ಬೆಂಗಳೂರು: ಎರಡು ಕನಸು ಚಿತ್ರದ ಪ್ರಚಾರಕ ಪರಮೇಶ್ ಎಂಬುವವರನ್ನು ಅಪಹರಿಸಿದ್ದ ಪ್ರಕರಣದ ಆರೋಪಿಗಳಾಗಿರುವ ನಿರ್ದೇಶಕ ಮದನ್ ಸೇರಿದಂತೆ ಐವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜು.14ಕ್ಕೆ ಮುಂದೂಡಿದೆ.
ನಟ ವಿಜಯ್ ರಾಘವೇಂದ್ರ ಅಭಿನಯದ ಎರಡು ಕನಸು ಚಿತ್ರದ ಪ್ರಚಾರದ ಹೊಣೆ ಹೊತ್ತಿದ್ದ ಪರಮೇಶ್, 33.33 ಲಕ್ಷ ರೂ. ಪಡೆದುಕೊಂಡಿದ್ದರು. ಆದರೆ ಅವರು ಸರಿಯಾಗಿ ಪ್ರಚಾರ ನೀಡದೇ ಇದ್ದುದರಿಂದ ಚಿತ್ರ ಸೋತಿತ್ತು ಎನ್ನಲಾಗಿದೆ.
ಹೀಗಾಗಿ ಹಣ ವಾಪಾಸ್ ಮಾಡುವಂತೆ ಕೇಳಿದಾಗ ಎಂಟು ಲಕ್ಷ ರೂ. ವಾಪಸ್ ಮಾಡಿದ್ದ ಪರಮೇಶ್, ಬಾಕಿ ಹಣ ಕೊಟ್ಟಿರಲಿಲ್ಲ. ಸಾಕಷ್ಟು ಬಾರಿ ಹಣ ವಾಪಸ್ ಕೇಳಿದರೂ ಕೊಡದಿದ್ದಾಗ ಚಿತ್ರದ ನಿರ್ದೇಶಕ ಮದನ್ ಹಾಗೂ ನಾಲ್ವರು ಸಹಚರರು ಪರಮೇಶ್ ಅವರನ್ನು ಅಪಹರಿಸಿ ಥಳಿಸಿದ್ದರು ಎನ್ನಲಾಗಿದೆ.
ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ಮಾಗಡಿ ಠಾಣೆ ಪೊಲೀಸರು, ಮೇ 27ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜೂನ್ 12ರಂದು ಅಧೀನ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳು ಇದೀಗ ಜಾಮೀನು ಕೋರಿ ಹೈಕೋರ್ಟ್ ಮೊರೆಹೋಗಿದ್ದರು.
ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ, ಅರ್ಜಿದಾರರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ತಾಕೀತು ಮಾಡಿ ವಿಚಾರಣೆಯನ್ನು ಜು.14ಕ್ಕೆ ಮುಂದೂಡಿತು.