ಬೆಂಗಳೂರು: ಇತ್ತೀಚೆಗೆ ಮೈಸೂರು ರಸ್ತೆಯ ದುಬಾಸಿಪಾಳ್ಯ ಬಳಿಯ ತೋಟದ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಸುಂಕದಕಟ್ಟೆ ನಿವಾಸಿ, ಆಟೋ ಚಾಲಕ ವೆಂಕಟರಾಮು ಬಂಧಿತ. ಆರೋಪಿ ಆ.10ರಂದು ಒಂಟಿಯಾಗಿ ವಾಸವಾಗಿದ್ದ ಗೌರಮ್ಮರನ್ನು ಕತ್ತು ಕೊಯ್ದು ಹತ್ಯೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವೆಂಕಟರಾಮು ಆಟೋ ಚಾಲಕನಾಗಿದ್ದು, 13 ವರ್ಷಗಳ ಹಿಂದೆ ಗೌರಮ್ಮರನ್ನು ಪರಿಚಯಿಸಿಕೊಂಡಿದ್ದ. ಅಂದಿನಿಂದ ನೀನು ನನ್ನ ತಾಯಿ ಇದ್ದಂತೆ ಎಂದು ಹೇಳಿ, ಕೆಲವೊಮ್ಮೆ ವೃದ್ಧೆಯ ಮನೆಯಲ್ಲೇ ಊಟ ಮಾಡಿ ತಂಗುತ್ತಿದ್ದ. ಈ ಮಧ್ಯೆ ಗೌರಮ್ಮ ಹಾರೋಹಳ್ಳಿಯ ಬ್ಯಾಂಕ್‌ವೊಂದರಲ್ಲಿ
3.94 ಲಕ್ಷ ರೂ. ಹಣ ಠೇವಣಿ ಇಟ್ಟಿದ್ದರು. ಈ ಬಗ್ಗೆ ತಿಳಿದಿದ್ದ ಆರೋಪಿ, ಕೆಲ ತಿಂಗಳಿಂದ ಮನೆಯಲ್ಲಿ ಕಷ್ಟವಿದೆ ಹಣ ಕೊಡುವಂತೆ ದುಂಬಾಲು ಬಿದ್ದಿದ್ದ. ಆದರೆ, ಗೌರಮ್ಮ ನಿರಾಕರಿಸಿದ್ದರು.
ಹಣ ಸಿಗುವುದಿಲ್ಲ ಎಂದು ಕೊಲೆ: ಆಷಾಡ ಮುಗಿದು ಶ್ರಾವಣದ ಮೊದಲ ವಾರದಲ್ಲಿ ತಮ್ಮ ಪತಿಯ ಊರಾದ ಕನಕಪುರದ ಮನೆಗೆ ಹೋಗಲು ಗೌರಮ್ಮ ತೀರ್ಮಾನಿಸಿದ್ದರು. ಈ ಬಗ್ಗೆ ತಿಳಿದಿದ್ದ ವೆಂಕಟರಾಮು, ಆ.10ರಂದು ಮಧ್ಯಾಹ್ನ ವೃದ್ಧೆಯ ಮನೆಗೆ ಬಂದು ಹಣ ಕೊಡುವಂತೆ ಒತ್ತಾಯಿಸಿದ್ದಾನೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿ, ಈಕೆ ಊರಿಗೆ ಹೋದರೆ ಹಣ ಸಿಗುವುದಿಲ್ಲ. ಇಷ್ಟು ವರ್ಷ ಸಹಾಯಕನಾಗಿ ಸೇವೆ ಮಾಡಿದ್ದು ವರ್ಥವಾಯಿತು ಎಂದು ಭಾವಿಸಿ ಅಲ್ಲೇ ಇದ್ದ ಕುಡುಗೋಲಿನಿಂದ ಆಕೆಯ ಕುತ್ತಿಗೆ ಕೊಯ್ದು ಮನೆ ಬೀಗ ಹಾಕಿಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಾಯಕನಂತೆ ನಟನೆ: ಆ.10ರಂದು ರಾತ್ರಿ 8 ಗಂಟೆ ಸುಮಾರಿಗೆ ಹಸು ನಿರಂತರವಾಗಿ ಕೂಗಿಕೊಳ್ಳುತ್ತಿತ್ತು. ಆದರೂ ಗೌರಮ್ಮ ಮನೆಯಿಂದ ಹೊರಬಂದಿಲ್ಲ. ಇದರಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಕೂಡಲೇ ಆರೋಪಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಏನು ತಿಳಿಯದವನಂತೆ
ಸ್ಥಳಕ್ಕೆ ಬಂದ ಆರೋಪಿ, ಬನಶಂಕರಿಯಲ್ಲಿರುವ ಗೌರಮ್ಮರ ಮೊಮ್ಮಗನಿಗೆ ಕರೆ ಮಾಡಿ, ನಿಮ್ಮ ಅಜ್ಜಿ ಕಾಣಿಸುತ್ತಿಲ್ಲ, ಬಾಗಿಲು ಬೀಗ ಹಾಕಿದೆ. ಕೂಡಲೇ ಬರುವಂತೆ ಹೇಳಿದ್ದ. ಬಳಿಕ ಇಬ್ಬರು ಬಾಗಿಲು ಹೊಡೆದು ನೋಡಿದಾಗ ಗೌರಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಈ ವೇಳೆ ಮೃತ ದೇಹವನ್ನು ನೋಡಿದ ಆರೋಪಿ ಕಣ್ಣಿರು ಸುರಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಆರೋಪಿ ಯಾರೇ ಆದರೂ ಬಂಧಿಸುವಂತೆ ಮನವಿ ಮಾಡಿದ್ದ. ಹೀಗಾಗಿ ಈತನ ಮೇಲೆ ಅನುಮಾನ ಬಂದಿರಲಿಲ್ಲ. ಅನಂತರ ಆರೋಪಿಯ ಬಗ್ಗೆ ಶಂಕೆ ವ್ಯಕ್ತವಾಗಿ ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯಾಂಶ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಪೇಟೆಯ ದೇವರಾಜ್ ಎಂಬುವರಿಗೆ ಸೇರಿದ ತೋಟದಲ್ಲಿ ಸುಮಾರು 40 ವರ್ಷಗಳಿಂದ ಗೌರಮ್ಮ ಮತ್ತು ಇವರ ಪತಿ ವಾಸವಾಗಿದ್ದರು. 15 ವರ್ಷಗಳ ಹಿಂದೆ ಗೌರಮ್ಮ ಪತಿ ಮೃತಪಟ್ಟಿದ್ದಾರೆ. ಹೀಗಾಗಿ ಗೌರಮ್ಮ ಒಬ್ಬರೇ ಇದ್ದು, ಜೀವನ ನಿರ್ವಹಣೆಗಾಗಿ ಹಸು ಸಾಕಾಣಿಕೆ ಮಾಡಿಕೊಂಡಿದ್ದರು. ತೋಟದ ಮಾಲೀಕ ದೇವರಾಜ್ ಕೂಡ ಮಾಸಿಕ ಮೂರು ಸಾವಿರ ರೂ. ಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.