ಉಳ್ಳಾಲ: ಕಲೆಯು ಅಂತರಂಗದ ಶಕ್ತಿಯನ್ನು ಅರಳಿಸುವ ಸಾಮರ್ಥ್ಯವನ್ನು ಹೊಂದಿದೆ. ವಿದ್ಯಾರ್ಥಿಗಳಲ್ಲಿ ಕಲಾತ್ಮಕತೆಯನ್ನು ಬೆಳೆಸಲು ಶಿಕ್ಷಣ ಸಂಸ್ಥೆಗಳು ಶಿಕ್ಷಣದೊಂದಿಗೆ ಕಲೆಗೂ ಆದ್ಯತೆ ನೀಡಬೇಕು. ಇಂತಹ ಕಾರ್ಯಕ್ಕೆ ಸೂರಜ್ ಶಿಕ್ಷಣ ಸಂಸ್ಥೆ ಮುಂದಾಗಿದ್ದು, ಸೂರಜ್ ಕಲಾಸಿರಿಯಂತಹ ಕಾರ್ಯಕ್ರಮ ಇದಕ್ಕೆ ಪ್ರೇರಕ ಶಕ್ತಿಯಾಗಲಿ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಮುಡಿಪುವಿನ ಸೂರಜ್ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ “ಸೂರಜ್ ಕಲಾಸಿರಿ-2017′ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಕೃತಿಯ ಅಂಗ: ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾ ವಿಮರ್ಶಕ ಎ. ಈಶ್ವರಯ್ಯ ಮಾತನಾಡಿ, ಶಿಕ್ಷಣವು ಸಂಸ್ಕೃತಿಯ ಒಂದು ಅಂಗ. ಕಲೆಗಳು ಸಂಸ್ಕೃತಿಯ ಭಾಷೆಯೂ ಹೌದು, ಅದರ ವ್ಯಕ್ತ ಮುಖವೂ ಹೌದು. ಶಿಕ್ಷಣವು ಭದ್ರವಾದ ಒಂದು ಸಂಸ್ಕೃತಿಯ ತಳಹದಿ ಮೇಲೆ ನಿಂತಾಗಲೇ ಅದು ಪರಿಪೂರ್ಣ ಎನಿಸುವುದು ಎಂದರು.
ಕಲೆ ಮತ್ತು ಸಂಸ್ಕೃತಿ ಸಮಸ್ತ ಭಾರತೀಯರಲ್ಲಿ ತಾವೆಲ್ಲ ಒಂದು ಎನ್ನುವ ಭಾವನೆಯನ್ನು ಸೃಷ್ಟಿಸಿದೆ. ಈ ಕಾರಣಕ್ಕಾಗಿ ಭಾವೈಕ್ಯ ಸಾಧನೆಗೆ ಕಲೆಯೂ ಒಂದು ದಾರಿ. ಇಂತಹ ಉತ್ಸವಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲಾಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯ ಮಾಡಬೇಕಾಗಿದೆ. ಸೂರಜ್ ಕಲಾಸಿರಿ ಇದಕ್ಕೆ ಪೂರಕವಾಗಬೇಕು ಎಂದರು.
ಸ್ಮರಣ ಸಂಚಿಕೆ ಬಿಡುಗಡೆ: “ಸುಜ್ಞಾನ’ ಸ್ಮರಣ ಸಂಚಿಕೆಯನ್ನು ಸಚಿವ ಯು.ಟಿ. ಖಾದರ್ ಬಿಡುಗಡೆಗೊಳಿಸಿಮಾತನಾಡಿ, “ಸೂರಜ್ ಕಲಾಸಿರಿ’ ಉತ್ಸವ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸಿದೆ ಎಂದರು.
ಗಣ್ಯರಾದ ವಿಧಾನ ಪರಿಷತ್‌ನ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಗಣ್ಯರಾದ ರಾಮಚಂದ್ರ ಕುಲಕರ್ಣಿ, ನಿರಂಜನ್ ಸಿ. ಜೈನ್, ಚಂದ್ರಹಾಸ್ ಕರ್ಕೇರ, ಮಹಮ್ಮದ್ ಮೋನು, ನವೀನ್ ಪಾದಲ್ಪಾಡಿ, ಶೈಲಜಾ ಮಿತ್ತಕೋಡಿ, ಪ್ರಶಾಂತ್ ಕಾಜವ, ಹೈದರ್ ಪರ್ತಿಪ್ಪಾಡಿ, ಅಂಬರೀಷ್ ರೇವಣರ್, ಹೇಮಲತಾ ರೇವಣರ್, ಪಿಯೂಷ್ ಮೊಂತೆರೋ, ಗೀತಾ ಉಚ್ಚಿಲ್, ಪುಷ್ಕಳ್ ಕುಮಾರ್, ವಿಮಲಾ ಶೆಟ್ಟಿ ಉಪಸ್ಥಿತರಿದ್ದರು. ಸೂರಜ್ ಕಲಾಸಿರಿಯ ಅಧ್ಯಕ್ಷ ಮಂಜುನಾಥ್ ಎಸ್. ರೇವಣರ್ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಲಕ್ಷ್ಮೀಶ್ ಹೆಗಡೆ ಸೋಂದಾ ಪ್ರಸ್ತಾವನೆಗೈದರು. ಜಿ.ಪಂ. ಸದಸ್ಯೆ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ವಂದಿಸಿದರು. ಸಂಘಟನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು.