ಮಂಡ್ಯ: ಹೊರ ರಾಜ್ಯಗಳಿಂದ ಇದುವರೆಗೆ 1400 ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಬಂದವರನ್ನೆಲ್ಲಾ ಕಡ್ಡಾಯವಾಗಿ ಕ್ವಾರಂಟೈನ್ ಮಾಡಿದ್ದು, ಇವರಲ್ಲೇ ಸೋಂಕಿತರೂ ಇದ್ದಾರೆ. ಅವರಿಂದ ಸ್ಥಳೀಯರಿಗೆ ಸೋಂಕು ಹರಡುವ ಸಾಧ್ಯತೆಗಳಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಂಡ್ಯ ಜಿಲ್ಲೆಯ ಅಧಿಕಾರಿಗಳ ಜತೆ ಕೋವಿಡ್-19 ಸಂಬಂಧ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುವುದು ನಿಜ. ಆದರೆ, ಸೋಂಕಿತರೆಲ್ಲ ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗಿರುವವರು. ಅವರಿಂದ ಜಿಲ್ಲೆಯ ಜನರಿಗೆ ಹರಡಲು ಅವಕಾಶವಿಲ್ಲ ಎಂದು ತಿಳಿಸಿದರು.
ಅಗತ್ಯ ಸೌಲಭ್ಯ ಕಲ್ಪಿಸಿ: ಕ್ವಾರಂಟೈನ್ ಆಗಿರುವವರಿಗೆ ಗುಣಮಟ್ಟದ ಊಟ-ತಿಂಡಿ ನೀಡಬೇಕು. ಅಗತ್ಯ ಎಲ್ಲ ಸೌಲಭ್ಯ ಕಡ್ಡಾಯವಾಗಿ ನೀಡಬೇಕು. ಜಿಲ್ಲೆಗೆ ಆಗಮಿಸಲು ಇರುವ ಎಲ್ಲ ಮಾರ್ಗಗಳನ್ನ ಬಂದ್ ಮಾಡಲಾಗಿದೆ. ಈ ಹಿಂದೆ ನೀಡಿದ್ದ ಪಾಸ್ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಬಂದವರನ್ನ ಕಡ್ಡಾಯ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಸೇತು ಆ್ಯಪ್: ಕೋವಿಡ್ -19 ಪತ್ತೆ ಹಚ್ಚಲು ಪರೀಕ್ಷಾ ಸಾಧನ ಕೊರತೆ ಇದ್ದರೆ, ಕ್ವಾರಂಟೈನ್‌ಗೆ ಸ್ಥಳಾವಕಾಶದ ಕೊರತೆ ಇದ್ದರೆ, ಅನುದಾನದ ಅಗತ್ಯ ಇದ್ದರೆ ಕೂಡಲೇ ಗಮನಕ್ಕೆ ತರಬೇಕು. ಆರೋಗ್ಯ ಸೇತು ಆ್ಯಪ್‌ನ್ನು ಸಾರ್ವಜನಿಕರು ಅಳವಡಿಸಿಕೊಳ್ಳಲು ಮಾಹಿತಿ ನೀಡಬೇಕು ಎಂದು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ: ಅಲ್ಲದೆ ಜಿಲ್ಲೆಯಲ್ಲಿ ಈಗಾಗಲೇ ಕ್ವಾರಂಟೈನಲ್ಲಿರುವವರ ಪೈಕಿ 500 ಕ್ಕೂ ಹೆಚ್ಚು ಜನರ ಟೆಸ್ಟ್ ರಿಪೋರ್ಟ್ ಬರಬೇಕಿದೆ. ಇವರಲ್ಲಿ ಪಾಸಿಟೀವ್ ಬಂದವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜನ ಭಯಭೀತರಾಗುವುದು ಬೇಡ ಎಂದು ಸಚಿವರು ಹೇಳಿದರು.