Advertisement

ಆಟೋಗ್ರಾಫ್ ಹೋಯಿತು, ಫೋಟೋಗ್ರಾಫ್ ಬಂತು !

07:00 AM Apr 06, 2018 | |

ಹೌದು, ಕೆಲವೇ ವರ್ಷಗಳಲ್ಲಿ ಎಷ್ಟೆಲ್ಲ  ಬದಲಾವಣೆಗಳಾ ಗಿವೆ, ಸಮಾಜ ಬದಲಾಯಿತು, ರಾಜಕೀಯ ನಾಯಕರು ಬದಲಾದರು, ಮನುಷ್ಯನ ಮನಸ್ಥಿತಿ, ಗುಣ, ಶಿಕ್ಷಣ ವ್ಯವಸ್ಥೆ, ಆಹಾರ ಪದ್ಧತಿ, ಮಾಧ್ಯಮ ಇತ್ಯಾದಿ ಎಲ್ಲ ವಿಷಯಗಳಲ್ಲಿಯೂ ಬದಲಾವಣೆಯಾಗಿದೆ. ಹಾಗೆಯೇ ಈ ಆಟೋಗ್ರಾಫ್ ಎಂಬ ನೆನಪಿನ ಬುತ್ತಿಯೂ ಕೂಡ ಸಂಪೂರ್ಣ ಬದಲಾಗಿದೆ.

Advertisement

ನಿಜ, ಇದೀಗ ಎಲ್ಲಾ ಶಾಲೆ-ಕಾಲೇಜುಗಳ ತರಗತಿಗಳು ವರ್ಷದ ಕೊನೆಗೆ ಬಂದು ನಿಂತಿವೆ, ಅದರಲ್ಲೂ ದ್ವಿತೀಯ ಪಿಯುಸಿ, ಹತ್ತನೆಯ ತರಗತಿಯ ಪರೀಕ್ಷೆಯು ಮುಗಿದು ಬೇಸಿಗೆ ರಜೆಯೂ ಆರಂಭವಾಗಿದೆ ಅನ್ನಿ. ಇದೇ ಸಮಯದಲ್ಲಿ, ಅಂದರೆ ತರಗತಿಯ ಕೊನೆಯ ಹಂತದಲ್ಲಿ ವಿದ್ಯಾರ್ಥಿಗಳು ಮೊದಲೆಲ್ಲ ಅಂಗಡಿಯಲ್ಲಿ ಸಿಗುವ ಬಣ್ಣಬಣ್ಣದ ಆಟೋಗ್ರಾಫ್ ಪುಸ್ತಕವನ್ನು ತೆಗೆದುಕೊಳ್ಳುವುದರಲ್ಲಿ ಮುಗಿಬೀಳುತ್ತಿದ್ದರು, ಯಾಕೆ ಅಂತ ನಿಮಗೂ ಗೊತ್ತಿರಬಹುದು. ಹೌದು, ತಮ್ಮ ನೆಚ್ಚಿನ ಗೆಳೆಯರು, ಶಿಕ್ಷಕರು ಇವರೆಲ್ಲರನ್ನೂ ಸದಾ ನೆನಪಿಸಿಕೊಳ್ಳಲು ಈ ಪುಸ್ತಕ ದಲ್ಲಿ ಆಟೋಗ್ರಾಫ್ನ್ನು ಬರೆಸಿಕೊಳ್ಳುತ್ತಿದ್ದರು. All the best for your examination, Keep smiling always, Friends forevers ಮುಂತಾದ ಇಂಗ್ಲಿಶ್‌ ಬರಹಗಳಾದರೆ ಕನ್ನಡದಲ್ಲಿ ನೆನಪುಗಳ ನೆನಪಲ್ಲಿ , ನೆನಪಾದ ನೆನಪೊಂದು ನೆನಪಿರುವವರೆಗೂ ನೆನಪಿರಲಿ- ಈ ನನ್ನ ನೆನಪು ಎಂಬೆಲ್ಲ ಬರಹಗಳು ಎದ್ದು ಕಾಣುತ್ತಿದ್ದವು.

ಒಟ್ಟಾರೆಯಾಗಿ ಹೇಳಬೇಕೆಂದರೆ ಮೊದಲು ಆಟೋಗ್ರಾಫ್ ಪುಸ್ತಕ ಎಂದರೆ ಅದರಲ್ಲಿ ನಮ್ಮ ಗೆಳೆತನದ ಕುರಿತಾದ ಸುಂದರ ಸಾಹಿತ್ಯಗಳು ಸಿಗುತ್ತಿದ್ದವು. ಡೆಸ್ಕ್ ಸಾಹಿತ್ಯ, ಬೆಂಚು ಸಾಹಿತ್ಯ ಇದ್ದಂತೆ, ಆಟೋಗ್ರಾಫ್ ಸಾಹಿತ್ಯವು ಮೊದಲಿತ್ತು. ಎಲ್ಲ ವಿದ್ಯಾರ್ಥಿಗಳು ಕೂಡ ಒಂದು ರೀತಿಯ ಸಣ್ಣಮಟ್ಟದ ಸಾಹಿತಿಗಳೇ ಆಗಿದ್ದರು. ಈ ಪುಸ್ತಕ ಕೇವಲ ಬರವಣಿಗೆ ಮಾತ್ರವಲ್ಲ, ಅದರೊಂದಿಗೆ ತಮ್ಮ ನೆಚ್ಚಿನ ಚಿತ್ರ ನಟರ ಫೋಟೋ, ಹೂವು-ಹಣ್ಣುಗಳ ಚಿತ್ರಗಳನ್ನು ಒಂದು ಬದಿಯಲ್ಲಿ ಅಲಂಕಾರಕ್ಕಾಗಿ ಅಂಟಿಸಲಾಗುತ್ತಿತ್ತು. ಅದರೊಂದಿಗೆ ತಮ್ಮ ವಿಳಾಸ, ಮೊಬೈಲ್ ನಂಬರ್‌, ಜನ್ಮ ದಿನಾಂಕ ಮುಂತಾದ ವಿಚಾರಗಳಿರುತ್ತಿದ್ದವು. ಹಾಗೆಯೇ ಕೆಲವೊಂದು ಜೋಕ್ಸ್‌ ಗಳು ಅಲ್ಲಲ್ಲಿ ಮಧ್ಯ ಹರಿದಾಡುತ್ತಿದ್ದವು. ನನ್ನ ಗೆಳೆಯ ಅಥವಾ ಗೆಳತಿಗೆ ನನ್ನ ನೆನಪೇ ಮೊದಲು ಬರಬೇಕೆಂದು ಮೊದಲನೆಯ ಪುಟವನ್ನು ಕಾಯ್ದಿರಿಸುವವರು ಕೂಡ ಹಲವರಿ¨ªಾರೆ, ಇನ್ನೂ ಕೆಲವು ಮಂದಿ ಕೊನೆಯ ಪುಟಕ್ಕಾಗಿ ಮೊದಲೇ ಜಾಗವನ್ನು ಕಾಯ್ದಿರಿಸುತ್ತಿದ್ದರು. ಒಟ್ಟಾರೆಯಾಗಿ ಆಟೋಗ್ರಾಫ್ ಪುಸ್ತಕ ಎನ್ನುವುದು ವಿದ್ಯಾರ್ಥಿ ಜೀವನದ ಒಂದು ಭಾಗ ಎನ್ನಬಹುದು.

ಆದರೆ ಈಗ, ಅವೆಲ್ಲ ಬದಲಾಗಿದೆ. ಆಧುನಿಕತೆಯು ತಲೆ ಎತ್ತಿದೆ. ಅಂದು ಬರೆಯುತ್ತಿದ್ದ ಸಣ್ಣಪುಟ್ಟ ಸಾಹಿತ್ಯದ ವಾಕ್ಯಗಳು ಇಂದಿಲ್ಲ. ಮೊದಲಿದ್ದ ಆಟೋಗ್ರಾಫ್ ಪುಸ್ತಕಗಳ ಖರೀದಿಯು ಈಗ ಕಡಿಮೆಯಾಗಿದೆ. ಈಗ ಕೇವಲ ಫೋಟೋಗ್ರಾಫ್ನ ಕಾಲ. ಕಾಲೇಜು ದಿನಗಳಲ್ಲಿ ತೆಗೆದ ವಿವಿಧ ಭಂಗಿಯ ಫೋಟೋಗಳೇ ಈಗ ಆಟೋಗ್ರಾಫ್ನ ಜಾಗವನ್ನು ಆವರಿಸಿದೆ ಮತ್ತು ಅದುವೇ ಆಟೋಗ್ರಾಫ್ ಕೂಡ ಆಗಿದೆ. ಅದರಲ್ಲೂ ವಿಶೇಷವಾಗಿ ಕಾಲೇಜು ಡೇ ಸಮಯದಲ್ಲಂತೂ ತಮ್ಮ ನೆಚ್ಚಿನ ಗೆಳೆಯ ಗೆಳತಿಯರು, ಶಿಕ್ಷಕರು, ತಮ್ಮ ಆತ್ಮೀಯರೊಂದಿಗೆ ಫೋಟೋ ತೆಗೆದುಕೊಂಡು ಅದನ್ನು ತಮ್ಮ ಮೊಬೈಲ…ನ ಮೆಮೊರಿಯಲ್ಲಿ ಸೇವ್‌ ಮಾಡಿಕೊಂಡರೆ ಅದೇ ಎಲ್ಲಕ್ಕಿಂತ ದೊಡ್ಡದಾದ ಆಟೋಗ್ರಾಫ್. ತಾವು ಏನಾದರೂ ದೊಡ್ಡ ವ್ಯಕ್ತಿಗಳು, ಸಿನೆಮಾ ತಾರೆಯರು, ರಾಜಕೀಯ ದಿಗ್ಗಜರು ಇವರನ್ನೆಲ್ಲಾ ಭೇಟಿ ಮಾಡಿದ ಮೇಲೆ ಮೊದಲೆಲ್ಲ ಪೆನ್ನು ಪೇಪರ್‌ ಹಿಡಿದು ಅವರ ಹಿಂದೆ ಹೋಗುತ್ತಿದ್ದ ಅಭಿಮಾನಿಗಳು ಈಗ ಕೇವಲ ಒಂದು ಸ್ಮಾರ್ಟ್‌ ಫೋನ್‌ ಹಿಡಿದು ಅವರ ಹಿಂದೆ ಹೋಗುತ್ತಾರೆ. ಕೇವಲ ಒಂದು ಫೋಟೋ, ಅವರನ್ನು  ನಾವು ಭೇಟಿಯಾದ ದಿನ, ಸಮಯ ಇತ್ಯಾದಿ ಎಲ್ಲಾ ವಿವರಗಳನ್ನು ಹಿಡಿದಿಡುತ್ತದೆ. ಆದರೆ, ಇದೇ ಫೋಟೋಗಳು ಎಲ್ಲಾದರೂ ಅಚಾನಕ್‌ ಆಗಿ ಡಿಲೀಟ… ಆದರೆ ಅದರಿಂದಾಗುವ ನೋವು ಅಷ್ಟಿಷ್ಟಲ್ಲ.

ನಿಜ, ಈಗ ಜೀವನ ಶೈಲಿಯು ಬದಲಾಗಿದೆ, ಅದರೊಂದಿಗೆ ಈ ರೀತಿಯ ಆಟೋಗ್ರಾಫ್, ಕಾಲೇಜು ಲೈಫ್ ಎಲ್ಲವೂ ಕೂಡಾ ಬದಲಾಗಿದೆ. ಸುಂದರ ಆಟೋಗ್ರಾಫ್ ಸಾಹಿತ್ಯವು ಈಗಿಲ್ಲ. ಈಗ ಎಲ್ಲ ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರವೇ ಸಾಹಿತ್ಯ ಕಾಣಸಿಗುತ್ತವೆ.

Advertisement

ದಿವ್ಯಾ ಡಿ. ಶೆಟ್ಟಿ, ಪತ್ರಿಕೋದ್ಯಮ ವಿಭಾಗ, ಎಂ. ಜಿ. ಎಂ ಕಾಲೇಜು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next