Advertisement

ಜನರಿಂದ ತುಂಬಿರುತ್ತಿದ್ದ ಬಂಟ್ವಾಳ ಪೇಟೆ ಸಂಪೂರ್ಣ ಸ್ತಬ್ಧ

10:05 PM Apr 20, 2020 | Sriram |

ಬಂಟ್ವಾಳ: ಲಾಕ್‌ಡೌನ್‌ ಅವಧಿಯಲ್ಲೂ ಮಧ್ಯಾಹ್ನದವರೆಗೆ ಜನ ರಿಂದ ತುಂಬಿರುತ್ತಿದ್ದ ಬಂಟ್ವಾಳ ಪೇಟೆ ಸೋಮವಾರ ಸಂಪೂರ್ಣ ಸ್ತಬ್ಧಗೊಂಡಿತು. ಇಡೀ ತಾಲೂಕಿನ ಪ್ರಮುಖ ವ್ಯಾಪಾರ ಪಟ್ಟಣವಾಗಿ ಗುರುತಿಸಿಕೊಂಡಿರುವ ಪೇಟೆ ಕೋವಿಡ್‌ 19 ಸೋಂಕು ದೃಢಪಟ್ಟು ಬಂಟ್ವಾಳದ ಮಹಿಳೆ ಮೃತಪಟ್ಟ ಹಿನ್ನೆಲೆ ಯಲ್ಲಿ ಸೀಲ್‌ಡೌನ್‌ ಆಗಿದೆ.

Advertisement

ಬಂಟ್ವಾಳ ಪೇಟೆಯನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಜತೆಗೆ ಪೇಟೆಯ ಭಾಗದಲ್ಲೂ ರಸ್ತೆಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಎಲ್ಲ ಕಡೆಗಳಲ್ಲೂ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿದೆ.

ಇಡೀ ಪೇಟೆಯಲ್ಲಿ ಅತಿ ಹೆಚ್ಚಿನ ದಿನಸಿ, ತರಕಾರಿ ಅಂಗಡಿಗಳಿದ್ದು, ಪ್ರತಿದಿನ ಮಧ್ಯಾಹ್ನದ ವರೆಗೆ ಪೇಟೆ ಜನರಿಂದ ತುಂಬಿರುತ್ತಿತ್ತು. ರವಿವಾರ ಮಧ್ಯಾಹ್ನದ ವರೆಗೂ ಅದೇ ಸ್ಥಿತಿ ಇತ್ತು.

ತಹಶೀಲ್ದಾರರಿಂದ ಪರಿಶೀಲನೆ
ಪೇಟೆಯು ಸೀಲ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಜನರು ಓಡಾಡದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಅವರು ಬಂಟ್ವಾಳದ ಕೆಲವೊಂದು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಂಟ್ವಾಳ ಪುರಸಭೆ ವತಿಯಿಂದ ಕಟ್ಟೆಚ್ಚರ ವಹಿಸಲಾಗಿದ್ದು, ಜನರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಎ. 19ರ ಮಧ್ಯಾಹ್ನದ ಬಳಿಕವೇ ಪೇಟೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಯಾರೂ ಕೂಡ ಮನೆಯಿಂದ ಹೊರಬರುವಂತಿಲ್ಲ. ಹೀಗಾಗಿ ಸೋಮವಾರ ಬೆಳಗ್ಗೆ ಹಾಲಿನ ಪೂರೈಕೆ ಇಲ್ಲದೆ ಕೆಲವೊಬ್ಬರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆದಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆ ಭರವಸೆಯನ್ನೂ ನೀಡಲಾಗಿದೆ.

Advertisement

ಬಿ.ಸಿ.ರೋಡ್‌ನ‌ಲ್ಲಿ ವ್ಯಾಪಾರ
ಬಂಟ್ವಾಳ ಪೇಟೆಯ ರಸ್ತೆಗಳನ್ನು ಮುಚ್ಚಲಾಗಿದ್ದು,ಬೈಪಾಸ್‌ ರಸ್ತೆ ಜನಸಂಚಾರಕ್ಕೆ ತೆರೆದುಕೊಂಡಿತ್ತು.ಬಂಟ್ವಾಳ ಪೇಟೆಗೆ ಬರುತ್ತಿದ್ದ ಗ್ರಾಮೀಣ ಭಾಗದ ಜನರು ಬಿ.ಸಿ.ರೋಡಿಗೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿ ಸಿದರು.ಜತೆಗೆ ಬಂಟ್ವಾಳ ಬೈಪಾಸ್‌ ಪ್ರದೇಶದಲ್ಲೂ ಅಗತ್ಯ ವಸ್ತುಗಳ ಅಂಗಡಿ ತೆರೆದುಕೊಂಡಿತ್ತು.

ಬಿ.ಸಿ.ರೋಡಿನಲ್ಲಿ ಬ್ಯಾಂಕ್‌ ಶಾಖೆಗಳು, ಸಹಕಾರಿ ಸಂಸ್ಥೆಗಳು ತೆರೆದುಕೊಂಡಿದ್ದವು. ತಾಲೂಕಿನ ಇತರ ಭಾಗಗಳಲ್ಲೂ ಎಂದಿನಂತೆ ಪರಿಸ್ಥಿತಿ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next