Advertisement

Bangalore: ಮನೆ ಎದುರು ಆಟೋ ನಿಲ್ಲಿಸಿದ್ದು ಪ್ರಶ್ನಿಸಿದ್ದಕ್ಕೆ ಹಲ್ಲೆ

10:23 AM Mar 26, 2024 | Team Udayavani |

ಬೆಂಗಳೂರು: ಆಟೋ ನಿಲುಗಡೆ ವಿಚಾರಕ್ಕೆ ಮನೆಗೆ ನುಗ್ಗಿ ಒಂದೇ ಕುಟುಂಬದ ಮೂವರು ಮಹಿಳೆಯರು ಸೇರಿ ಆರೇಳು ಮಂದಿ ಮೇಲೆ ಹಲ್ಲೆ ನಡೆಸಿ ರುವ ಘಟನೆ ಕುಮಾರಸ್ವಾಮಿ ಲೇಔಟ್‌ನ ಪ್ರಗತಿ ಪುರದಲ್ಲಿ ನಡೆದಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

Advertisement

ಪ್ರಗತಿಪುರ ನಿವಾಸಿಗಳಾದ ಸೈಯದ್‌ ತಾಹ(37), ಅಫ್ರೀದ್‌ ಪಾಷಾ(32) ಮತ್ತು ಕರೀಮ್‌(35) ಬಂಧಿತರು. ಆರೋಪಿಗಳು ಮಾ.24ರಂದು ರಾತ್ರಿ ಸುಕುಮಾರ ಎಂಬುವರ ಮನೆಗೆ ನುಗ್ಗಿ ಮೂವರು ಮಹಿಳೆಯರು ಸೇರಿ ಅವರ ಕುಟುಂಬದ ಆರೇಳು ಮಂದಿ ಸದಸ್ಯರ ಮೇಲೆ ಹಲ್ಲೆ  ನಡೆಸಿದ್ದರು.

ಘಟನೆಯ ವಿಡಿಯೋವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಅಲ್ಲದೆ, ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಘಟನೆ ಬಗ್ಗೆ ಪ್ರಶ್ನಿಸಿದ್ದರು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದು, ಕೆಲವರು ತಪ್ಪಿಸಿಕೊಂಡಿದ್ದಾರೆ. ಈ ವಿಡಿಯೋ ಆಧರಿಸಿ ತಪ್ಪಿಸಿಕೊಂಡಿರುವ ಆರೋಪಿಗಳನ್ನು ಶೀಘ್ರ ದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹಲ್ಲೆಗೊಳಗಾದ ಸುಕುಮಾರ್‌ ಮತ್ತು ಆರೋಪಿಗಳ ಪೈಕಿ ಸೈಯದ್‌ ತಾಹ ಅಕ್ಕ-ಪಕ್ಕದ ನಿವಾಸಿಗಳಾಗಿದ್ದು, ಇಬ್ಬರೂ ಆಟೋ ಚಾಲಕ ರಾಗಿದ್ದಾರೆ. ತಾಹ ಭಾನುವಾರ ನಮಾಜ್‌

ಮುಗಿಸಿ ಕೊಂಡು ಬಂದು ಸುಕುಮಾರ್‌ ಮನೆ ಮುಂಭಾಗವೇ ಆಟೋ ಪಾರ್ಕ್‌ ಮಾಡಿದ್ದಾನೆ. ಅದನ್ನು ಗಮನಿಸಿದ ಸುಕುಮಾರ್‌, ಆರೋಪಿಯನ್ನು ಪ್ರಶ್ನಿಸಿ ಪಕ್ಕಕ್ಕೆ ಆಟೋ ನಿಲುಗಡೆ ಮಾಡುವಂತೆ ಕೇಳಿದ್ದಾರೆ. ಆಗ ಆರೋಪಿ, ಸುಕುಮಾರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಥಳದಿಂದ ತೆರಳಿದ್ದ. ಕೆಲ ಹೊತ್ತಿನ ಬಳಿಕ 20-30 ಮಂದಿಯನ್ನು ಕರೆತಂದು ಸುಕುಮಾರ್‌ ಮನೆಗೆ ನುಗ್ಗಿ ಮಹಿಳೆಯರು, ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

ಅಲ್ಲದೆ, ಸುಕುಮಾರ್‌ ಮನೆ ಮುಂಭಾಗ ಹತ್ತಾರು ಮಂದಿ ಜಮಾಯಿಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ಮಧ್ಯೆ ಈ ವಿಡಿಯೋವನ್ನು ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮತ್ತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಘಟನೆ ಬಗ್ಗೆ ನಗರ ಪೊಲೀಸ್‌ ಆಯುಕ್ತ ದಯಾನಂದಗೆ ಕ್ರಮಕೈಗೊಳ್ಳುವಂತೆ ಕೋರಿದ್ದರು. ಅಲ್ಲದೆ, ಹಿಂದೂಗಳೇ ಜಾಗರೂಕರಾಗಿರಿ ಎಂದು ಪೋಸ್ಟ್‌ ಮಾಡಿದ್ದರು. ಇದೀಗ ವಿಚಾರಣೆಯಲ್ಲಿ ಕೋಮುಸಂಘರ್ಷ ಅಲ್ಲ ಎಂಬುದು ತಿಳಿದು ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.

ಘಟನೆ ಸಂಬಂಧ ಹಲ್ಲೆಗೊಳಗಾಗಿರುವ ಸುಕುಮಾರ್‌ ಕುಟುಂಬ ಸದಸ್ಯರು ಪ್ರತಿಕ್ರಿಯಿಸಿದ್ದು, ಭಾನುವಾರ ರಾತ್ರಿ ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಒಬ್ಬ ಹುಡುಗನ ಜತೆ ಗಲಾಟೆ ಶುರುವಾಯಿತು. ನಂತರ ಆತ ಹೋಗಿ ಸುಮಾರು 20ಕ್ಕೂ ಜನರನ್ನು ಕರೆದುಕೊಂಡು ಬಂದು, ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಮಕ್ಕಳಿಗೂ ಹೊಡೆದಿದ್ದಾರೆ. ಮಾಂಗಲ್ಯ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋಮು ಸಂಘರ್ಷವಾಗಿಲ್ಲ: ಡಿಸಿಪಿ :

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌, ಆಟೋ ಪಾರ್ಕಿಂಗ್‌ ವಿಚಾರಕ್ಕೆ ಅಕ್ಕ-ಪಕ್ಕದ ಮನೆಯವರ ನಡುವೆ ಗಲಾಟೆಯಾಗಿದೆ. ಘಟನೆಯಲ್ಲಿ ಕೋಮುವಾದದ ವದಂತಿ ಹಬ್ಬಿತ್ತು. ಆದರೆ, ಇದುವರೆಗೂ ಆ ರೀತಿ ಯಾವುದೇ ವಿಚಾರ ಕಂಡು ಬಂದಿಲ್ಲ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿಭದ್ರತೆ ಕಲ್ಪಿಸಲಾಗಿದೆ. ಘಟನೆಯ ಸಂಬಂಧ ಹಲ್ಲೆಗೊಳಗಾದ ಸುಕುಮಾರ್‌ ದೂರು ನೀಡಿದ್ದು, ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಭಗವಾಧ್ವಜದ ಕಾರಣಕ್ಕೆ ಹಲ್ಲೆ? : ಇನ್ನು ಮತ್ತೂಂದೆಡೆ ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ದಿನ ಸುಕುಮಾರ್‌ ತಮ್ಮ ಮನೆ ಮೇಲೆ ಭಗವಾಧ್ವಜ ಹಾರಿಸಿದ್ದರು. ಈ ಕಾರಣಕ್ಕೆ ಹಲ್ಲೆ ಮಾಡಿರುವ ಬಗ್ಗೆ ಸುಕುಮಾರ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ದೂರುದಾರರು ದೂರಿನಲ್ಲಿ ಉಲ್ಲೇಖೀಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next