Advertisement

ಚಿನ್ನಾಭರಣ ಕದ್ದ ಮನೆ ಕೆಲಸದಾಕೆ ಬಂಧನ

06:40 AM Jan 11, 2019 | |

ಬೆಂಗಳೂರು: ಮನೆ ಮಾಲೀಕರ ನಂಬಿಕೆ ಗಳಿಸಿ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದಲ್ಲದೆ, ಅವುಗಳನ್ನು ಅಡಮಾನ ಇಟ್ಟು ಮಕ್ಕಳ ಶಾಲಾ ಶುಲ್ಕ ಪಾವತಿಸಿ, ಪ್ರವಾಸಿ ತಾಣಗಳನ್ನು ಸುತ್ತಿದ ಮನೆಕೆಲಸದಾಕೆ, ಜೀವನ್‌ ಭೀಮಾನಗರ ಪೊಲೀಸರ ಬಲೆಗೆ ಬಿದಿದ್ದಾಳೆ.

Advertisement

ಬೈಯಪ್ಪನಹಳ್ಳಿ ನಿವಾಸಿ ರಾಜೇಶ್ವರಿ (37) (ಹೆಸರು ಬದಲಾಯಿಸಲಾಗಿದೆ) ಬಂಧಿತೆ. ಈಕೆಯಿಂದ 300 ಗ್ರಾಂ. ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಯು ನ್ಯೂ ತಿಪ್ಪಸಂದ್ರದ ನಿವಾಸಿ ಜಾನಕಿ ಎಂಬುವವರ ಮನೆಯಲ್ಲಿ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಳು.

ನ್ಯೂ ತಿಪ್ಪಸಂದ್ರದ ನಿವಾಸಿ ಜಾನಕಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಐದು ವರ್ಷಗಳಿಂದ ರಾಜೇಶ್ವರಿ, ಜಾನಕಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ 2018 ಜೂನ್‌ 3ರಂದು ಬ್ಯಾಂಕಿನ ಲಾಕರ್‌ನಲ್ಲಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಜಾನಕಿ ಅವರು ಮನೆಗೆ ತಂದು ತಮ್ಮ ಕೊಠಡಿಯ ಬೀರುವಿನಲ್ಲಿ ಇರಿಸಿದ್ದರು.

ಚಿಕಿತ್ಸೆಗಾಗಿ ಆಗಾಗ ಆಸ್ಪತ್ರೆಗೆ ಹೋಗುತ್ತಿದ್ದರಿಂದ ಮನೆಯ ಬಾಗಿಲಿಗೆ ಬೀಗ ಹಾಕಿ ಕೀಲಿ ಕೈ ಅನ್ನು ಪಕ್ಕದ ಬಾಡಿಗೆದಾರರ ಕೈಲಿ ಕೊಟ್ಟು ಹೋಗುತ್ತಿದ್ದರು. ಮನೆ ಕೆಲಸಕ್ಕೆಂದು ಬರುತ್ತಿದ್ದ ರಾಜೇಶ್ವರಿ ಕೀಲಿ ಪಡೆದು ಬೀಗ ತೆಗೆದು ಮನೆಯನ್ನು ಸ್ವತ್ಛ ಮಾಡಿ ಹೋಗುತ್ತಿದ್ದಳು.

ಆರೋಗ್ಯ ಸರಿ ಇಲ್ಲದ ಕಾರಣ ಜಾನಕಿ ಅವರು ಮನೆಯಲ್ಲಿದ್ದ ಚಿನ್ನಾಭರಣಗಳ ಬಗ್ಗೆ ಹೆಚ್ಚು ಗಮನ ಹರಿಸಿರಿಲಿಲ್ಲ. ಈ ಮಧ್ಯೆ ಜ.1ರಂದು ಮಧ್ಯಾಹ್ನ ಬೀರು ಪರಿಶೀಲಿಸಿದಾಗ ಚಿನ್ನಾಭರಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಅನುಮಾನಗೊಂಡ ಜಾನಕಿ ಅವರು,

Advertisement

ರಾಜೇಶ್ವರಿ ಮತ್ತು ಇತರೆ ಮನೆ ಕೆಲಸದವರನ್ನು ವಿಚಾರಿಸಿದರೂ ಪ್ರಯೋಜನವಾಗಿಲ್ಲ. ಬಳಿಕ ಕೆಲಸಗಾರರ ಮೇಲೆ ಅನುಮಾನಗೊಂಡು ಜ.2ರಂದು ಜೀವನ್‌ ಭೀಮಾನಗರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿ,  ರಾಜೇಶ್ವರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಕದ್ದ ಹಣದಲ್ಲಿ ಪ್ರವಾಸ: “ಕಳವು ಮಾಡಿದ ಚಿನ್ನಾಭರಣಗಳನ್ನು ಫೈನಾನ್ಸ್‌ ಒಂದರಲ್ಲಿ ಅಡಮಾನ ಇಟ್ಟಿದ್ದು, ಮೂವರು ಮಕ್ಕಳ ಶಾಲಾ ಶುಲ್ಕ ಪಾವತಿಸಿದ್ದೇನೆ. ಜತೆಗೆ ಮನೆಗೆ ಬೇಕಾದ ಫ್ರೀಜ್‌, ವಾಷಿಂಗ್‌ ಮಷೀನ್‌, ಎಲ್‌ಇಡಿ ಟಿವಿ ಸೇರಿ ಇತರೆ ದಿನ ಉಪಯೋಗಿ ವಸ್ತುಗಳನ್ನು ಖರೀದಿಸಿದ್ದೇನೆ ಹಾಗೂ ಆಂಧ್ರಪ್ರದೇಶ, ತಂಜಾವೂರು ಹಾಗೂ ತಮಿಳುನಾಡಿನಲ್ಲಿರುವ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳಿಗೆ ಕುಟುಂಬ ಸಮೇತ ಹೋಗಿ, ಹಣ ವ್ಯಯಿಸಿದ್ದೇನೆ,” ಎಂದು ರಾಜೇಶ್ವರಿ ವಿಚಾರಣೆ ಸಂದರ್ಭದಲ್ಲಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೆಲಸಕ್ಕೆ ಬರುತ್ತಿದ್ದ ರಾಜೇಶ್ವರಿ: 2-3 ತಿಂಗಳ ಹಿಂದೆಯೇ ಕೃತ್ಯವೆಸಗಿದ್ದ ಆರೋಪಿ ರಾಜೇಶ್ವರಿ, ಯಾರಿಗೂ ತಿಳಿಯದಂತೆ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಐಷಾರಾಮಿ ಜೀವನ ನಡೆಸುತ್ತಿದ್ದಳು. ಆದರೂ ತಾನು ಒಡವೆ ಕದ್ದಿರುವ ವಿಚಾರ ಯಾರಿಗೂ ತಿಳಿಯಬಾರದು ಎಂದು ಪ್ರತಿನಿತ್ಯ ಕೆಲಸಕ್ಕೆ ಬರುತ್ತಿದ್ದಳು. ಹೀಗಾಗಿ ಜಾನಕಿ ಅವರಿಗೆ ಆಕೆಯ ಮೇಲೆ ಅನುಮಾನ ಬಂದಿರಲಿಲ್ಲ. ಈ ಮಧ್ಯೆ ಬೀರು ಪರಿಶೀಲಿಸಿದಾಗ ಕಳವು ಆಗಿರುವುದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next