Advertisement
ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ತಾಯಿ ಚಾಮುಂಡೇಶ್ವರಿಗೆ ಮುಂಜಾನೆ 3.30ರಿಂದಲೇ ಪಂಚಾಮೃತ ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು.
Related Articles
Advertisement
ಮೋಡ ಆವರಿಸಿದ್ದ ತಣ್ಣನೆ ವಾತಾವರಣ, ಆಷಾಢ ಮಾಸದ ಮೈ ಕೊರೆಯುವ ಗಾಳಿ, ಆಗಾಗ್ಗೆ ಬರುತ್ತಿದ್ದ ತುಂತುರು ಮಳೆಯನ್ನೂ ಲೆಕ್ಕಿಸದೆ ಮಧ್ಯರಾತ್ರಿಯಿಂದಲೇ ಸರದಿ ಸಾಲಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದರು.
ರಾಜ ವಂಶಸ್ಥ ಯದುವೀರ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ನಟ ದರ್ಶನ್, ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತಿತರರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅಪಾರ ಭಕ್ತರು: ಮೊದಲ ಆಷಾಢ ಶುಕ್ರವಾರದ ಪೂಜೆಗೆ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಸಾವಿರಾರು ಭಕ್ತರು ಬೆಳಗಿನ ಜಾವದಿಂದಲೇ ತಾಯಿ ದರ್ಶನಕ್ಕೆ ಮುಗಿಬಿದ್ದರು. ಹೀಗಾಗಿ ಸಂಜೆವರೆಗೆ ಭಕ್ತರು ದರ್ಶನಕ್ಕೆ ಸರದಿ ಸಾಲಿನಲ್ಲಿ ಹೆಚ್ಚು ಸಮಯ ನಿಲ್ಲಬೇಕಾಗಿತ್ತು. ಭಕ್ತರು ಮುಂಜಾನೆ 3 ಗಂಟೆಯಿಂದಲೇ ಬೆಟ್ಟಕ್ಕೆ ಬರಲಾರಂಭಿಸಿದರು.
ಸ್ಥಳೀಯ ನಿವಾಸಿಗಳು ಮೆಟ್ಟಿಲು ಮೂಲಕ ಮಧ್ಯರಾತ್ರಿ 2 ಗಂಟೆಯಿಂದಲೇ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ದರ್ಶನ ಪಡೆದರು. ತಮಿಳುನಾಡು, ಬೆಂಗಳೂರು, ಮಂಡ್ಯ, ಹಾಸನ ಸೇರಿದಂತೆ ಹೊರ ಜಿಲ್ಲೆಗಳಿಂದ ಬಂದ ಭಕ್ತರು ತಮ್ಮ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ನಿಲ್ಲಿಸಿ ಉಚಿತ ಬಸ್‌ಗಳ ಮೂಲಕ ಬೆಟ್ಟಕ್ಕೆ ತೆರಳಿದರು.
ಪ್ರಸಾದ ಸಂತರ್ಪಣೆ: ದೇವಸ್ಥಾನದಲ್ಲಿ ಹೂವಿನ ಅಲಂಕಾರ ಮಾಡಿದ್ದ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದಲೇ ದಾಸೋಹ ಭವನದಲ್ಲಿ ಸುಮಾರು 40 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು.
ಬೆಟ್ಟದ ಬಸ್ ನಿಲ್ದಾಣದ ಬಳಿ ಹರಕೆ ಹೊತ್ತಿದ್ದ ಸಾರ್ವಜನಿಕರು ಆಟೋ ಮತ್ತು ಕಾರುಗಳ ಮೂಲಕ ಭಕ್ತರಿಗೆ ಬಿಸಿಬೇಳೆ ಬಾತ್, ಸಿಹಿ, ಖಾರಾ ಪೊಂಗಲ್, ಕೇಸರಿಬಾತ್ ಹಂಚಿದರು. ಇದಕ್ಕಾಗಿ ದಾಸೋಹ ಭವನದ ನೆಲ ಮಹಡಿಯಲ್ಲಿ 10 ಹಾಗೂ ಮೊದಲ ಮಹಡಿಯಲ್ಲಿ 10 ಕೌಂಟರ್ ತೆರೆಯಲಾಗಿತ್ತು. ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಕಳೆದ 13 ವರ್ಷಗಳಿಂದ ಮೊದಲ ಶುಕ್ರವಾರದಲ್ಲಿ ಪ್ರಸಾದ ವ್ಯವಸ್ಥೆ, 28 ವರ್ಷಗಳಿಂದ ದೇವಸ್ಥಾನದಲ್ಲಿ ಹೂವಿನ ಅಲಂಕಾರ ಮಾಡಲಾಗುತ್ತಿದೆ.
ಸೆಲ್ಫಿಯಲ್ಲಿ ಮುಳುಗಿದ ಭಕ್ತರು: ತಾಯಿ ಚಾಂಮುಂಡಿ ದರ್ಶನ ಪಡೆದ ಅನೇಕ ಭಕ್ತರು ದೇಗುಲದ ಬಳಿಯ ಮಹಿಷಾಸುರ ಪ್ರತಿಮೆ ಮತ್ತು ನಂದಿ ಬೆಟ್ಟದಲ್ಲಿ ಸೆಲ್ಫಿ ತೆಗೆದು ಖುಷಿಪಟ್ಟರು.
ದಾಸೋಹದ ಬಗ್ಗೆ ನಿಗಾ ವಹಿಸಿದ್ದ ಅಧಿಕಾರಿಗಳು: ಭಕ್ತರಿಗೆ ತಯಾರಿಸಿದ ದಾಸೋಹದ ಬಗ್ಗೆ ನಿಗಾವಹಿಸಲಾಗಿತ್ತು. ಪ್ರಸಾದ ವಿನಿಯೋಗಕ್ಕೂ ಮೊದಲು ಜಿಲ್ಲಾ ಆರೋಗ್ಯಾಧಿಕಾರಿ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆ ಮಾಡಿ, ಬಳಿಕವಷ್ಟೇ ಪ್ರಸಾದ ವಿನಿಯೋಗಕ್ಕೆ ಅವಕಾಶ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆ 5.30ಕ್ಕೆ ಪ್ರಾರಂಭವಾದ ಅನ್ನಸಂತರ್ಪಣೆ ರಾತ್ರಿ 7.30 ರವರೆಗೂ ನಡೆಯಿತು. ಮೊಸರನ್ನ, ಪಲಾವ್, ಬಿಸಿಬೇಳೆ ಬಾತ್, ಕೇಸರಿ ಬಾತ್, ಅನ್ನ ಸಾಂಬರ್ ನೀಡಲಾಯಿತು.
ತಾಯಿ ಚಾಮುಂಡೇಶ್ವರಿ ದೇವಿಗೆ ಮುಂಜಾನೆ 3.30ರಿಂದಲೇ ಪಂಚಾಮೃತ ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬೆಳಗ್ಗೆ 5.30 ರಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಮಧ್ಯೆ ಬೆಳಗ್ಗೆ 9.30ಕ್ಕೆ ದೇವಿಗೆ ಮಹಾ ಮಂಗಳಾರತಿ, ಸಂಜೆ 6 ರಿಂದ 7.30ರವರೆಗೆ ಅಭಿಷೇಕ ನಡೆಯಿತು. ಈ ಬಾರಿ ತಾಯಿಗೆ ವಿಶೇಷ ಲಕ್ಷ್ಮೀ ಅಲಂಕಾರ ಮಾಡಲಾಗಿದೆ.-ಡಾ.ಶಶಿಶೇಖರ ದೀಕ್ಷಿತ್, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು