ಬೆಂಗಳೂರು: ಅನಿವಾಸಿ ಭಾರತೀಯರ ಸೋಗಿನಲ್ಲಿ ಹಳೇ ನೋಟುಗಳ ಬದಲಾವಣೆಗೆ ಯತ್ನಿಸಿದ ಮಹಿಳೆಯೊಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರ ಜತೆಗಿದ್ದ ಮತ್ತೂಬ್ಬ ಮಹಿಳೆ ಪರಾರಿಯಾಗಿದ್ದಾರೆ.
ವೈಯಾಲಿಕಾವಲ್ ನಿವಾಸಿ ಕೃಷ್ಣಕುಮಾರಿ (61) ಬಂಧಿತ ಮಹಿಳೆ. ಆಕೆಯಿಂದ 26,54,500 ಹಳೇ ನೋಟುಗಳು (ಅಪಮೌಲ್ಯಗೊಂಡ ಹಳೇ 500 ಮುಖ ಬೆಲೆಯ 14,77,500 ಮತ್ತು ಸಾವಿರ ಮುಖ ಬೆಲೆಯ 11,77,00 ನೋಟುಗಳು) ಪತ್ತೆಯಾಗಿವೆ.
ಮಾ.30ರಂದು ಗಿರಿನಗರದ ವಿವೇಕಾನಂದ ಪಾರ್ಕ್ ಬಳಿ ಹಳೇ ನೋಟುಗಳ ಬದಲಾವಣೆಗೆ ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಕೃಷ್ಣಕುಮಾರಿ ಅವರನ್ನು ಬಂಧಿಸಿದ್ದಾರೆ. ಇದೇ ವೇಳೆ ಮತ್ತೂಬ್ಬ ಮಹಿಳೆ ಚಂದ್ರಮ್ಮ ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷ್ಣಕುಮಾರಿ ಕೆಲ ವರ್ಷಗಳಿಂದ ಗಿರಿನಗರ ವ್ಯಾಪ್ತಿಯಲ್ಲಿ ಕೃಷ್ಣಕುಮಾರಿ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದು, ಪ್ರವಾಸಿ ತಾಣಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. ಮಾ.30ರಂದು ಗಿರಿನಗರದಲ್ಲಿರುವ ವಿವೇಕಾನಂದ ಪಾರ್ಕ್ ಬಳಿ ಐನೂರು ಮತ್ತು ಸಾವಿರ ಮುಖ ಬೆಲೆಯ 26,54,500 ಲಕ್ಷ ಹಣದ ಸಮೇತ ಬಂದು, ತನ್ನ ಸ್ನೇಹಿತೆ ಚಂದ್ರಮ್ಮನಿಗೆ ಬರಲು ಸೂಚಿಸಿದ್ದರು. ಅದರಂತೆ ಸ್ಥಳಕ್ಕೆ ಬಂದ ಚಂದ್ರಮ್ಮ ಪರಿಚಿತ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಹಣದ ವಿಚಾರ ಚರ್ಚಿಸಿದ್ದರು.
“ಹಣದ ಸಮೇತ ಸ್ಥಳಕ್ಕೆ ಬಂದಿದ್ದು, ಕೂಡಲೇ ನೋಟುಗಳ ಬದಲಾವಣೆಗೆ ಎನ್‌ಆರ್‌ಐ ಒಬ್ಬರನ್ನು ಕರೆತನ್ನಿ,” ಎಂದು ವ್ಯಕ್ತಿಗೆ ದೂರವಾಣಿ ಮೂಲಕ ಮನವಿ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಗಿರಿನಗರ ಠಾಣೆ ಇನ್‌ಸ್ಪೆಕ್ಟರ್ ಕೋಟ್ರೇಶಿ ಅವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೃಷ್ಣಕುಮಾರಿ ಅವರನ್ನು ಬಂಧಿಸಿದ್ದಾರೆ.
ಈ ವೇಳೆ ಚಂದ್ರಮ್ಮ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೃಷ್ಣಕುಮಾರಿ ಸದ್ಯ ಜಾಮೀನು ಪಡೆದು ಬಿಡುಗಡೆಯಾಗಿದ್ದು, ವಿಚಾರಣೆಗೆ ಹಾಜರಾಗುಧಿವಂತೆ ಸೂಚಿಸಲಾಗಿದೆ. ಹಾಗೆಯೇ ಚಂದ್ರಮ್ಮನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಎನ್‌ಆರ್‌ಐಗಳ ಪರಿಚಯ ಹೊಂದಿದ್ದ ಮಹಿಳೆ
ಕೃಷ್ಣಕುಮಾರಿಗೆ ಟ್ರಾವೆಲ್ಸ್ ಏಜೆನ್ಸಿ, ಪ್ಯಾಕೇಜ್ ಟ್ರಿಪ್‌ಗ್ಳನ್ನು ಆಯೋಜಿಸುವ ವೃತ್ತಿಯಲ್ಲಿ ತೊಡಗಿರುವುದರಿಂದ ಕೆಲ ಅನಿವಾಸಿ ಭಾರತೀಯರ ಪರಿಚಯವಿತ್ತು. ಹೀಗಾಗಿ, ಕಮಿಷನ್ ಆಧಾರದ ಮೇಲೆ ಹಳೇ ನೋಟುಗಳ ಬದಲಾವಣೆ ಮಾಡಿಕೊಡುವುದಾಗಿ ಹೇಳಿ ಹತ್ತಾರು ಮಂದಿಯಿಂದ ಲಕ್ಷಾಂತರ ರುಪಾಯಿ ಹಣ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.