Advertisement

ಶಿಕ್ಷಣ ವ್ಯವಸ್ಥೆಗೂ ಸ್ವಾಯತ್ತತೆ ನೀಡುವ ಅಗತ್ಯ

12:44 PM Apr 28, 2018 | Team Udayavani |

ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಂತೆ ಶಿಕ್ಷಣವೂ ಮುಖ್ಯವಾಗಿರುವುದರಿಂದ ಶಿಕ್ಷಣ ವ್ಯವಸ್ಥೆಗೂ ಸ್ವಾಯತ್ತತೆ ನೀಡುವ ಅಗತ್ಯವಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ನಿವೃತ್ತ ನಿರ್ದೇಶಕ ಪ್ರೊ.ಜಿ.ಪದ್ಮನಾಭನ್‌ ಹೇಳಿದರು.

Advertisement

ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳ ವೇದಿಕೆ ಮಾನಸಗಂಗೋತ್ರಿ ವಿಜಾನ ಭವನದಲ್ಲಿ ಆಯೋಜಿಸಿದ್ದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಆಡಳಿತದಲ್ಲಿ ಶೈಕ್ಷಣಿಕ ನಾಯಕತ್ವದ ಮಹತ್ವ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯಂತೆ ಶಿಕ್ಷಣ ವ್ಯವಸ್ಥೆಯೂ ಮುಖ್ಯವಾಗಿದ್ದು, ಇದರ ಮೇಲೆ ಹಿಡಿತ ಸಾಧಿಸದೆ, ಸ್ವತಂತ್ರವಾಗಿ ಬೀಡಬೇಕಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಧ್ಯಾಪಕರು ಹಾಗೂ ಶಿಕ್ಷಣ ತಜ್ಞರು ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಜತೆಗೆ ನೀತಿ, ನಿಯಮಗಳನ್ನು ರೂಪಿಸಲು ಅವಕಾಶ ಕಲ್ಪಿಸಬೇಕಿದೆ. ಕುಲಪತಿಗಳನ್ನು ಆಯ್ಕೆ ಮಾಡಬೇಕಾಗಿರುವುದು ಶಿಕ್ಷಣ ತಜ್ಞರು ಹಾಗೂ ಹಿರಿಯ ಪ್ರಾಧ್ಯಾಪಕರಾಗಿದ್ದು, ಉನ್ನತ ಶಿಕ್ಷಣ ಸಚಿವಾಲಯ ಹಾಗೂ ರಾಷ್ಟ್ರಪತಿಗಳು ಆಯ್ಕೆ ಮಾಡುವ ವ್ಯವಸ್ಥೆ ತಪ್ಪಬೇಕಿದೆ. ಬದಲಿಗೆ ನ್ಯಾಯಾಂಗ ವ್ಯವಸ್ಥೆ ಮಾದರಿಯಲ್ಲೇ ಶಿಕ್ಷಣ ವ್ಯವಸ್ಥೆಗೆ ಸ್ವಾಯತ್ತತೆ ನೀಡುವ ಮೂಲಕ ಇದಕ್ಕಾಗಿ ಪ್ರತ್ಯೇಕ ಆಯೋಗ ರಚನೆ ಮಾಡಬೇಕಿದೆ ಎಂದರು.

ಭಾರತದಲ್ಲಿ 822 ವಿಶ್ವ ವಿದ್ಯಾಲಯಗಳು, 51 ಸಾವಿರ ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳಿದ್ದು, 17 ಸಾವಿರ ಪಿಎಚ್‌ಡಿ ನೀಡುವ ಸಂಸ್ಥೆಗಳಿವೆ, ಶೇ.37 ಪಿಜಿ ಕೇಂದ್ರಗಳಿವೆ. ಆದರೆ ಈ ಸಂಸ್ಥೆಗಳ ಗುಣಮಟ್ಟ ಯಾವ ರೀತಿಯಲ್ಲಿದೆ ಎಂಬುದನ್ನು ಯೋಚಿಸಬೇಕಾದ ಅಗತ್ಯವಿದ್ದು, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಕರಾತ್ಮಕ ಅಂಶಗಳೇ ಹೆಚ್ಚಾಗಿರುವುದರಿಂದ ವರದಿಗಳ ಪ್ರಕಾರ ಬಾರತದ ಉನ್ನತ ಶಿಕ್ಷಣದ ಬಗ್ಗೆ ಶೇ.90 ನಕರತ್ಮಾಕ ಭಾವನೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು, ಕುಲಸಚಿವೆ ಡಿ.ಭಾರತಿ, ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷ ಪ್ರೊ.ಎಸ್‌.ಎನ್‌.ಹೆಗ್ಡೆ, ಕಾರ್ಯದರ್ಶಿ ಪ್ರೊ.ಆರ್‌.ಎನ್‌.ಶ್ರೀನಿವಾಸಗೌಡ, ಪ್ರೊ.ಯಶ್ವಂತ್‌ ಡೊಂಗ್ರೆ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next