ಬದುಕು ನಿಜಕ್ಕೂ ತುಂಬಾ ಸಿಂಪಲ್. ನಾವೇ ಯಾವ ಯಾವುದೋ ಭ್ರಮೆಗಳನ್ನು ಇಟ್ಟುಕೊಂಡು ಬದುಕನ್ನು ಕಾಂಪ್ಲಿಕೇಟೆಡ್ ಮಾಡಿಕೊಳ್ಳುತ್ತಾ ಹೋಗುತ್ತೇವೆ. ಆ ಭ್ರಮೆಗಳಿಗೆ ಒಂದಲ್ಲಾ ಒಂದು ದಿನ ಫುಲ್ ಸ್ಟಾಪ್ ಬಿದ್ದೇ ಬೀಳುತ್ತದೆ. ಆದರೆ, ಆ ಹೊತ್ತಿಗೆ ಹೊತ್ತು ಮೀರಿರುತ್ತದೆ. ಆ ಹಿನ್ನೆಲೆಯಲ್ಲಿ ಯೋಚಿಸುವುದಾದರೆ, ಲಾಕ್‌ಡೌನ್‌ನಿಂದ ಕಲಿಯಬಹುದಾದ್ದು ಅನೇಕ ವಿಷಯಗಳು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ರೇಸಿಗೆ ಬಿದ್ದವರಂತೆ ಓಡುತ್ತಿದ್ದ ನಮ್ಮೆಲ್ಲರನ್ನೂ ಒಂದು ಕ್ಷಣ ಹಿಡಿದು ನಿಲ್ಲಿಸಿದೆ ಲಾಕ್ ಡೌನ್. ಜೀವನ ಜಂಜಾಟದಲ್ಲಿ ಕಳೆದುಹೋಗುತ್ತಿದ್ದ ಚಿಕ್ಕಪುಟ್ಟ ಖುಷಿಗಳತ್ತ ಮನಸ್ಸು ಹರಿಯುವಂತೆ ಮಾಡಿದೆ.
ಅವೆಲ್ಲಕ್ಕಿಂತ ಹೆಚ್ಚಾಗಿ, ಸರಳವಾಗಿ ಬದುಕುವುದರಿಂದ ಅದೆಷ್ಟು ಪ್ರಯೋಜನವಿದೆ ಎನ್ನುವುದನ್ನೂ ತಿಳಿಸಿಕೊಡುತ್ತಿದೆ. ನಮ್ಮ ಮನೆಯನ್ನು, ಮನವನ್ನು ಸಂಬಂಧಗಳಿಂದ ತುಂಬಿಸಿಕೊಳ್ಳಬೇಕು, ಆಗ ಬಾಳು ಹಸನಾಗುತ್ತದೆ ಎಂದಿದ್ದರು ಹಿರಿಯರು. ಆದರೆ, ನಾವು ಮಾಡಿದ್ದೇನು? ನಮ್ಮ ಮನೆಯನ್ನು ವಸ್ತುಗಳಿಂದ ತುಂಬಿಸಿಕೊಂಡೆವು. ಅಗತ್ಯವಿಲ್ಲದಿದ್ದರೂ ಖರೀದಿಸಿ ಮನೆ ತುಂಬಿಸಿಕೊಂಡೆವು. ಆ ವಸ್ತುಗಳಲ್ಲಿ ನಿಜಕ್ಕೂ ಬೇಕಾದವು ಯಾವುವು, ಬೇಡದವು ಯಾವುವು ಎಂಬುದು ಈಗ ನಮಗೆ ತಿಳಿಯುತ್ತಿದೆ. ಇದನ್ನೇ “ಡಿ-ಕ್ಲಟ್ಟರಿಂಗ್’ ಎನ್ನುತ್ತಾರೆ. ಅಂದರೆ, ಅನಗತ್ಯ ವಸ್ತುಗಳಿಂದ ಮುಕ್ತಗೊಳ್ಳುವುದು.
ಒಂದುವೇಳೆ, ಈ ಕ್ಷಣದಲ್ಲಿ, ಯಾವುದೋ ತುರ್ತಿನ ಮೇಲೆ ಶಾಶ್ವತವಾಗಿ ಊರನ್ನೇ ಬಿಡಬೇಕಾಗಿ ಬಂದರೆ, ನಮ್ಮ ಜೊತೆ ಏನೇನು ಕೊಂಡೊಯ್ಯುವೆವೋ, ಅದಷ್ಟೇ ನಿಜಕ್ಕೂ ಮೂಲಭೂತವಾಗಿ ಬೇಕಾಗಿರುವವು. ಉಳಿದವೆಲ್ಲವೂ, ಕಂಫರ್ಟ್ ಮುಖವಾಡ ತೊಟ್ಟ ವಸ್ತುಗಳಷ್ಟೇ. ಈ ಲಾಕ್‌ಡೌನ್ ದಿನಗಳಲ್ಲಿ, ನಮ್ಮ ಶಾಪಿಂಗ್ ಗೀಳಿಗೆ ಬ್ರೇಕ್ ಬಿದ್ದಿದೆ. ಮನೆಗೆ ಅತ್ಯಂತ ಅಗತ್ಯವಿರುವ ಸಾಮಗ್ರಿಗಳನ್ನಷ್ಟೇ ತರುತ್ತಿದ್ದೇವೆ. ಆ ಮೂಲಕ, ಆಗಾಗ್ಗೆ ಅಂಗಡಿಗೆ ಹೋಗುವುದನ್ನು ತಪ್ಪಿಸಲು ಆದಷ್ಟೂ ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ, ಹಣವನ್ನು ಅಳೆದು ತೂಗಿ ಖರ್ಚು ಮಾಡುತ್ತಿದ್ದೇವೆ. ನಾವೆಲ್ಲರೂ ನಿಜಕ್ಕೂ ಇರಬೇಕಾಗಿದ್ದೇ ಹಾಗೆ. ಮನೆಯಲ್ಲೇ ಇರುವುದರಿಂದ “ವರ್ಕ್ ಫ್ರಂ ಹೋಮ್ ಮಾಡಿದರೂ ದಿನದ ಸಮಯವೆಲ್ಲಾ ನಮ್ಮ ಬಳಿಯೇ ಇರುತ್ತದೆ.
ಹೀಗಾಗಿ, ಮನೆಯ ಇತರೆ ಕೆಲಸಗಳಲ್ಲೂ ಭಾಗಿಯಾಗುವುದು ಸಾಧ್ಯವಾಗಿದೆ. ಕೊಠಡಿ ಸ್ವತ್ಛಗೊಳಿಸುವುದು, ಮಕ್ಕಳ ಆಟಪಾಠಗಳು, ಸಂಗಾತಿ ಜೊತೆ ಅಡುಗೆ ಮನೆಯ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಮತ್ತಿತರೆ ಚಟುವಟಿಕೆಗಳು, ಜೀವನದ ಮತ್ತೂಂದು ಮಗ್ಗುಲನ್ನೇ ಕಾಣಿಸಿವೆ.
-ಹರ್ಷವರ್ಧನ್ ಸುಳ್ಯ