Advertisement

ಮಹಿಳೆಯರ ವಂಚಿಸಿದ್ದ ನಕಲಿ ಸ್ವಾಮಿಯ ಬಂಧನ

12:51 PM Nov 13, 2017 | Team Udayavani |

ಬೆಂಗಳೂರು: ಇತ್ತೀಚೆಗೆ ಸ್ವಾಮೀಜಿ ಸೋಗಿನಲ್ಲಿ ಪಾರ್ಶ್ವವಾಯು ರೋಗ ಗುಣಪಡಿಸುತ್ತೇನೆ ಎಂದು ಮಹಿಳೆಯರ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.  ಬನ್ನೇರುಘಟ್ಟದ ಬಸವಪುರದ ನಿವಾಸಿ ಮುನಾಜೀರ್‌ ಅಹ್ಮದ್‌ (35) ಬಂಧಿತ.

Advertisement

ಬಂಧಿತನಿಂದ 160 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದು, ಈತನ ಬಂಧನದಿಂದ ಬೆಳ್ಳಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 2 ಪ್ರಕರಣಗಳು, ಹನುಮಂತನಗರ, ಸಿದ್ದಾಪುರ ಮತ್ತು ತಿಲಕನಗರ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಇದೇ ಮಾದರಿಯ ಪ್ರಕರಣಗಳು ಪತ್ತೆಯಾಗಿವೆ. ಕಳವು ಮಾಡಿದ್ದ 173 ಗ್ರಾಂ ಚಿನ್ನಾಭರಣವನ್ನು ಆರೋಪಿ ಪ್ರತಿಷ್ಠಿತ ಆಭರಣ ಮಳಿಗೆಗಳಲ್ಲಿ ಅಡವಿಟ್ಟಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ.

ಆರೋಪಿ ನ.6 ರಂದು ಸ್ವಾಮೀಜಿಯ ಸೋಗಿನಲ್ಲಿ ಬಿಟಿಎಂ ಲೇಔಟ್‌ನ ಪುಟ್ಟಮ್ಮ ಹಾಗೂ ಅವರ ಪುತ್ರಿ ರತ್ನಮ್ಮ ಎಂಬುವರ ಮನೆಗೆ ಬಂದು ರತ್ನಮ್ಮ ಅವರ ಪಾರ್ಶ್ವವಾಯು ಗುಣಪಡಿಸುವುದಾಗಿ ನಂಬಿಸಿದ್ದ. ಮನೆಯಲ್ಲಿ ಪೂಜೆ ಮಾಡುವಾಗ ತಾಯಿ, ಮಗಳಿಗೆ ಮತ್ತು ಬರುವ ಔಷಧ ಬೆರೆಸಿದ ತೀರ್ಥ ಕುಡಿಸಿ ತಾಯಿ, ಮಗಳಿಗೆ ಕುಡಿಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮಡಿವಾಳ ಠಾಣೆ ಪೊಲೀಸರು, ಪುಟ್ಟಮ್ಮ ಅವರ ನಿವಾಸದ ಬಳಿ ಇದ್ದ ಶಕ್ತಿ ಮೆಡಿಕಲ್ಸ್ ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಯ ಚಹರೆ ಪತ್ತೆಯಾಗಿತ್ತು.

ವೃದ್ಧೆಯರೇ ಟಾರ್ಗೆಟ್‌: ಆರೋಪಿ ಮುನಾಜೀರ್‌ ಅಹ್ಮದ್‌, ವೃದ್ಧೆಯರನ್ನೇ ಗುರಿಯಾಗಿಸಿಕೊಂಡು ಕೃತ್ಯವೆಸಗುತ್ತಿದ್ದ. ಹನುಮಂತನಗರ, ಸಿದ್ದಾಪುರ, ತಿಲಕನಗರ ಕಡೆ ಓಡಾಡುತ್ತಿದ್ದ ಆರೋಪಿ, ಕೆಲ ಮೆಡಿಕಲ್ಸ್‌ ಸ್ಟೋರ್‌ ಬಳಿ ನಿಂತು ಇಲ್ಲಿಗೆ ಬರುವ ಮಹಿಳೆಯರನ್ನು ಮಾತಿಗೆಳೆದು, ರೋಗಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದ. ನಂತರ ತಾನು ಸ್ವಾಮೀಜಿ, ಇಂತಹ ಕಾಯಿಲೆಯನ್ನು ಪೂಜೆ ಮಾಡಿ ಗುಣಪಡಿಸುತ್ತೇನೆ ಎನ್ನುತ್ತಿದ್ದ.

Advertisement

ಇದನ್ನು ನಂಬಿದ ಮಹಿಳೆಯರ ಮನೆಗೆ ಹೋಗಿ, ಚಿನ್ನಾಭರಣ ದೋಚುತ್ತಿದ್ದ. ಈ ಹಿಂದೆ ಹನುಮಂತನಗರ, ಸಿದ್ದಾಪುರ, ತಿಲಕ್‌ನಗರ ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿಯು ಇಂಥ ಕೃತ್ಯದಲ್ಲಿ ಭಾಗಿಯಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಗಿರವಿಗೆ ಬಂದಾಗ ಬಂಧನ: ಕಳವು ಮಾಡಿದ್ದ ಸರವನ್ನು ಕೆಲ ದಿನಗಳ ಬಳಿಕ ಗಿರಿವಿ ಇಡಲು ಆರೋಪಿ ಚಿನ್ನಾಭರಣ ಮಳಿಗೆಗಳಿಗೆ ಬರುತ್ತಾನೆ ಎಂಬ ಖಚಿತ ಮಾಹಿತಿ ಇತ್ತು. ಹೀಗಾಗಿ ಮಡಿವಾಳ ಠಾಣೆ ವ್ಯಾಪ್ತಿಯ ಎಲ್ಲ ಜ್ಯುವೆಲ್ಲರ್ಸ್‌ ಮತ್ತು ಸಣ್ಣ ಚಿನ್ನಾಭರಣ ಅಂಗಡಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದರು.

ಅದರಂತೆ ಆರೋಪಿ ಚಿನ್ನಾಭರಣ ಅಡವಿಡಲು ಇಲ್ಲಿನ ಜ್ಯುವೆಲ್ಲರ್ಸ್‌ ಮಳಿಗೆಗೆ ಬಂದಾಗ ಬಂಧಿಸಲಾಗಿದೆ ಎಂದು ಅವರು ವಿವರಿಸಿದರು. ಈ ಮೊದಲು ಬೈಕ್‌ ಮತ್ತು ಕಾರುಗಳ ಸೀಟ್‌ ಕವರ್‌ ಹೊಲೆಯುತ್ತಿದ್ದ ಆರೋಪಿ, ಈ ಹಿಂದೆ ತಿಲಕ್‌ನಗರ ಪೊಲೀಸರ ಕಾರಿನ ಸೀಟ್‌ ಕವರ್‌ ಹೊಲೆದು ಕೊಟ್ಟಿದ್ದ ಎಂಬುದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next