ಕಳೆದ ವರ್ಷ ಬಿಡುಗಡೆಯಾಗಿ ತೆರೆಗೆ ಬಂದಿದ್ದ “ಒಂದಲ್ಲಾ ಎರಡಲ್ಲಾ’ ಚಿತ್ರ ನಿಮಗೆ ನೆನಪಿರಬಹುದು. ಸದಭಿರುಚಿಯ ಚಿತ್ರ ಎಂದು ಕರೆಸಿಕೊಂಡ “ಒಂದಲ್ಲಾ ಎರಡಲ್ಲಾ’ ಚಿತ್ರ ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಗಳಿಕೆ ಮಾಡುವಲ್ಲಿ ವಿಫಲವಾದರೂ, ಚಿತ್ರಕ್ಕೆ ಕನ್ನಡದ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈಗ “ಒಂದಲ್ಲಾ ಎರಡಲ್ಲಾ’ ಚಿತ್ರ ಸದ್ದಿಲ್ಲದೆ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡಿದೆ.
ಹೌದು, ಕನ್ನಡದಲ್ಲಿ ಸಿನಿಪ್ರಿಯರು ಮತ್ತು ವಿಮರ್ಶಕರ ಮನಗೆದ್ದಿದ್ದ “ಒಂದಲ್ಲಾ ಎರಡಲ್ಲಾ’ ಚಿತ್ರ ಈಗ ಮುಂಬೈನಲ್ಲೂ ಪತ್ರಕರ್ತರು ಮತ್ತು ವಿಮರ್ಶಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರತಿವರ್ಷ ಮುಂಬೈನಲ್ಲಿ ನೀಡಲಾಗುವ “ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್’ ಕಾರ್ಯಕ್ರಮದಲ್ಲಿ, ಈ ವರ್ಷ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು “ಒಂದಲ್ಲಾ ಎರಡಲ್ಲಾ’ ಚಿತ್ರ ಪಡೆದಿದೆ.
ಮುಂಬೈನ ಪತ್ರಕರ್ತರು, ಸಿನಿಮಾ ವಿಮರ್ಶಕರು ನೀಡುವ “ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್’ನಲ್ಲಿ ಭಾರತದಲ್ಲಿ ತೆರೆಕಂಡ ವರ್ಷದ ಅತ್ಯುತ್ತಮ ಚಿತ್ರವೊಂದನ್ನು ಆಯ್ಕೆ ಮಾಡಿ ಅದಕ್ಕೆ ಪ್ರಶಸ್ತಿ ನೀಡಲಾಗುತ್ತದೆ. ಇಲ್ಲಿಯವರೆಗೆ “ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್’ ಪ್ರಶಸ್ತಿಯನ್ನು ಕಿರು ಚಿತ್ರಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸಿನಿಮಾಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮೊದಲ ಬಾರಿಯೇ ಕನ್ನಡ ವಿಭಾಗದಲ್ಲಿ “ಒಂದಲ್ಲಾ ಎರಡಲ್ಲಾ’ ಚಿತ್ರ ಪ್ರಶಸ್ತಿ ಗೆದ್ದಿದೆ.
ಈ ವರ್ಷ ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಮಲೆಯಾಳಂ ಹೀಗೆ ಭಾರತದ ಪ್ರಮುಖ ಭಾಷೆಯ ಸಿನಿಮಾಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಕನ್ನಡದಿಂದ “ಒಂದಲ್ಲಾ ಎರಡಲ್ಲಾ’, “ನಾತಿಚರಾಮಿ’ ಮತ್ತು “ಅಮ್ಮಚ್ಚಿಯೆಂಬ ನೆನಪುಗಳು’ ಚಿತ್ರಗಳು ಈ ಪ್ರಶಸ್ತಿ ವಿಭಾಗಕ್ಕೆ ಆಯ್ಕೆಯಾಗಿದ್ದವು. ಅಂತಿಮವಾಗಿ ಈ ಮೂರು ಸಿನಿಮಾಗಳ ಪೈಕಿ “ಒಂದಲ್ಲಾ ಎರಡಲ್ಲಾ’ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ತಮ್ಮ ಚಿತ್ರ ಪ್ರಶಸ್ತಿ ಪಡೆದ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಸತ್ಯ ಪ್ರಕಾಶ್, “ಸಿನಿಮಾದಲ್ಲಿ ಸೌಹಾರ್ದತೆಯ ವಿಷಯವನ್ನು ಸೂಕ್ಷ್ಮವಾಗಿ, ಜೊತೆಗೆ ಮನರಂಜನೆಯನ್ನು ಇಟ್ಟುಕೊಂಡು ಯಾರಿಗೂ ನೋವಾಗದ ರೀತಿ ಸರಳವಾಗಿ ಹೇಳಿರುವುದು ವಿಮರ್ಶಕರಿಗೆ ಬಹಳ ಮೆಚ್ಚುಗೆಯಾಗಿದೆ. ಅದೇ ಅಂಶ ಚಿತ್ರಕ್ಕೆ ಪ್ರಶÕತಿಯನ್ನು ತಂದುಕೊಟ್ಟಿದೆ’ ಎಂದಿದ್ದಾರೆ.
ಇನ್ನು ಇತ್ತೀಚೆಗೆ ನಡೆದ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದ್ದ “ಒಂದಲ್ಲಾ ಎರಡಲ್ಲಾ’ ಚಿತ್ರಕ್ಕೆ ಅಲ್ಲಿಯೂ ಸಾಕಷ್ಟು ಮೆಚ್ಚುಗೆ, ಪ್ರಶಂಸೆಗಳು ವ್ಯಕ್ತವಾಗಿದೆ. ಚಿತ್ರವನ್ನು ನೋಡಿದ ಹಲವರು “ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ಮತ್ತೆ ಮರು ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರಂತೆ.
ಇದರ ಬಗ್ಗೆ ಮಾತನಾಡುವ ನಿರ್ದೇಶಕ ಸತ್ಯ ಪ್ರಕಾಶ್, “ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ನಮ್ಮ ಪ್ಲಾನ್ ಪ್ರಕಾರ ತೆರೆಗೆ ತರಲು ಸಾಧ್ಯವಾಗಿರಲಿಲ್ಲ. ಚಿತ್ರ ಅನೇಕರನ್ನು ತಲುಪಿರಲಿಲ್ಲ. ಹೀಗಾಗಿ ಈಗ ಚಿತ್ರವನ್ನು ರೀ-ರಿಲೀಸ್ ಮಾಡುವ ಬಗ್ಗೆಯೂ ಚಿತ್ರತಂಡದಲ್ಲಿ ಪ್ಲಾನ್ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಮತ್ತೆ “ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತೇವೆ’ ಎನ್ನುತ್ತಾರೆ.
ಸದ್ಯ ನಿರ್ದೇಶಕ ಸತ್ಯ ಪ್ರಕಾಶ್, ತಮ್ಮ ಮೂರನೇ ಚಿತ್ರಕ್ಕೆ ಸ್ಕ್ರಿಪ್ಟ್ ತಯಾರಿ ನಡೆಸುತ್ತಿದ್ದು, “ಇವತ್ತಿನ ಕಾಲಮಾನಕ್ಕೆ ಹೊಂದುವಂಥ ಕಥೆಯೊಂದನ್ನು ಮಾನವೀಯತೆ ಆಧಾರದ ಮೇಲೆ ತೆರೆಮೇಲೆ ಹೇಳುವ ಯೋಚನೆ ಇದೆ’ ಎನ್ನುತ್ತಾರೆ.