶ ನೀಡಲಾಗುತ್ತದೆ. ಯಾವುದೇ ವಿಷಯವಾಗಿರಲಿ ಅದನ್ನು ಪ್ರಸ್ತುತ ಪಡಿಸಲು ಇಲ್ಲಿ ಮುಕ್ತ ಅವಕಾಶ ನೀಡಿರುವುದು ಗಮನಾರ್ಹ ವಾಗಿದೆ. ಇದರಿಂದ ಮಕ್ಕಳು ಸದಾ ಚಟುವಟಿಕೆ ಯಿಂದ ಕೂಡಿರುತ್ತಾರೆ. ವೇದಿಕೆಯ ಭಯದಿಂದಲೂ ಹೊರಬರುವರು. ಶಾಲಾ ಹಂತದಲ್ಲಿ ತನ್ನ ಪ್ರತಿಭೆಯನ್ನು ತಾನೇ ಪ್ರತಿದಿನ ಪ್ರದರ್ಶಿಸಲು ಸಹಾಯ ಮಾಡಲು ಈ ಬಾನುಲಿ ಕೇಂದ್ರ ಪರಿಣಾಮಕಾರಿ ವಿಷಯವಾಗಿದೆ.

ಪ್ರತಿದಿನ 15 ನಿಮಿಷಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಮಕ್ಕಳು ಉತ್ತಮ ವಾದದ್ದನ್ನು ವ್ಯಕ್ತಪಡಿಸಲು ಇಲ್ಲಿ ಪೂರ್ಣ ಸ್ವತಂತ್ರರು. ಕೆಲವರು ಹಾಡಿದರೆ, ಇನ್ನು ಕೆಲವರು ಹಾಸ್ಯ ಚಟಾಕಿ ಹಾರಿಸುವುದು, ಮಿಮಿಕ್ರಿ, ಪ್ರಚಲಿತ ವಿದ್ಯಮಾನಗಳ ಕುರಿತು ಮಾತನಾಡುವುದು, ರಸಪ್ರಶ್ನೆ, ಕವಿತೆ, ಸ್ಕಿಟ್‌ ಇತ್ಯಾದಿಗಳನ್ನು ನಡೆಸುತ್ತಾರೆ.

ಹಂತಹಂತವಾಗಿ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಂಡಿದ್ದೇವೆ ಎಂದು ರೇಡಿಯೋ ಕೇಂದ್ರದ ನಿಲಯ ನಿರ್ದೇಶಕರಾಗಿರುವ ಸಂಚಾಲಕಿ ಫಾ| ಜೋಜಿ ಹಾಗೂ ಮುಖ್ಯ ಶಿಕ್ಷಕಿ ಸಿ.ಲೀನಾ ಕಾರ್ಯ ಹೇಳುತ್ತಾರೆ.
ಮಕ್ಕಳು ಮಧ್ಯಾಹ್ನದ ಭೋಜನ ಮುಗಿಸಿ ಶಾಲೆಯ ಕಾರಿಡಾರ್‌ನಲ್ಲಿ ಹಾಕಿರುವ ಮೈಕ್‌ ಹಿಡಿದು ತಮ್ಮ ಪ್ರತಿಭೆಯನ್ನ ಬಿತ್ತರಿಸುತ್ತಾರೆ. ಪ್ರತೀ ತರಗತಿಗೆ ಸ್ಪೀಕರ್‌ಗಳನ್ನು ಅಳವಡಿಸಿದ್ದರಿಂದ ಇತರ ಮಕ್ಕಳು ಅವುಗಳನ್ನು ಇದ್ದಲ್ಲಿಯೇ ಕೇಳಲು ಅನುಕೂಲವಾಗಿದೆ. ಕೋವಿಡ್‌ ಸಮಯದಲ್ಲಿ ಸಮಸ್ಯೆಯಾದರೂ ಬಳಿಕ ಪುನರಾರಂಭವಾಯಿತು.

Advertisement

ಮಕ್ಕಳ ಬಾನುಲಿ ಪ್ರಸಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನವನ್ನು ಸೆಳೆದಿದ್ದು, ಈ ಕುರಿತು ಶಾಲೆಗೆ ಭೇಟಿ ನೀಡಿದ ಬೆಳ್ತಂಗಡಿ ತಾಲೂಕಿನ ಸಂಪನ್ಮೂಲ ಕೇಂದ್ರದ ಸಂಯೋಜಕ ಶಂಭು ಶಂಕರ್‌ ಅವರು ಹೇಳುವಂತೆ ಶಾಲಾ ಚಟುವಟಿಕೆಯ ಭಾಗವಾಗಿ ವಿದ್ಯಾರ್ಥಿಗಳ ಬಿಡುವಿನ ವೇಳೆಯಲ್ಲಿ ಕೇಳುವ ಮತ್ತು ಮಾತನಾಡುವ ಕೌಶಲವನ್ನು ಸುಧಾರಿಸಲು ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉತ್ತಮ ಫ‌ಲಿತಾಂಶ
ತಾಲೂಕು ಕೇಂದ್ರದಿಂದ 16 ಕಿ.ಮೀ. ದೂರದ ಗ್ರಾಮೀಣ ಭಾಗದಲ್ಲಿರುವ ಈ ಶಾಲೆಯಲ್ಲಿ ಎಲ್‌ .ಕೆ.ಜಿ. ಯಿಂದ 10ನೇ ತರಗತಿವರೆಗೆ 500ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 14 ಶಿಕ್ಷಕರು, ಇಬ್ಬರು ಬೋಧಕೇತರ ಸಿಬಂದಿಯಿದ್ದಾರೆ. 1995ರಲ್ಲಿ ಆರಂಭವಾದ ಈ ಅನುದಾನ ರಹಿತ ಶಾಲೆ ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಎಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ಸಭಾಕಂಪನ ದೂರ
ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರ ಹೊಮ್ಮಲು ಹಾಗೂ ಸಣ್ಣ ವಯಸ್ಸಿನಲ್ಲೆ ಸಭಾಕಂಪನ ದೂರ ಮಾಡುವ ಉದ್ದೇಶದಿಂದ ಆರಂಭಿಸಿರುವ ಶಾಲಾ ಬಾನುಲಿ ಕೇಂದ್ರ ವಿದ್ಯಾರ್ಥಿಗಳ ಮೇಲೆ ಉತ್ತಮ ಪರಿಣಾಮ ಬೀರಿದೆ.
-ಸಿಸ್ಟರ್‌ ಲೀನಾ,ಮುಖ್ಯ ಶಿಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next