Advertisement

ವೈದ್ಯರ ಮೇಲೆ ಹಲ್ಲೆ ಖಂಡನೀಯ

12:39 AM Jun 15, 2019 | Team Udayavani |

ಪಶ್ಚಿಮ ಬಂಗಾಳದ ಪರಿಸ್ಥಿತಿ ದಿನಕಳೆದಂತೆ ಹದಗೆಡುತ್ತಿರುವುದು ಕಳವಳಕಾರಿ ವಿಚಾರ. ಇದೀಗ ಅಲ್ಲಿನ ವೈದ್ಯರು ಕೂಡಾ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಕಾರಣವಾಗಿರುವುದು ಮಂಗಳವಾರ ಕೋಲ್ಕೋತ್ತದ ಎನ್‌ಆರ್‌ಎಸ್‌ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಮೇಲಾಗಿರುವ ಮಾರಣಾಂತಿಕ ಹಲ್ಲೆ. ಆಸ್ಪತ್ರೆಗೆ ದಾಖಲಾಗಿದ್ದ ವಯೋವೃದ್ಧರೊಬ್ಬರು ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾವಿಗೆ ವೈದ್ಯರ ನಿರ್ಲಕ್ಷ ್ಯ ಕಾರಣ ಎಂದು ಆರೋಪಿಸಿ ಮೃತ ವ್ಯಕ್ತಿಯ ಬಂಧುಗಳು ಇಬ್ಬರು ವೈದ್ಯರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಲಾರಿಗಳಲ್ಲಿ ಜನ ಕರೆತಂದು ವೈದ್ಯರ ಮೇಲೆ ದಾಳಿ ಮಾಡಿರುವುದನ್ನು ನೋಡಿದರೆ ಆ ರಾಜ್ಯದಲ್ಲಿ ಕಾನೂನು ಮತ್ತು ವ್ಯವಸ್ಥೆ ಪಾಲನೆ ಯಾವ ಸ್ಥಿತಿಗೆ ತಲುಪಿದೆ ಎಂದು ಅರಿವಾಗಬಹುದು. ಇದನ್ನು ಪ್ರತಿಭಟಿಸಿ ವೈದ್ಯರು ಮುಷ್ಕರ ಪ್ರಾರಂಭಿಸಿದ್ದಾರೆ. ಆದರೆ ಈ ಮುಷ್ಕರವನ್ನು ಸರಕಾರ ನಿಭಾಯಿಸುತ್ತಿರುವ ರೀತಿ ಮಾತ್ರ ಆಘಾತಕಾರಿಯಾಗಿದೆ. ಇಲ್ಲಿರುವುದು ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾಗಿ ಬಂದ ಸರಕಾರವೋ ಅಥವಾ ಮಮತಾ ಬ್ಯಾನರ್ಜಿಯ ಸರ್ವಾಧಿಕಾರವೋ ಎಂಬ ರೀತಿಯಲ್ಲಿದೆ ಸರಕಾರದ ನಡೆ.

Advertisement

ಹಲ್ಲೆಯಿಂದ ಇಬ್ಬರು ಯುವ ವೈದ್ಯರ ತಲೆಬುರುಡೆ ಒಡೆದಿದ್ದು, ಅವರು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮುಷ್ಕರವನ್ನು ಬಲಪ್ರಯೋಗದಿಂದ ಹತ್ತಿಕ್ಕುವ ಮಮತಾ ಬ್ಯಾನರ್ಜಿಯ ಪ್ರಯತ್ನಗಳೆಲ್ಲ ವಿಫ‌ಲಗೊಂಡು ಇದೀಗ ಮುಷ್ಕರ ರಾಷ್ಟ್ರವ್ಯಾಪಿಯಾಗಿದೆ. ದಿಲ್ಲಿ ಮತ್ತು ಮಹಾರಾಷ್ಟ್ರದ ವೈದ್ಯರು ಕೂಡಾ ಮುಷ್ಕರದಲ್ಲಿ ಸಹಭಾಗಿಗಳಾಗಿದ್ದಾರೆ. ಸೋಮವಾರ ವೈದ್ಯರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಇಂಡಿಯನ್‌ ಮೆಡಿಕಲ್ ಅಸೋಸಿಯೇಶನ್‌ ಕರೆ ನೀಡಿದೆ.

ಮಮತಾ ಬ್ಯಾನರ್ಜಿ ವೈದ್ಯರ ಮುಷ್ಕರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಯಾವ ರೀತಿಯಿಂದಲಾದರೂ ಇದನ್ನು ದಮನಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸರಕಾರ ಮುಷ್ಕರವನ್ನು ಪ್ರತಿಷ್ಠೆಯಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿದ್ದರೂ ಮಮತಾ ಬ್ಯಾನರ್ಜಿ ಅದಕ್ಕೆ ಕವಡೆ ಕಿಮ್ಮತ್ತು ನೀಡಿಲ್ಲ. ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ವೈದ್ಯರ ಮೇಲಾಗಿರುವ ಹಲ್ಲೆಯನ್ನು ಸಹಾನುಭೂತಿಯಿಂದ ಪರಾಮರ್ಶಿಸಬೇಕಿತ್ತು. ತಪ್ಪು ಯಾರದ್ದೇ ಆಗಿದ್ದರೂ ವೈದ್ಯರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ ಎನ್ನುವುದನ್ನು ಅವರು ಜನರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ವೈದ್ಯರ ಪ್ರತಿನಿಧಿಗಳ ಜತೆಗೆ ಮಾತನಾಡಿ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳುವ ಎಲ್ಲ ಆಯ್ಕೆಗಳು ಅವರು ಎದುರು ಇದ್ದವು. ಆದರೆ ಇದ್ಯಾವುದನ್ನೂ ಮಾಡದೆ ಹಲ್ಲೆಯಾಗಿದ್ದೇ ಸರಿ ಎಂದು ನಿರ್ಧರಿಸಿದಂತಿದೆ. ಹಲ್ಲೆ ಮಾಡಿದವರು ಅವರ ಪಕ್ಷದ ಕಾರ್ಯ ಕರ್ತರು ಎಂಬ ಕಾರಣಕ್ಕೆ ಅವರ ಬೆಂಬಲಕ್ಕೆ ನಿಲ್ಲುವುದನ್ನು ಯಾವ ರೀತಿಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ.

ಎಲ್ಲದಕ್ಕೂ ಬಿಜೆಪಿಯನ್ನು ದೂರುವುದು ಮಮತಾ ಬ್ಯಾನರ್ಜಿಗೆ ಅಭ್ಯಾಸವಾಗಿದೆ. ಲೋಕಸಭೆ ಚುನಾವಣೆಯ ಸೋಲಿನ ಆಘಾತದಿಂದ ಹೊರಬರಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ಹತಾಶೆಯ ಪರಮಾವಧಿಯಲ್ಲಿ ಇರುವಂತೆ ವರ್ತಿಸುತ್ತಿರುವ ಅವರು ವೈದ್ಯರ ಪ್ರತಿಭಟನೆಯ ಹಿಂದೆಯೂ ಬಿಜೆಪಿ ಕೈವಾಡವನ್ನು ಅನುಮಾನಿಸುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರು ಹೊರಗಿನಿಂದ ಬಂದವರು ಎನ್ನುವ ಮಮತಾ ಬ್ಯಾನರ್ಜಿಗೆ ಹಲ್ಲೆ ಮಾಡಿದವರು ಯಾರು ಎಂದು ತಿಳಿದಿಲ್ಲವೆ?

ಚುನಾವಣೆಯ ಫ‌ಲಿತಾಂಶ ಘೋಷಣೆಯಾದಂದಿನಿಂದ ಪಶ್ಚಿಮ ಬಂಗಾಳ ನಿತ್ಯ ಧಗಧಗಿಸುತ್ತಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ಹತ್ಯೆ ನಿತ್ಯದ ಸುದ್ದಿ. ಹಿಂಸಾಚಾರವನ್ನು ನಿಯಂತ್ರಿಸಬೇಕಾದ ಸರಕಾರವೇ ಪರೋಕ್ಷವಾಗಿ ಹಿಂಸೆಗೆ ಪ್ರೋತ್ಸಾಹ ನೀಡುತ್ತಿದೆ. ಹಿಂಸೆಯನ್ನು ರಾಜಕೀಯ ಅಸ್ತ್ರವಾಗಿ ಬಳಸುವುದು ಅಪಾಯಕಾರಿ ಆಟ.

Advertisement

ಕಾನೂನು ಮತ್ತು ವ್ಯವಸ್ಥೆ ಪಾಲನೆ ರಾಜ್ಯದ ಜವಾಬ್ದಾರಿಯಾಗಿರುವುದರಿಂದ ಮಮತಾ ಬ್ಯಾನರ್ಜಿ ರಾಜ್ಯದ ಅರಾಜಕತೆಗೆ ಯಾವುದೇ ನೆಪ ಹೇಳುವಂತಿಲ್ಲ. ಇದನ್ನು ಸರಿಪಡಿಸುವುದು ಅವರ ಸಾಂವಿಧಾನಿಕ ಕರ್ತವ್ಯ. ಹಲ್ಲೆ, ಹತ್ಯೆಯಂಥ ಘಟನೆಗಳು ಸಂಭವಿಸಿದಾಗ ಪೊಲೀಸರು ನಿಷ್ಪಕ್ಷಪಾತಿಗಳಾಗಿ ವರ್ತಿಸುತ್ತಿಲ್ಲ ಎಂದು ಸಂತ್ರಸ್ತರು ದೂರುತ್ತಿದ್ದಾರೆ. ಈ ರೀತಿಯ ಭಾವನೆ ಒಟ್ಟಾರೆಯಾಗಿ ಸರಕಾರದ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡುತ್ತದೆ ಎಂಬ ವಿಚಾರವನ್ನು ಮಮತಾ ಬ್ಯಾನರ್ಜಿ ಅರ್ಥ ಮಾಡಿಕೊಳ್ಳಬೇಕು. ವೈದ್ಯರೂ ಸೇರಿದಂತೆ ರಾಜ್ಯದ ಪ್ರಜೆಗಳಿಗೆ ರಕ್ಷಣೆ ನೀಡಬೇಕಾಗಿರುವುದು ಸರಕಾರದ ಜವಾಬ್ದಾರಿ. ಇದರಲ್ಲಿ ರಾಜ್ಯ ಸರಕಾರ ವಿಫ‌ಲಗೊಂಡರೆ ನ್ಯಾಯಾಂಗದ ಮಧ್ಯ ಪ್ರವೇಶ ಅನಿವಾರ್ಯವಾಗಬಹುದು. ಆಡಳಿತ ಮತ್ತು ವಿಪಕ್ಷಗಳು ಈಗಾಗಲೇ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುವುದನ್ನು ಬಿಟ್ಟು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಸಹಕರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next