ಬೆಂಗಳೂರು: ಫೇಸ್‌ಬುಕ್ ಮೂಲಕ ಪರಿಚಯವಾದ 15 ವರ್ಷದ ಅಪ್ರಾಪ್ತೆಯನ್ನು ಅಪಹರಣ ಮಾಡಿದ್ದ ಆರೋಪಿಯನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಸೂರ್ಯಪ್ರಕಾಶ್ ರೆಡ್ಡಿ ಬಂಧಿತ ಆರೋಪಿ. ಉದ್ಯಮಿ ಸುಧಾಕರ್ ರೆಡ್ಡಿ ಎಂಬುವವರ ಪುತ್ರಿಯನ್ನು ಯುಬಿ ಸಿಟಿ ಆವರಣದಲ್ಲಿ ಈತ ಅಪಹರಣ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ಸುಧಾಕರ್ ರೆಡ್ಡಿ, ಮಗಳಿಗೆ ಪುಸ್ತಕ ಕೊಡಿಸಲು ಜ.6ರಂದು ಯುಬಿ ಸಿಟಿಗೆ ಕರೆದೊಯ್ದಿದ್ದರು. ಪುಸ್ತಕ ಕೊಡಿಸಿ ಹತ್ತಿರದಲ್ಲೇ ಇರುವ ಮನೆಗೆ ತೆರಳುವಂತೆ ಪುತ್ರಿಗೆ ಸೂಚಿಸಿ ಅವರು ಬೇರೆಡೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಬಂದ ಸುಧಾಕರ್ ರೆಡ್ಡಿ ಮಗಳ ಬಗ್ಗೆ ಪತ್ನಿ ಬಳಿ ವಿಚಾರಿಸಿದ್ದಾರೆ.
ಆಗ ಮಗಳು ಇನ್ನು ಮನೆಗೆ ಬಂದಿಲ್ಲ ಎಂಬುದು ಗೊತ್ತಾಗಿದೆ. ಮಗಳು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗೆ ಹೋಗಿರಬಹುದು ಎಂದು ಎಲ್ಲ ಕಡೆ ಹುಡುಕಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗೆ ಪತ್ರ ಬರದಿದ್ದಳು: ಮಗಳ ಕೊಠಡಿ ಪರಿಶೀಲಿಸಿದಾಗ ಆಕೆ ಸೂರ್ಯಪ್ರಕಾಶ್ ರೆಡ್ಡಿಗೆ ಪತ್ರ ಬರೆದಿರುವುದು ಪತ್ತೆಯಾಗಿತ್ತು. ಅಲ್ಲದೆ ಆಕೆಯ ಮೊಬೈಲ್ ಮನೆಯಲ್ಲೇ ದೊರೆತು ಪರಿಶೀಲಿಸಿದಾಗ ಆತನ ಜತೆ ಅಧಿಕವಾಗಿ ಫೇಸ್‌ಬುಕ್ ಚಾಟ್ ಮಾಡಿರುವುದು ಗೊತ್ತಾಗಿದೆ.
ಕೂಡಲೇ ಸುಧಾಕರ್ ರೆಡ್ಡಿ ಕಬ್ಬನ್‌ಪಾರ್ಕ್ ಪೊಲೀಸರಿಗೆ ದೂರು ನೀಡಿದರು. ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಫೇಸ್‌ಬುಕ್ ಮೂಲಕ ಆರೋಪಿಯ ಮೊಬೈಲ್ ನಂಬರ್ ಪತ್ತೆ ಹಚ್ಚಿ, ಆತನ ಮೊಬೈಲ್ ಟ್ಯಾ†ಕ್ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.