ಕುಂದಾಪುರ: ಸಿಪಿಎಂ ಕಚೇರಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚುವ ಮೂಲಕ ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರ ಅನೇಕ ದಾಖಲೆ ಪತ್ರಗಳನ್ನು ಸುಟ್ಟು ಹಾಕಲಾಗಿದೆ. ಇದರಿಂದ ಬಡ ಜನತೆಯ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಇಂತಹ ಕೃತ್ಯಗಳಿಗೆ ಸಿಪಿಎಂ ಜಗ್ಗುವುದಿಲ್ಲ ಎಂದು ಸಿಪಿಐಎಂ ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ ಹೇಳಿದರು.
ಸಿಪಿಐ(ಎಂ) ಉಳ್ಳಾಲ ಕಚೇರಿಗೆ ದಾಳಿ ನಡೆಸಿರುವುದನ್ನು ಖಂಡಿಸಿ ಕುಂದಾಪುರ ಹಾಗೂ ಬೈಂದೂರು ವಲಯ ಸಮಿತಿ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಆಯೋಜಿಸಿದ್ದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.
ಇಂದು ಗೋಸಾಗಾಟ, ಧರ್ಮ ರಕ್ಷಣೆ ಮುಂತಾದವುಗಳ ಬಗ್ಗೆ ಯುವಕರಲ್ಲಿ ಕೋಮು ವಿಷಬೀಜ ಬಿತ್ತಿ ಅವರನ್ನು ದಾರಿ ತಪ್ಪಿಸುವ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಅನೇಕ ಬಡ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಜೈಲು ಸೇರುತ್ತಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುವಾದವನ್ನು ಮಟ್ಟ ಹಾಕುವ ಉದ್ದೇಶದಿಂದ ಮಂಗಳೂರಿನಲ್ಲಿ ಸಿಪಿಐಎಂ ನೇತೃತ್ವದಲ್ಲಿ ಸೌಹಾರ್ದ ಏಕತಾ ರ್ಯಾಲಿ ನಡೆಯಲಿದೆ. ಯಾವುದೇ ಗೂಂಡಾಗಿರಿಗೆ ನಾವು ಹೆದರುವುದಿಲ್ಲ. ಜೀವದ ಹಂಗು ತೊರೆದು ನಮ್ಮ ಕಾರ್ಯಕರ್ತರು ಈ ರ್ಯಾಲಿಯನ್ನು ಯಶಸ್ವಿಗೊಳಿಸಲಿದ್ದಾರೆ ಎಂದರು.
ಸಭೆಯನ್ನುದ್ದೇಶಿಸಿ ಸಿಪಿಐಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಅನ್ಯಾಯ ದಬ್ಟಾಳಿಕೆ ಸಹಿಸದೆ ಜೀವ ಅಮೂಲ್ಯ ಎಂದು ತಿಳಿದವರು ಎಂದರು.ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಶಂಕರ್ ಮಾತನಾಡಿದರು.
ರಾಜೇಶ ವಡೇರಹೋಬಳಿ ಪ್ರಸ್ತಾಪಿಸಿ ಸ್ವಾಗತಿಸಿದರು. ರವಿ ವಿ.ಎಂ. ವಂದಿಸಿದರು. ಸಿಪಿಐಎಂನ ದಾಸ ಭಂಡಾರಿ, ಅಶೋಕ್ ಹಟ್ಟಿಯಂಗಡಿ, ಸಂತೋಷ ಹೆಮ್ಮಾಡಿ, ರಾಜಾ ಬಿಟಿಆರ್, ಗಣೇಶ್ ಕಲ್ಲಾಗರ ಮಂಜುನಾಥ ಶೋಗನ್ ಮುಂತಾದವರು ಉಪಸ್ಥಿತರಿದ್ದರು.
ಸಭೆಗೆ ಮೊದಲು ಡಿವೈಎಫ್‌ಐ ಬೆಟ್ಟಾಗರ ಕಚೇರಿಯಿಂದ ಹೊರಡಿದ ಬೈಕ್ ರ್ಯಾಲಿಗೆ ರ್ಯಾಲಿಗೆ ಕೆ. ಶಂಕರ್ ಚಾಲನೆ ನೀಡಿದರು. ರ್ಯಾಲಿ ಕುಂದಾಪುರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಶಾಸ್ತ್ರಿ ಸರ್ಕಲ್ ಬಳಿ ಸಮಾಪ್ತಿಗೊಂಡಿತು.