ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧ, ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಂಗಳವಾರ ರಾತ್ರಿ ಗಾಜಾಪಟ್ಟಿಯಲ್ಲಿನ ಅಲ್ ಅಹ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ 500 ಪ್ಯಾಲೆಸ್ತೀನಿಯರು ಸಾವಿಗೀಡಾಗಿದ್ದು. ಇಡೀ ಜಗತ್ತೇ ಮರುಕ ವ್ಯಕ್ತಪಡಿಸಿದೆ. ಆರಂಭದಲ್ಲಿ ಇಸ್ರೇಲ್ ನೆಲದಲ್ಲಿ ಹಮಾಸ್ ಉಗ್ರರು ನಡೆಸಿದ ನರಮೇಧ, ಅನಂತರದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದಾಗಿ ಪ್ಯಾಲೆಸ್ತೀನ್‌ನ ಮುಗ್ಧ ಜೀವಗಳು ಬಲಿಯಾಗುತ್ತಲೇ ಇವೆ. ಹಮಾಸ್ ಉಗ್ರರು ಮತ್ತು ಇಸ್ರೇಲ್ ಸೇನೆಯ ದಾಳಿ-ಪ್ರತಿದಾಳಿಯಿಂದಾಗಿ ಯಾವುದೇ ತಪ್ಪಿರದ ಜೀವಗಳು ಹತ್ಯೆಗೀಡಾಗುತ್ತಿರುವುದು ಮಾತ್ರ ಯುದ್ಧದ ಭೀಕರತೆಯನ್ನು ತೋರಿಸುತ್ತಿದೆ.
ಅ.7ರಂದು ಆರಂಭವಾಗಿರುವ ಈ ಯುದ್ಧ, ಈಗ ಇನ್ನೊಂದು ಮಜಲಿಗೆ ತಲುಪಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೇರೆ ಬೇರೆ ದೇಶಗಳು ಈ ಯುದ್ಧದಲ್ಲಿ ಭಾಗಿಯಾಗುವ ಲಕ್ಷಣಗಳೂ ಗೋಚರಿಸುತ್ತಿವೆ. ಮಂಗಳವಾರವಷ್ಟೇ ಇಸ್ರೇಲ್‌ಗೆ ಭೇಟಿ ನೀಡಿದ್ದ ಜರ್ಮನಿಯ ಛಾನ್ಸರ್, ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿ, ನಿಮ್ಮ ಜತೆ ನಾವಿದ್ದೇವೆ ಎಂಬ ಅಭಯ ನೀಡಿ ಬಂದಿದ್ದರು. ಬುಧವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದು, ಇಸ್ರೇಲ್‌ಗೆ ಪೂರ್ಣ ಬೆಂಬಲ ನೀಡುವ ನಿಟ್ಟಿನಲ್ಲಿ ಮಾತನಾಡಿದ್ದಾರೆ.
ಯುದ್ಧದ ಕತೆ ಒಂದು ಕಡೆಯಾದರೆ, ಮತ್ತೂಂದು ಕಡೆ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೇ ಬಾಂಬ್ ದಾಳಿಗೆ ಸಾವನ್ನಪ್ಪುತ್ತಿರುವುದು ದುರಂತ ಕಥೆಯಾಗಿದೆ. ಮಂಗಳವಾರ ರಾತ್ರಿ ಬ್ಯಾಪ್ಟಿಸ್ಟ್ ಆಸ್ಪತ್ರೆ ಮೇಲೆ ದಾಳಿಯಾಗಿದ್ದು, ಈ ಸಂದರ್ಭದಲ್ಲಿ 500 ಪ್ಯಾಲೆಸ್ತೀನಿಯರು ಜೀವತೆತ್ತಿದ್ದಾರೆ. ಈ ಘಟನೆ ಇಡೀ ಜಗತ್ತಿನ ಆಕ್ರೋಶಕ್ಕೂ ಕಾರಣವಾಗಿದೆ.
ಮಂಗಳವಾರ ರಾತ್ರಿಯ ವರದಿಗಳಂತೆ ಈ ದಾಳಿಗೆ ಇಸ್ರೇಲ್ ಸೇನೆ ಕಾರಣ ಎಂದು ಹೇಳಲಾಗಿತ್ತು. ಆದರೆ ಇಸ್ರೇಲ್ ಸರಕಾರ, ಕೆಲವೊಂದು ವೀಡಿಯೋ ಮತ್ತು ಆಡಿಯೋ ಬಿಡುಗಡೆ ಮಾಡಿ, ನಾವು ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ. ಇದಕ್ಕೆ ಬದಲಾಗಿ ಹೊಸದಾಗಿ ಹುಟ್ಟಿಕೊಂಡಿರುವ ಉಗ್ರ ಸಂಘಟನೆಯೊಂದು ಇಸ್ರೇಲ್ ಮೇಲೆ ದಾಳಿ ಮಾಡಲು ಹೋಗಿ, ತನ್ನದೇ ನೆಲದ ಆಸ್ಪತ್ರೆ ಮೇಲೆ ಬಾಂಬ್ ಹಾಕಿದೆ ಎಂದು ಸ್ಪಷ್ಟನೆ ನೀಡಿದೆ. ಇಸ್ರೇಲ್ ಸರಕಾರ ಮತ್ತು ಸೇನೆಯ ಹೇಳಿಕೆಯನ್ನು ಆಧರಿಸಿಯೇ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಪತ್ರೆ ಮೇಲಿನ ದಾಳಿ ಹಿಂದೆ ಬೇರೊಂದು ಗುಂಪಿನ ಕೈವಾಡವಿದೆ ಎಂದು ಹೇಳಿದ್ದಾರೆ.
ಆದರೆ ಇಲ್ಲಿ ವಿಶ್ಲೇಷಣೆಯಾಗಬೇಕಿರುವುದು, ಏನೂ ಅರಿಯದ ಮುಗ್ಧರ ಸಾವು. ಇಲ್ಲಿ ಬಾಂಬ್ ಹಾಕಿದ್ದು ಯಾರೇ ಆಗಿದ್ದರೂ ಅವರು ಶಿಕ್ಷೆಗೆ ಅರ್ಹರು. ಅಂತಾರಾಷ್ಟ್ರೀಯ ಕಾನೂನಿನ ಅಡಿ ಶಿಕ್ಷೆ ಕೊಡಿಸಲೇಬೇಕು. ಜನವಸತಿ ಕೇಂದ್ರಗಳು, ಆಸ್ಪತ್ರೆಗಳು, ಶಾಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುವುದು ಅಕ್ಷ್ಯಮ್ಯ ಅಪರಾಧ. ಯುದ್ಧದ ಹೆಸರಿನಲ್ಲಿ ಮುಗ್ಧರ ಹತ್ಯೆ ಸಲ್ಲದು. ಈ ಬಗ್ಗೆ ತನಿಖೆಯಾಗಲೇಬೇಕಾಗಿದೆ. ಜತೆಗೆ ಈಗಿನ ಯುದ್ಧಕ್ಕೆ ಒಂದು ತಾರ್ಕಿಕ ಅಂತ್ಯ ಕೊಡಿಸಬೇಕಾದುದು ಅಂತಾರಾಷ್ಟ್ರೀಯ ಸಮುದಾಯದ ಕರ್ತವ್ಯವಾಗಿದೆ.