Advertisement

ಹನ್ನೊಂದು ವರ್ಷದ ಹಿಂದಿನ ಕೊಲೆಯ ಮಾದರಿಯಲ್ಲೇ ಫೋಟೋಗ್ರಾಫ‌ರ್‌ ಹತ್ಯೆ

12:50 AM Nov 27, 2021 | Team Udayavani |

ಪುತ್ತೂರು: ಜಮೀನು ನೋಡಲೆಂದು ಬಂದಿದ್ದ ಮೈಸೂರಿನ ಫೋಟೋಗ್ರಾಫರ್‌ ಜಗದೀಶ್‌ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವನನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಒಟ್ಟು ಸಂಖ್ಯೆ ಐದಕ್ಕೇರಿದೆ

Advertisement

ಹನ್ನೊಂದು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದ ಮಾದರಿಯಲ್ಲೇ ಫೋಟೋಗ್ರಾಫರ್‌ ಹತ್ಯೆ ನಡೆದಿದೆ. ಕೃತ್ಯಕ್ಕೆ ಒಳಸಂಚು ರೂಪಿಸಿದ್ದ ಆರೋಪದಲ್ಲಿ ಬಡಗನ್ನೂರು ಗ್ರಾಮದ ಅಣಿಲೆ ಜಯರಾಜ್‌ ಶೆಟ್ಟಿ (48) ಯನ್ನು ಬಂದಿಸಲಾಗಿದೆ ಎಂದು ಎಸ್‌ಪಿ ಋಷಿಕೇಶ್‌ ಸೋನಾವಣೆ ತಿಳಿಸಿದ್ದಾರೆ. ಈತ 11 ವರ್ಷಗಳ ಹಿಂದೆ ನಡೆದ ಕೊಲೆಯ ಆರೋಪಿಯಾಗಿ ದೋಷಮುಕ್ತಗೊಂಡಿದ್ದ.

ರೌಡಿಶೀಟರ್‌ ಹತ್ಯೆಗೈದಿದ್ದ
ಹನ್ನೊಂದು ವರ್ಷಗಳ ಹಿಂದೆ ಬಡಗನ್ನೂರು ಗ್ರಾಮದ ಅಣಿಲೆಯಲ್ಲಿ ನಡೆದಿದ್ದ ಪುತ್ತೂರು ಕಸಬಾ ಗ್ರಾಮದ ಪಡೀಲು ವಿಜಯನಗರ ಲೇಔಟ್‌ ನಿವಾಸಿ, ರೌಡಿಶೀಟರ್‌ ಉಮೇಶ್‌ ರೈ ಹತ್ಯೆ ಮಾದರಿಯಲ್ಲೇ ಫೋಟೋಗ್ರಾಫರ್‌ ಜಗದೀಶ್‌ ಕೊಲೆ ನಡೆದಿದೆ. ಆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಜಯರಾಜ್‌ ಈ ಕೊಲೆಗೂ ಸೂತ್ರ ಹೆಣೆದಿದ್ದಾನೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಗಳ ಸಾಮ್ಯತೆ
2010ರ ಮಾ. 27ರಂದು ತಿಂಗಳಾಡಿ ಉಮೇಶ್‌ ರೈ ತನ್ನ ಸ್ನೇಹಿತ ಅಣಿಲೆ ಜಯರಾಜ್‌ ಮನೆಯಲ್ಲಿ ಇರುವುದಾಗಿ ದೂರವಾಣಿ ಕರೆ ಮಾಡಿ ಪತ್ನಿಗೆ ತಿಳಿಸಿದ್ದ. ಮಾ. 30ರಂದು ಜಯರಾಜ್‌, ಉಮೇಶ್‌ ರೈ ಪತ್ನಿಗೆ ಕರೆ ಮಾಡಿ ಉಮೇಶ್‌ನನ್ನು ಬೆಳಗಾವಿ ಪೊಲೀಸರು ಕೇಸು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದಿದ್ದ. ಅನಂತರ ಉಮೇಶ್‌ ರೈ ಕಣ್ಮರೆಯಾಗಿದ್ದು, ಪತ್ನಿ ಸಂಪ್ಯ ಠಾಣೆಗೆ ದೂರು ನೀಡಿದ್ದರು. ಆರು ತಿಂಗಳ ಕಾಲ ತನಿಖೆ ನಡೆದರೂ ಉಮೇಶ್‌ ನಾಪತ್ತೆ ಪ್ರಕರಣ ನಿಗೂಢವಾಗಿಯೇ ಉಳಿದಿತ್ತು. ಆದರೆ ಜಯರಾಜ್‌ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಆತ ಒಂದೂವರೆ ತಿಂಗಳಿನಿಂದ ಮನೆಯಲ್ಲಿ ಇರದೆ ಬೆಂಗಳೂರಿನಲ್ಲಿ ಉಳಿದುಕೊಂಡಿರುವುದು ಗೊತ್ತಾಗಿತ್ತು. ಸೆ. 23ರಂದು ಜಯರಾಜ್‌ ಊರಿಗೆ ಬರುತ್ತಿರುವ ಮಾಹಿತಿ ಪಡೆದ ಪೊಲೀಸರು ಅರಿಯಡ್ಕದ ಪಾಪೆಮಜಲು ಬಳಿ ವಶಕ್ಕೆ ಪಡೆದು ವಿಚಾರಿಸಿದಾಗ ಉಮೇಶ್‌ ಹತ್ಯೆಯ ಸಂಚು ಬೆಳಕಿಗೆ ಬಂದಿತ್ತು.

ಉದ್ಯಮಿ ಮುತ್ತಪ್ಪ ರೈ ಹತ್ಯೆಗೆ ಉಮೇಶ್‌ ರೈ ಸ್ಕೆಚ್‌ ಹಾಕಿರುವ ಕಾರಣಕ್ಕೆ ಜಯರಾಜ್‌ ತನ್ನ ಸ್ನೇಹಿತರ ಜತೆಗೂಡಿ ಬಡಗನ್ನೂರು ಗ್ರಾಮದ ಅಣಿಲೆಯ ತನ್ನ ತೋಟದಲ್ಲಿ ಉಮೇಶ್‌ನನ್ನು ಕೊಲೆ ಮಾಡಿ ಮೃತದೇಹವನ್ನು ತೋಟದ ಸಮೀಪ ಹೂತು ಹಾಕಿದ್ದ. ಇದೇ ಮಾದರಿಯಲ್ಲೇ ನ. 18ರಂದು ಪಟ್ಲಡ್ಕದಲ್ಲಿ ಫೋಟೋಗ್ರಾಫರ್‌ ಜಗದೀಶ್‌ ಹತ್ಯೆ ಕೂಡ ನಡೆದಿದ್ದು, ಎರಡಕ್ಕೂ ಸಾಮ್ಯತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಯರಾಜ್‌ ಬಂಧಿತನಾಗಿದ್ದಾನೆ.

Advertisement

ಸುಳ್ಳಾದ ಜೋತಿಷಿ ಭವಿಷ್ಯ!
ಸುಮಾರು 35 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದ ಜಗದೀಶ್‌ ನಾಪತ್ತೆಯಾದ ಅನಂತರ ಪತ್ನಿಯು ಜ್ಯೋತಿಷಿಯೋರ್ವರ ಬಳಿ ವಿಷಯ ತಿಳಿಸಿದ್ದರು. ಜಗದೀಶ್‌ ದಿಗ್ಬಂಧನದಲ್ಲಿದ್ದು, ಬದುಕ್ಕಿದ್ದಾರೆ ಎಂದು ಜೋತಿಷಿ ತಿಳಿಸಿದ್ದರು. ಪಟ್ಲಡ್ಕದ ಘಟನ ಸ್ಥಳಕ್ಕೆ ಬರುವ ಸಮಯದ ತನಕವೂ ಅವರಿಗೆ ಪತಿ ಕೊಲೆಯಾಗಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ. ನಾಪತ್ತೆ ಸಂದರ್ಭ ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಆದರೆ ಜಗದೀಶ್‌ ಪತ್ನಿ ಮಾತ್ರ ಅವರು ಹಾಗೆ ಮಾಡುವವರಲ್ಲ ಎಂದು ಹೇಳಿದ್ದರು. ಆದರೆ ಕೊನೆಗೆ ಬಾಲಕೃಷ್ಣ ಅವರ ಮೇಲಿಟ್ಟಿದ್ದ ನಂಬಿಕೆ ಎರಡೂ ಕೂಡ ಸುಳ್ಳಾಯಿತು.

Advertisement

Udayavani is now on Telegram. Click here to join our channel and stay updated with the latest news.

Next