Advertisement

ಹಳ್ಳಕ್ಕೆ ಕತ್ತೆ ಕಿರುಬ ಬಿದ್ದಂತಾಗಿದೆ ಕಾಂಗ್ರೆಸ್‌ನ ಪರಿಸ್ಥಿತಿ

06:52 AM Jan 19, 2019 | |

ಮೈಸೂರು: ರಾಜ್ಯದ ಇಂದಿನ ರಾಜಕೀಯ ಬೆಳವಣಿಗೆಗಳು ಅಸಹ್ಯ ಹುಟ್ಟಿಸುತ್ತಿದೆ. ಒಳ ಜಗಳಗಳ ನಡುವೆಯೂ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು ಎಂದು ಅಧಿಕಾರ ನಡೆಸುತ್ತಿದ್ದರೆ, ಬಿಜೆಪಿಯವರು ಸಹ ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫ‌ಲರಾಗಿದ್ದಾರೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ವಿಧಾನಸಭಾ ಕ್ಷೇತ್ರಗಳ ಪೈಕಿ 37 ಸ್ಥಾನ ಗೆದ್ದಿರುವ ಜೆಡಿಎಸ್‌ಗೆ ಅಧಿಕಾರ ಕೊಟ್ಟಿರುವುದು ಹೆಬ್ಬುಲಿ ಇರುವ ಹಳ್ಳಕ್ಕೆ ಕತ್ತೆ ಕಿರುಬ ಬಿದ್ದಂತೆ ಆಗಿದೆ ಕಾಂಗ್ರೆಸ್‌ನ ಸ್ಥಿತಿ ಎಂದು ಲೇವಡಿ ಮಾಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಪರಸ್ಪರ ಹೊಂದಾಣಿಕೆಯೇ ಇಲ್ಲ. ಸರ್ಕಾರ ಬೀಳಲ್ಲ ಎಂದು ಹೊರಗೆ ಹೇಳುತ್ತಾರಾದರೂ ಒಳಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಷ್ಟು ಗಲಾಟೆ, ಅಸಮಾಧಾನ, ಅತೃಪ್ತಿ ವ್ಯಕ್ತವಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಏಳು ತಿಂಗಳಾದರೂ ಸಹ ಯಾವುದೇ ಅಭಿವೃದ್ಧಿ ಯೋಜನೆಯನ್ನು ನೀಡಲು ವಿಫ‌ಲವಾಗಿರುವ ಇದನ್ನು ಸರ್ಕಾರವೆಂದು ಹೇಳಲು ಆಗುವುದಿಲ್ಲ ಎಂದು ಕಿಡಿಕಾರಿದರು. 

ಎಲ್ಲಾ ರಾಜಕೀಯ ಪಕ್ಷಗಳ ಹೇಳಿಕೆ, ಪ್ರತಿ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಯಾವ ಪಕ್ಷಗಳ ನಡವಳಿಕೆಯೂ ಸರಿಯಿಲ್ಲ. ನನ್ನ 46 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೀಳು ಮಟ್ಟದ ರಾಜಕೀಯ ಬೆಳವಣಿಗೆಯನ್ನು ಹಿಂದೆಂದೂ ಕಂಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಕುಸಿತದ ಜತೆಗೆ ಮೌಲ್ಯಗಳು ಕಳೆದುಕೊಂಡಂತೆ ಇಂದಿನ ರಾಜಕೀಯ ಬೆಳವಣಿಗೆಗಳು ಜನರಿಗೂ ಬೇಸರ ತರಿಸಿದೆ.

ರಾಜಕಾರಣಿಗಳ ಇಂತಹ ವರ್ತನೆಯಿಂದಾಗಿ ನಾನೂ ಒಬ್ಬ ರಾಜಕಾರಣಿಯಾಗಿದ್ದೆ ಎಂದು ಹೇಳಿಕೊಳ್ಳಲು ನನಗೆ ಮುಜುಗರ ಆಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ರಾಜಕೀಯ ಇಷ್ಟೊಂದು ಕೀಳು ಮಟ್ಟಕ್ಕೆ ಹೋಗಿರುವುದು ವೈಯಕ್ತಿಕವಾಗಿ ನನಗೆ ಬೇಸರ ತಂದಿದೆ ಎಂದು ಹೇಳಿದರು.   
ಅಭ್ಯರ್ಥಿ ಆಯ್ಕೆ: ಚಾಮರಾಜನಗರ ಲೋಕಸಭೆ ಮೀಸಲು ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸೂಕ್ತ ಎಂಬುದನ್ನು ನನ್ನ ಅನುಭವದ ಮೇಲೆ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ಅದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದಾರೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next