Advertisement

ಮಾನವೀಯ ಕಾಳಜಿಯ ಲೇಖಕಿ ಕೆ. ತಾರಾ ಭಟ್‌

06:18 PM Jan 16, 2020 | mahesh |

ಹಿರಿಯ ಲೇಖಕಿ, ಚಿಂತಕಿ ಸಾರಸ್ವತ ಲೋಕದ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಕೆ. ತಾರಾ ಭಟ್‌ ಅವರದು ಬಹುಮುಖ ಪ್ರತಿಭೆ. ದೇಶದ ಸ್ವಾತಂತ್ರ್ಯದ ಹೊಸಬೆಳಕಿನ ನಿರೀಕ್ಷೆಯ ಹೊತ್ತಿನಲ್ಲಿ ಕುಂದಾಪುರದಲ್ಲಿ 1944ರ ಸೆಪ್ಟಂಬರ್‌ 3ರಂದು ಹುಟ್ಟಿದ ಅವರು ಕ್ರಿಯಾಶೀಲ ವ್ಯಕ್ತಿ. ಸಮಕಾಲೀನ ಬದುಕಿನ ಬವಣೆಗಳು, ಜಗತ್ತಿನ ಸೂಕ್ಷ್ಮಗಳನ್ನು, ಅದರ ಒಳಸುಳಿಗಳನ್ನು ಸೆರೆಹಿಡಿಯುವಲ್ಲಿ ನಿಸ್ಸೀಮರು. “ಸಾರ್ಕ್‌ ಹೆಣ್ಣುಮಗುವಿನ ವರ್ಷ 1990’ರಲ್ಲಿ ತಬ್ಬಲಿ ಟೆಲಿಫಿಲ್ಮ್ ನಿರ್ದೇಶಿಸಿ ಮೆಚ್ಚುಗೆ ಗಳಿಸಿಕೊಂಡವರು. ಸಹಜತೆಯನ್ನೇ ಇಷ್ಟಪಡುವ ಅವರು ತಮ್ಮ ಜೀವನದ ಬಗ್ಗೆ ಮಾತಿಗೆ ಕುಳಿತಾಗ ಅವರ ಪ್ರಗತಿಶೀಲ ದೃಷ್ಟಿಕೋನ ಅನಾವರಣಗೊಂಡಿತು.

Advertisement

ತಾರಾ ಭಟ್‌ರವರೆ, ತಮ್ಮ ಬಾಲ್ಯದ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವಿರಾ?
-ನಮ್ಮದು ಕುಂದಾಪುರ ಊರು. ಮಹಾರಾಷ್ಟ್ರದಲ್ಲಿದ್ದ ಪೂರ್ವಜರನ್ನು ಕುಂದಾಪುರದ ಪಾಳೆಯಗಾರರು ಕರೆಯಿಸಿ ಕೋಟೆ ಆಂಜನೇಯ ದೇವಳದ ಅರ್ಚಕರಾಗಿ ನೇಮಿಸಿ “ರಾಜ ಪುರೋಹಿತರು’ ಎಂಬ ಗೌರವ ನೀಡಿದರು ಎನ್ನಲಾಗಿದೆ. ನಮ್ಮ ತಂದೆ ಬನಾರಸಿನಲ್ಲಿ ನೆಲೆಸಿ ಜ್ಯೋತಿಷ್ಯ ಹಾಗೂ ವೇದಶಾಸ್ತ್ರಗಳಲ್ಲಿ ಹೆಚ್ಚಿನ ಪರಿಣತಿ ಹೊಂದಿದವರು. ತಾಯಿಯ ಊರಾದ ಕೋಟೇಶ್ವರದಲ್ಲಿ ಪಟ್ಟಾಭಿ ರಾಮಚಂದ್ರ ದೇವಳದ ಪ್ರಧಾನ ಅರ್ಚಕರಾಗಿ ಪಕ್ಕದಲ್ಲೇ ಹೊಸಮನೆಯಲ್ಲಿ ಮಡದಿ-ಮಕ್ಕಳೊಂದಿಗೆ ವಾಸ್ತವ್ಯ ಹೊಂದಿದ್ದರು. ಅದೇ ವರ್ಷ ಕೋಟೇಶ್ವರ ರಥೋತ್ಸವದಲ್ಲಿ ರಥ ಎಳೆಯುವಾಗ ಹಗ್ಗ ತುಂಡಾಗಿ ರಭಸದಲ್ಲಿ ಆ ಹಗ್ಗ ತಂದೆಯವರನ್ನೇ ಸುತ್ತಿದ ಪರಿಣಾಮ ರಥದ ಕೆಳಗೆ ತಂದೆ ಪ್ರಾಣಬಿಟ್ಟರು. ನನ್ನ ಅಮ್ಮ ಎರಡು ತಿಂಗಳ ಹಸಿ ಬಾಣಂತಿ. ಪುಟ್ಟ ಮಕ್ಕಳಾದ ನಮ್ಮೆಲ್ಲರನ್ನು ತಬ್ಬಿಕೊಂಡ ಅಮ್ಮ ಬೀದಿಪಾಲಾದದ್ದು ನನ್ನಿಂದ ಮರೆಯಲಾಗದ್ದು. ದೊಡ್ಡಕ್ಕ ಅದಾಗಲೇ ವಿವಾಹಿತಳಾಗಿದ್ದಳು. ನಾವು ಅಪ್ಪನನ್ನು “ವಿಠೊಭ’ ಎಂದು ಹೆಸರಿಡಿದು ಕರೆಯುತ್ತಿದ್ದದ್ದು ಅಪ್ಪನಿಗೆ ಖುಷಿಯೋ ಖುಷಿಯಂತೆ.

ಹೆಣ್ಣು ಮಕ್ಕಳಿಗೆ ಶಿಕ್ಷಣದ ನಿರ್ಬಂಧವಿದ್ದ ಕಾಲದಲ್ಲಿ ತಮಗೆ ಓದು-ಬರಹ ಹೇಗೆ ಸಾಧ್ಯವಾಯಿತು?
ಮನೆಯಲ್ಲಿ ಮತ್ತು ಹೊರಗಿನ ಎಲ್ಲ ವಿರೋಧ ಎದುರಿಸಿ ನಾನು ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಪಿಯುಸಿ ಮುಗಿಸಿದೆ. ಆವಾಗಲೇ ನಾನು ಅನೇಕ ಸಣ್ಣಕಥೆಗಳನ್ನು ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿಸಿದ್ದೆ. ತವರಿಗೆ ಬರುತ್ತಿದ್ದ ಅಕ್ಕ, ಆಗಿನ ಕಾಲದ ದೊಡ್ಡ ದೊಡ್ಡ ಲೇಖಕಿಯರ ಹೆಸರುಗಳನ್ನು ಹೇಳಿ ಅವರ ಕಥೆಯ ಸಾರಾಂಶವನ್ನು ಬಣ್ಣಿಸುತ್ತಿದ್ದಳು. “ನೀನೂ ಕಥೆ ಬರಿ’ ಎಂದು ಪ್ರೇರೇಪಿಸುತ್ತಿದ್ದಳು. ಹಾಗಾಗಿ, ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆ ಆರಂಭವಾಯಿತು. ಪಾಟೀಲ ಪುಟ್ಟಪ್ಪನವರು ಸಂಪಾದಕರಾಗಿದ್ದಂತಹ ಪ್ರಪಂಚ ಪತ್ರಿಕೆಯಲ್ಲಿ ಮೋಡ ಮುಸುಕಿತು ತಾರೆ ಮಿನುಗಿತು ಕಥೆ ಪ್ರಕಟವಾಗಿತ್ತು. ಕೋಟೇಶ್ವರದಲ್ಲಿ ಮಹಿಳೆಯರು ಹೆಚ್ಚು ಓದಿದರೆ ಕೆಟ್ಟೇ ಹೋಗುತ್ತಾರೇನೋ ಎನ್ನುವ ನಂಬಿಕೆ. ಹಾಗಾಗಿ, ನನಗೆ ಶಿಕ್ಷಣ ಮುಂದುವರಿಸಲಾಗಲಿಲ್ಲ. ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕೆಲಸಮಾಡುವ ಸಂದರ್ಭದಲ್ಲಿ “ಆಚಾರ್ಯ ಪಾಠಶಾಲೆ’ ಸಂಜೆ ಕಾಲೇಜಿಗೆ ಸೇರಿದೆ. ಬಿ.ಎ. ಮುಗಿಸಿಕೊಂಡೆ.

ಮರೆಯಬೇಕೆಂದರೂ ಮರೆಯಲಾಗದೆ ಮನಸ್ಸಿಗೆ ಘಾಸಿಗೊಳಿಸಿದ ಹಾಗೂ ನಿಮ್ಮ ಬರವಣಿಗೆಯುದ್ದಕ್ಕೂ ತೆರೆದುಕೊಳ್ಳುವ ಆಕ್ರೋಶಕ್ಕೆ ಕಾರಣೀಭೂತವಾದ ಸಂಗತಿ?
-ತಂದೆಯವರ ಸಾವಿನ ನಂತರದ ತಿಥಿಯ ದಿನ ಎರಡು ತಿಂಗಳ ಕೂಸನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡ ತಾಯಿಯ ಕೇಶಮುಂಡನ ಮಾಡಿದರು. ಅಮ್ಮ ಅತ್ತು ಗೋಗರೆಯುತ್ತಿದ್ದರು. “ಮಕ್ಕಳು ಹೆದರುತ್ತವೆ, ಮಗು ಭಯಗೊಳ್ಳುತ್ತದೆ. ನಾನು ಮತ್ತೆ ತಲೆಬೋಳಿಸಿಕೊಳ್ಳುತ್ತೇನೆ, ಈಗ ಕೂದಲು ತೆಗೆಯಬೇಡಿ’ ಎಂದು ಪರಿಪರಿಯಾಗಿ ಬೇಡಿಕೊಂಡರು. ಅಮ್ಮನ ಮಾತು ಕಿವಿಗೇ ಹಾಕಿಕೊಳ್ಳದೇ ತಲೆಬೋಳಿಸಿ, ಕೆಂಪು ಸೀರೆ ಉಡಿಸಿ, ಕತ್ತಲೆ ಕೋಣೆಯಲ್ಲಿ ಕುಳ್ಳಿರಿಸಿದರು. ಅಮ್ಮನನ್ನು ನೋಡಿ ನಾನು ಭಯಗೊಂಡು ಕಿರುಚಿದ್ದೆ. “ಭೂತದ ಕೈಯಿಂದ ಮಗುವನ್ನು ತೆಗೆದುಕೊಳ್ಳಿ’ ಎಂದು ಬೊಬ್ಬಿಟ್ಟಿದ್ದೆ. ಈ ಭಯಂಕರ ಕ್ರೌರ್ಯ ಯೌವನಾವಸ್ಥೆಗೆ ಬಂದ ಮೇಲೆ ತಿಳಿಯಿತು. ವಿಧವೆಯ ಮೇಲೆ ನಡೆಯುವ ಕ್ರೌರ್ಯದ ಬಗ್ಗೆ ತಿಳಿವಳಿಕೆ ಬಂದು ಮಹಿಳಾ ಸಂಘಟನೆಗಳಲ್ಲಿ ಪಾಲ್ಗೊಂಡು ಹೋರಾಟಕ್ಕೆ ಇಳಿದಿರುವುದಕ್ಕೆ ಮೂಲ ಪ್ರೇರಣೆ ಇರಬಹುದು.

ಹದಿನೆಂಟರ ಹೊಸ್ತಿಲಲ್ಲಿ ಬೊಂಬಾಯಿ ಪಟ್ಟಣದಲ್ಲಿ ನಿಮ್ಮ ಔದ್ಯೋಗಿಕ ಬದುಕಿನ ನೆನಪುಗಳನ್ನು ಬಿಚ್ಚಬಹುದೇ?
-ಶಿಕ್ಷಣಕ್ಕೇ ಆಸ್ಪದವಿಲ್ಲದ ಹಳ್ಳಿಯಲ್ಲಿ ಉದ್ಯೋಗಕ್ಕೆಲ್ಲಿದೆ ಅವಕಾಶ! ದೊಡ್ಡಕ್ಕ ಮುಂಬೈಯಲ್ಲಿ ನೆಲೆಸಿದ್ದ ಕಾರಣ ನಾನು ಅಲ್ಲಿಗೆ ಹೋಗಿ ಸೊಹಾಲ್‌ ಇಂಜಿನಿಯರಿಂಗ್‌ ಕಂಪೆನಿಯಲ್ಲಿ ರಿಸೆಪ್ಷನಿಸ್ಟ್‌ ಕೆಲಸಕ್ಕೆ ಸೇರಿದೆ. ಅಲ್ಲಿ ಎಲ್ಲರೂ ಅತ್ಯಂತ ಸುಂದರಿಯರು. ಕೆಲವರೋ ಕೃತಕ ಸುಂದರಿಯರು. ಉಡುಗೆ-ತೊಡುಗೆಯೂ ಅಷ್ಟೆ. ಮಿಡಿ, ಮಿನಿ, ಸ್ಕರ್ಟ್‌, ತುಟಿಗೆ ಲಿಪ್‌ಸ್ಟಿಕ್‌ ಬೇಕೇ ಬೇಕು. ಆದರೆ, ಎಲ್ಲರೂ ಒಳ್ಳೆಯ ಮನಸ್ಸಿನವರು. ತುಟಿಗೆ ಬಣ್ಣ ಹಚ್ಚಿಕೊಳ್ಳಬೇಕೆಂದು ಎಲ್ಲರೂ ಒತ್ತಾಯಿಸಿದ್ದರು. ಆದರೆ, ನಾನು ಒಪ್ಪಿರಲೇ ಇಲ್ಲ. ನನ್ನದೇ ಉಡುಗೆ. ನಾನೂ ಅಪ್ಪಟ ದೇಸೀ ಸೀರೆಯಲ್ಲಿ ಚೆನ್ನಾಗೇ ಕಾಣುತ್ತಿದ್ದೆ ಎಂಬ ಆತ್ಮವಿಶ್ವಾಸ ನನ್ನಲ್ಲಿತ್ತು. ಇಂತಹ ಅನೇಕ ನೆನಪುಗಳು ಕಾಡುತ್ತವೆ.

Advertisement

ಸಿನೆಮಾ ಮಾಡಬೇಕೆನ್ನುವ ಒತ್ತಾಸೆಯಿಂದ ಸೇರಿಕೊಂಡ ಸಿನೆಮಾ ತರಬೇತಿ ಸಂಸ್ಥೆಯಲ್ಲಿನ ಅನುಭವ?
ಅಮ್ಮನ ಕೇಶಮುಂಡನದ ಬಗ್ಗೆ ಸಿನೆಮಾ ತರಬೇಕೆಂದಿದ್ದ ಒತ್ತಾಸೆ ಅತಿಯಾಗಿತ್ತು. ತಬ್ಬಲಿ ಟೆಲಿಫಿಲ್ಮ್ ತೆಗೆದ ದಾಖಲೆಗಳನ್ನೆಲ್ಲ ಹಿಡಿದುಕೊಂಡು ಪೂನಾದ “ಫಿಲ್ಮ್ ಇನ್‌ಸ್ಟಿಟ್ಯೂಟ್‌’ಗೆ ಸೇರಿದೆ. ಕಲ್ಪನಾ ಲಾಜ್ಮಿ , ಸಹಿದ್‌ ಮಿರ್ಜಾ ನನ್ನ ಗುರುಗಳಾಗಿದ್ದರು. ಬೆಂಗಳೂರಿನ “ಕರ್ನಾಟಕ ಚಲನಚಿತ್ರ ತಾಂತ್ರಿಕ ತರಬೇತಿ ಕೇಂದ್ರ’ದಲ್ಲೂ, ಮದ್ರಾಸಿನ “ಏಕನಾಥ ಫಿಲ್ಮ್ ಇನ್‌ಸ್ಟಿಟ್ಯೂಟ್‌’ನಲ್ಲೂ ಚಲನಚಿತ್ರ ನಿರ್ದೇಶನ ಕುರಿತು ಅಭ್ಯಾಸ ಮಾಡಿದೆ. ಎಲ್ಲ ತರಬೇತಿಗಳು ನನ್ನ ಮನಸ್ಸಿಗೆ ಮಹದಾನಂದ ತಂದಿತ್ತು.

ವಿಷಯ ತಿಳಿದ ತಕ್ಷಣ ಅದರ ಮೂಲ ಹುಡುಕುವ ನಿಮ್ಮ ರೋಚಕ ಅನುಭವ?
ಪತ್ರಿಕೆಗಳನ್ನು ಓದುವುದು ನನ್ನ ಹವ್ಯಾಸ. ಕಾಸರಗೋಡಿಗೆ ಹತ್ತಿರವಿರುವ ಕುಗ್ರಾಮವೊಂದರಲ್ಲಿ ಒಂದು ಕುಟುಂಬದ ಪ್ರಾಯಕ್ಕೆ ಬಂದ ಹೆಣ್ಣುಮಕ್ಕಳು ಬಟ್ಟೆ ಧರಿಸದೆ ಬೆತ್ತಲೆಯಾಗಿರುತ್ತಾರೆ. ಇದು ಮನೆತನಕ್ಕೆ ಬಂದ ಶಾಪ. ಸೀರೆ ಉಟ್ಟರೆ ಸಾಯುತ್ತಾರೆ- ಎನ್ನುವ ಮೂಢನಂಬಿಕೆಯ ಬಗ್ಗೆ ಮೂವತ್ತು ವರುಷಗಳ ಹಿಂದೆ ಇಂಡಿಯನ್‌ ಎಕ್ಸ್‌ ಪ್ರಸ್‌ನಲ್ಲಿ ಓದಿದ್ದೆೆ. ನಾನು ನನ್ನ ತಂಗಿ ಶಾರದಾ ಇಬ್ಬರೂ ಆ ಮನೆಯನ್ನು ಹುಡುಕಿಕೊಂಡು ಹೋಗಿ ಊರವರ ಸಹಕಾರದಿಂದ ತಲುಪಿದ್ದೇನೋ ಆಯ್ತು. ಮೂಲ ಮನೆಯಿಂದ ಸ್ವಲ್ಪ ಕೆಳಗೆ ಮಣ್ಣಗೋಡೆಯ ಹುಲ್ಲ ಹೊದಿಕೆಯ ಗುಡಿಸಲು. ಸುತ್ತಲೂ ಸೊಪ್ಪಿನಿಂದ ಮರೆಮಾಡಿದ್ದಾರೆ. ಮುಚ್ಚಿಟ್ಟುಕೊಂಡ ಕ್ಯಾಮರಾವನ್ನು ಹೊರ ತೆಗೆದು ರೆಡಿಯಾಗುವಾಗ ತರಗೆಲೆ ಸದ್ದಿಗೆ ಹೊರಗಿದ್ದ ಒಬ್ಬಂಟಿ ಬೆತ್ತಲೆ ಮಹಿಳೆ ಒಳ ಓಡಿಬಿಟ್ಟಳು. ಈ ವರದಿಯನ್ನು ಮುಂಬೈಯ ನ್ಯೂ ವುಮೆನ್‌ ಪತ್ರಿಕೆಯಲ್ಲಿ Under the veil of darkness ಎನ್ನುವ ಶಿರೋನಾಮೆಯಡಿ ಪ್ರಕಟವಾಯಿತು. ಈ ಕುರಿತು ಬಹಳ ಚರ್ಚೆಗಳೂ ನಡೆದವು. ಆವಾಗ ಹೇಮಮಾಲಿನಿ ಆ ಪತ್ರಿಕೆಯ ಸಂಪಾದಕರಾಗಿದ್ದರು.

ತಮ್ಮ ಸಮಾಜಮುಖೀ ಕೆಲಸಗಳಿಗೆ ಒತ್ತುನೀಡಿದ ಸಂದರ್ಭಗಳು?
ಅನೇಕ ಮಹಿಳಾ ಸಂಘಟನೆ ಪರಿಚಯವಾಗಿ ಸ್ತ್ರೀಪರ ಕಾಳಜಿಯ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದೆ.  ಲೈಂಗಿಕ ಶೋಷಣೆ ಮುಂತಾದ ಜೀವ ವಿರೋಧಿ ಮೌಲ್ಯಗಳ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡೆ. ಈ ಕ್ರಿಯಾಶೀಲತೆ ನನ್ನ ಬರಹಗಳಿಗೆ ಪ್ರೇರಣೆಯಾಯಿತು. ಪತ್ರಕರ್ತೆಯಾಗಿ ನಾನು ಕೆಲಸ ನಿರ್ವಹಿಸಿದಾಗ ಗಳಿಸಿಕೊಂಡ ಅನುಭವಗಳೇ ಅವ್ಯಕ್ತ ಕಾದಂಬರಿಗೆ ಪ್ರೇರಣೆಯಾಗಿ ಒದಗಿ ಬಂತು.  ಬೆಂಗಳೂರಿನಲ್ಲಿ ನಾನು ಜೀವನ ನಿರ್ವಹಿಸಿದ ಸಂದರ್ಭದಲ್ಲಿ ಮಹಿಳಾ ಶೋಷಣೆಯ ವಿವಿಧ ಮುಖಗಳನ್ನು ಕಾಣುವಂತಾಯಿತು. ದಲಿತ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೂತ್‌ ಮನೋರಮ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ವುಮೆನ್ಸ್‌ ವಾಯ್ಸ ಸಂಘಟನೆಯಲ್ಲಿ ಸಕ್ರಿಯವಾಗಿದ್ದೆ. ಮದುವೆಯ ಗೊಡವೆಗೆ ಹೋಗದೆ ಇದ್ದುದರಿಂದ ಈಗ ನಾನು ತಂಗಿ ಶಾರದಾಳೊಂದಿಗೆ ಉಡುಪಿ ಮಿಶನ್‌ ಆಸ್ಪತ್ರೆ ರಸ್ತೆಯ ಶಾಂತಾನಂದ ರೆಸಿಡೆನ್ಸಿಯಲ್ಲಿ ಇದ್ದೇನೆ. ಬರವಣಿಗೆಯ ಕಾಯಕ ಮುಂದುವರೆದಿದೆ.

ತಾರಾ ಭಟ್‌ ಬರೆದ ಲೋಟಸ್‌ ಪಾಂಡ್‌ ಕಾದಂಬರಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಮಣಿಪಾಲ ಪ್ರಸ್‌ನಿಂದ ಇಂಗ್ಲಿಷ್‌ಗೆ ಅನುವಾದಗೊಳ್ಳಲಿದೆ. ಅವ್ಯಕ್ತ ಕಾದಂಬರಿಯೂ ಜನಮೆಚ್ಚುಗೆ ಗಳಿಸಿದೆ.
ಗಾಳಿಯಲ್ಲಿ ಹೆಪ್ಪುಗಟ್ಟಿದ ಮೌನ, ಪರಿಧಿಯನ್ನು ಅರಸುತ್ತ, ಬೋಳು ಮರದ ಕೊಂಬೆಗಳು, ಮುಖವಿಲ್ಲದವರು ಸಣ್ಣ ಕಥಾ ಸಂಕಲನಗಳು. ಹೊಕ್ಕುಳ ಬಳ್ಳಿ, ಸರ್ವಾಧಿಕಾರಿ ನಾಟಕ, ಅಲ್ಲಾವುದ್ದೀನನ ಅದ್ಭುತ ದೀಪ, ಮೂಢರಾಜಾ ಗಾಂಪ ಮಂತ್ರಿ – ಮಕ್ಕಳ ನಾಟಕಗಳು. ಕವನ ಸಂಕಲನ ಮೊನಾಲಿಸಾ – ಅವರ ಪ್ರಧಾನ ಕೃತಿಗಳು. ಹೊಂಗನಸಿನ ಹರಿಕಾರ, ಅಪರೂಪದ ಸಮಾಜ ಸೇವಕ , ಅವರು ಬರೆದ ಜೀವನ ಚರಿತ್ರೆಗಳು.

ವಸಂತಿ ಶೆಟ್ಟಿ ಬ್ರಹ್ಮಾವರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next