ನೆಲಮಂಗಲ: ಸೋಂಪುರ ಹೋಬಳಿಯ ಕಮಾಲಾಪುರ ಗ್ರಾಮದ ರಾಮಯ್ಯ ಎಂಬ ರೈತನನ್ನು ಬಲಿ ಪಡೆದಿದ್ದ ಸಲಗವನ್ನು ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಬನ್ನೇರುಘಟ್ಟ ಅರಣ್ಯಕ್ಕೆ ಸಾಗಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕಾಟ ನೀಡುತ್ತಿದ್ದ ಒಟ್ಟು ನಾಲ್ಕು ಆನೆಗಳನ್ನು ಸೆರೆ ಹಿಡಿದಂತಾಗಿದೆ.
ಬಂಧನಕ್ಕೊಳಗಾಗಿರುವ ಐರಾವತ ಸೋಂಪುರ ಹೋಬಳಿಯಲ್ಲಿ ಇಬ್ಬರನ್ನು ಮತ್ತು ಗುಬ್ಬಿ ತಾಲೂಕಿನಲ್ಲಿ ಒಬ್ಬರನ್ನು ಸಾಯಿಸಿತ್ತು. ಮೂರು ಮಂದಿ ರೈತರನ್ನು ಬಲಿ ಪಡೆದ ಐರಾವತ ಈಗ ಬಂಧನದಲ್ಲಿದ್ದು ಮಾವುತರಿಂದ ತರಬೇತಿಗೆ ಸಿದ್ಧವಾಗುತ್ತಿದೆ.
ಕಳೆದ ಏಳೆಂಟು ತಿಂಗಳಿಂದಲೂ ಆರು ಕಾಡಾನೆಗಳ ಕಾಟದಿಂದ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿ ಮತ್ತು ತುಮಕೂರು ಹಾಗೂ ಮಾಗಡಿ ತಾಲೂಕಿನಲ್ಲಿ ಭಾರಿ ಅನಾಹುತ ಮತ್ತು ಪ್ರಾಣಹಾನಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಸೆರೆ ಹಿಡಿಯಲು ಐದು ಸಾಕಾನೆಗಳು ಮತ್ತು ಅರಣ್ಯ ಸಿಬ್ಬಂದಿಯೊಂದಿಗೆ ಸೋಂಪುರ ಹೋಬಳಿಯ ಹೊಸಹಳ್ಳಿ ಕೆರೆಯ ಬಳಿ ಕಾರ್ಯಾಚರಣೆ ನಡೆಸುವ ಮೂಲಕ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಗಿದೆ.
ಈಗ ಬಂಧಿಸಿರುವ ಸಲಗವನ್ನು ಬನ್ನೇರುಘಟ್ಟದ ಅರಣ್ಯಕ್ಕೆ ಸಾಗಿಸಿ ಪಳಗಿಸಲಾಗುವುದು. ನಂತರ ಇದೇ ಆನೆಯಿಂದ ಕಾಡಾನೆಗಳ ಸೆರೆಹಿಡಿಲು ಕಾರ್ಯಾಚರಣೆಗೆ ಬಳಸಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಶಿವಣ್ಣ ಉದಯವಾಣಿಗೆ ತಿಳಿಸಿದ್ದಾರೆ. ಅಭಿಮನ್ಯು, ಗಜೇಂದ್ರ, ಭೀಮ, ಹರ್ಷ ಮತ್ತು ದ್ರೋಣ ಎಂಬ ಸಾಕಾನೆಗಳು ಐರಾವತನನ್ನು ಓಡಿಸಿಕೊಂಡು ಬರುತ್ತಿದ್ದಂತೆ ಅರವಳಿಕೆ ತಜ್ಞ ಉಮಾಶಂಕರ್ ಅವರು ಅರವಳಿಕೆ ಚುಚ್ಚುಮದ್ದು ನೀಡಿದರು.
ಬಳಿಕ ಅರ್ಧ ಕಿ.ಮೀ. ದೂರದಲ್ಲಿ ಐರಾವತ ನೆಲಕ್ಕೆ ಬಿದ್ದಿತ್ತು. ನಾಗರಹೊಳೆ ಅಭಯಾರಣ್ಯದಿಂದ ಕಾವಾಡಿಗ ಕರೀಂಸಾಬ್ ನೇತೃತ್ವದ ತಂಡದೊಂದಿದೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕಾರ್ಯಾಚರಣೆಯನ್ನು ಶಿವಣ್ಣ ವಿವರಿಸಿದರು. ಸೋಂಪುರ ಹೋಬಳಿಯಲ್ಲಿ ಸುಮಾರು ಹತ್ತು ವರ್ಷಗಳಿಂದ ಕಾಡಾನೆಗಳು ಕಾಮಾಲಾಪುರ, ಶ್ರೀಪತಿಹಳ್ಳಿ, ದೇವಗಾನಹಳ್ಳಿ, ಬರಗೇನಹಳ್ಳಿ, ಗೌರಾಪುರ, ಕಂಬಾಳು ಗ್ರಾಮಗಳಲ್ಲಿ ಬೆಳೆ ನಾಶ ಮಾಡಿ ರೈತರಿಗೆ ನಷ್ಟ ಉಂಟುಮಾಡಿದ್ದವು.
ಈಗ ಒಂದು ಆನೆಯನ್ನು ಹಿಡಿದಿದ್ದರಿಂದ ರೈತರು ಸ್ವಲ್ಪ ಸಮಾಧಾನ ಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಡಿ.ಎಫ್.ಮಹೇಶ್ಕುಮಾರ್, ತುಮಕೂರು ಅರಣ್ಯಾಧಿಕಾರಿ ದೇವರಾಜಯ್ಯ, ನೆಲಮಂಗಲ ಅರಣ್ಯಾಧಿಕಾರಿ ಸಿದ್ದರಾಜು, ಹರೀಶ್, ಶಿವಣ್ಣ, ಸೇರಿ ಸುಮಾರು 60ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ಡಾಬಸ್ ಪೇಟೆ ಪಿಎಸ್‌ಐ ನವೀನ್‌ಕುಮಾರ್ ಕಾರ್ಯಾಚರಣೆಯಲ್ಲಿದ್ದರು.